*ಸೌಹಾರ್ದತೆಗೆ ಮತ್ತೊಂದು ಹೆಸರೇ ಕುಂಬ್ರ: ಜಂಬೂರಾಜ್ ಮಹಾಜನ್
*ಸ್ವಚ್ಛತೆಯಲ್ಲಿ ಕುಂಬ್ರ ಪೇಟೆ ಜಿಲ್ಲೆಗೆ ಮಾದರಿಯಾಗಲಿ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ನಾನು ಕಂಡಂತೆ ಕುಂಬ್ರದಲ್ಲಿ ಇದುವರೇಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಒಂದು ಸೌಹಾರ್ದತೆಯ ಊರು ಇದ್ದರೆ ಅದು ಕುಂಬ್ರ ಎಂದು ಹೇಳಲು ಖುಷಿ ಆಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಹೇಳಿದರು.
ಅವರು ಫೆ.11 ರಂದು ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ ಎದುರುಭಾಗದಲ್ಲಿ ನಡೆದ ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಇಲ್ಲಿನ ವರ್ತಕರು ಸೇರಿದಂತೆ ಪ್ರತಿಯೊಬ್ಬರು ಪೊಲೀಸರೊಂದಿಗೆ ಉತ್ತಮ ಸಹಕಾರ ಕೊಟ್ಟಿದ್ದೀರಿ ಎಂದ ಮಹಾಜನ್ರವರು, ಸಂಘದ ಹಳೆಯ ತಲೆಮಾರು ನೂತನ ತಂಡಕ್ಕೆ ಮಾರ್ಗದರ್ಶನ ನೀಡುವ ಮೂಲಕ ಜವಬ್ದಾರಿ ವಹಿಸಿಕೊಂಡು ಶಾಂತ ರೀತಿಯಲ್ಲಿ ವ್ಯವಹಾರ ನಡೆಸಿ ಎಂದು ಶುಭಹಾರೈಸಿದರು.
ಸ್ವಚ್ಚತೆಯಲ್ಲಿ ಕುಂಬ್ರ ಪೇಟೆ ಜಿಲ್ಲೆಗೆ ಮಾದರಿಯಾಗಲಿ: ತ್ರಿವೇಣಿ ಪಲ್ಲತ್ತಾರು
ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಹತ್ತಾರು ಸಮಾಜಮುಖಿ ಕೆಲಸಗಳ ಮೂಲಕ ವರ್ತಕ ಸಂಘವು ಒಂದು ಉತ್ತಮ ಸಂಘಟನೆಯಾಗಿ ಕುಂಬ್ರದಲ್ಲಿ ಬೆಳೆದಿದೆ. ಪಂಚಾಯತ್ನ ಪ್ರತಿಯೊಂದು ಕಾರ್ಯಗಳಲ್ಲೂ ಕೂಡ ಸಂಘವು ಸಂಪೂರ್ಣವಾಗಿ ಕೈಜೋಡಿಸಿದೆ. ವಿಶೇಷವಾಗಿ ಸ್ವಚ್ಚತೆಗೆ ಸಂಘವು ಸಹಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಸಂಘದಿಂದ ಒಬ್ಬರನ್ನು ಸ್ವಚ್ಛತಾ ಸೇನಾನಿಯನ್ನು ನೇಮಕ ಮಾಡುವ ಮೂಲಕ ಪೇಟೆಯ ಸ್ವಚ್ಚತೆಯನ್ನು ಕಾಪಾಡುವ ಭರವಸೆಯನ್ನು ಕೂಡ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು. ಪ್ರತಿಯೊಬ್ಬ ವರ್ತಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕುಂಬ್ರ ಪೇಟೆ ಹಾಗೂ ಇಲ್ಲಿನ ವರ್ತಕರು ಸ್ವಚ್ಚತೆಯಲ್ಲಿ ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗುವಂತೆ ಆಗಲಿ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಸೌಹಾರ್ದತೆಗೆ ಕುಂಬ್ರ ತಾಲೂಕಿಗೆ ಮಾದರಿಯಾಗಿದೆ: ವಾಮನ ಪೈ
ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈಯವರು ಮಾತನಾಡಿ, ಕುಂಬ್ರದ ವರ್ತಕರನ್ನು ಹಾಗೂ ಇಲ್ಲಿನ ಜನರನ್ನು ನೋಡಿದಾಗ ನನಗೆ ಬಹಳಷ್ಟು ಖುಷಿ ಆಗುತ್ತದೆ. ಸೌಹಾರ್ದತೆಗೆ ಕುಂಬ್ರ ತಾಲೂಕಿಗೆ ಮಾದರಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದರು. ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುವ ಮೂಲಕ ನಗುಮೊಗದ ಸೇವೆಯೊಂದಿಗೆ ವ್ಯಾಪಾರ ಮಾಡಿ ಎಂದು ಅವರು ಗ್ರಾಹಕರೊಂದಿಗೆ ಯಾವುದೇ ರೀತಿಯ ದಬ್ಬಾಳಿಕೆ ಮಾಡಬೇಡಿ ಎಂದರು.ವರ್ತಕರಿಗೆ ಬಹಳಷ್ಟು ಕಷ್ಟ, ಸವಾಲು ಇದೆ ಆದರೂ ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿದರೆ ವ್ಯಾಪಾರದಿಂದ ಯಶಸ್ಸು ಸಾಧ್ಯವಿದೆ ಎಂದ ವಾಮನ ಪೈಯವರು, ಠಾಣಾಧಿಕಾರಿಗಳ ಬೇಡಿಕೆಯಾಗಿರುವ ಕ್ಯಾಮರಕ್ಕೆ ನಾನು ಕೂಡ ಸಹಾಯ ಮಾಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.
ವರ್ತಕರ ಕೋಟ್ಯಾಂತರ ಜನರಿಗೆ ಉದ್ಯೋಗ ಕೊಟ್ಟವರು: ಸಾದಿಕ್ ಹಾಜಿ
ಮುಖ್ಯ ಅತಿಥಿಗಳಾಗಿ ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಮಹಮ್ಮದ್ ಸಾದಿಕ್ ಹಾಜಿಯವರು ಮಾತನಾಡಿ, ವರ್ತಕರು ಸಾಮಾನ್ಯದವರಲ್ಲ ಇಂದು ದೇಶದಲ್ಲಿ ಕೋಟ್ಯಾಂತರ ಜನರಿಗೆ ಉದ್ಯೋಗ ದೊರಕಿದ್ದರೆ ಅದು ವರ್ತಕರಿಂದ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೃಷಿಕ ಕೂಡ ಒಬ್ಬ ವರ್ತಕನಾಗಿದ್ದಾನೆ ಎಂಬ ವಿಷಯವನ್ನು ಅವರು ಹೇಳಿದರು. ವರ್ತಕರ ಸಂಘದವರು ಮುಂದಿನ 3 ವರ್ಷಕ್ಕೆ ಒಂದು ವಿಷನ್ ಇಟ್ಟುಕೊಳ್ಳಿ, ಜನರಿಗೆ ಪ್ರಯೋಜನವಾಗುವಂತಹ ಕೆಲಸ ಸಂಘದಿಂದ ಆಗಲಿ ಎಂಬ ಕಿವಿ ಮಾತನ್ನು ಅವರು ಈ ಸಂದರ್ಭದಲ್ಲಿ ಹೇಳಿ ಶುಭ ಹಾರೈಸಿದರು.
ನಗುಮೊಗದ ಸೇವೆಯೇ ವ್ಯಾಪಾರದ ಗುಟ್ಟು: ಕೆ.ಅರ್.ಹುಸೈನ್ ದಾರಿಮಿ
ಒಬ್ಬ ವ್ಯಾಪಾರಿಗೆ ಬೇಕಾಗಿರುವುದು ನಗುಮೊಗದಿಂದ ತನ್ನಲ್ಲಿಗೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಆಗಿದೆ. ಒಬ್ಬ ಗ್ರಾಹಕ ಬಂದಾಗ ವ್ಯಾಪಾರಿಯು ಸಿಡುಕು ಮುಖದಿಂದ ಆತ ಹೇಳಿದ ಸಾಮಾಗ್ರಿಗಳನ್ನು ಚೀಟಿಯಲ್ಲಿ ಬರೆದು ಕೆಲಸದವನ ಕೈಕೊಡುವ ಕೆಲಸ ಆದರೆ ಆತ ವ್ಯಾಪಾರದಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ. ತನ್ನಲ್ಲಿಗೆ ಬರುವ ಗ್ರಾಹಕನಿಗೆ ನಗುಮೊಗದಿಂದ ಮಾತನಾಡಿ ಆತನಿಗೆ ಬೇಕಾದ ಸೇವೆಯನ್ನು ನೀಡಿದರೆ ಆತ ವ್ಯಾಪಾರದಲ್ಲಿ ಲಾಭ ಗಳಿಸಲು ಸಾಧ್ಯವಿದೆ ಎಂದರು. ವರ್ತಕರಲ್ಲಿ ಬದಲಾವಣೆ ಆಗಬೇಕು ತನಗೆ ಬರುವ ಲಾಭಾಂಶದಲ್ಲಿ ಒಂದಂಶವನ್ನು ಗ್ರಾಹಕರಿಗೆ ಬೇರೆ ಬೇರೆ ವಿಧದಲ್ಲೂ ಕೊಡುವ ಕೆಲಸ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಅತಿಥಿಗಳಾಗಿದ್ದ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ, ವರ್ತಕರಿಗೆ ವ್ಯಾಪಾರವೇ ಜೀವನ ಆಗಿದೆ. ಈ ನಡುವೆಯೂ ತನ್ನ ವ್ಯಾಪಾರದಿಂದ ಬಂದ ಲಾಭಾಂಶದಲ್ಲಿ ಒಂದಂಶವನ್ನು ಸಮಾಜಕ್ಕೆ ಕೊಡುವ ಮೂಲಕ ಒಳ್ಳೆಯ ವರ್ತಕ ಎನಿಸಿಕೊಳ್ಳುವುದು ಅತೀ ಮುಖ್ಯ ಈ ಕೆಲಸ ಕುಂಬ್ರ ವರ್ತಕರ ಸಂಘದಿಂದ ಆಗಲಿ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರ ಕೆಪಿಎಸ್ ಶಾಲಾ ಶಿಕ್ಷಕಿ ಜೂಲಿಯಾನ ಮಸ್ಕರೇನಸ್ರವರು ಮಾತನಾಡಿ, ಸಂಘವು ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು. ಸಂಘದ ಗೌರವ ಸಲಹೆಗಾರರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಭೂಮಿ ತಾಯಿಯ ಆರಾಧನೆ ಮಾಡುವ ಕೆಡ್ವಸದಂತಹ ದಿನದಂದು ಕುಂಬ್ರ ವರ್ತಕರ ಸಂಘದ ನೂತನ ಪದಾಧಿಕಾರಿಗಳು ಪದ ಸ್ವೀಕಾರ ಮಾಡಿದ್ದಾರೆ. ನಾವೆಲ್ಲರೂ ಭೂಮಿಯ ಆರಾಧಕರಾಗಿದ್ದೇವೆ ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸುವಂತಾಗಲಿ ಪ್ರತಿಯೊಬ್ಬ ವರ್ತಕರು ಸಂಘದೊಂದಿಗೆ ಬೆರೆತು ಸಂಘವನ್ನು ಮುನ್ನಡೆಸಿ ಎಂದು ಹೇಳಿ ಶುಭ ಹಾರೈಸಿದರು.
ಗೌರವ ಸಲಹೆಗಾರ ಪಿ.ಎಂ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ಸಂಘವು ಇಷ್ಟು ಮುಂದುವರಿಯಲು ಮುಖ್ಯ ಕಾರಣ ಸಂಘದೊಳಗಿನ ಒಗ್ಗಟ್ಟು ಆಗಿದೆ. ಜಾತಿ, ಮತ ಬೇಧವಿಲ್ಲದೆ ಪ್ರತಿಯೊಬ್ಬರು ಸಂಘವನ್ನು ಮುನ್ನಡೆಸಿದ್ದಾರೆ. ಮುಂದೆಯೂ ಇದೇ ರೀತಿ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ ಮಾತನಾಡಿ, ಪೊಲೀಸರೊಂದಿಗೆ ಸಂಘವು ಹಿಂದಿನಿಂದಲೇ ಉತ್ತಮ ಸ್ಪಂದನೆಯಲ್ಲಿದೆ. ಈಗಾಗಲೇ ಕುಂಬ್ರಕ್ಕೆ ಪೊಲೀಸ್ ಚೌಕಿ, ಸಿಸಿ ಕ್ಯಾಮರಕ್ಕೆ ಸಹಾಯಧನ, ಟಾರ್ಚ್ ಲೈಟ್ ಕೂಡ ನೀಡಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದರು. ರಫೀಕ್ ಅಲ್ರಾಯರ 2 ವರ್ಷದ ಅಧ್ಯಕ್ಷತೆಯಲ್ಲಿ 23 ಕಾರ್ಯಕ್ರಮಗಳು ನಡೆದಿದೆ. ಮುಂದೆ ನೂತನ ಅಧ್ಯಕ್ಷ ಮಹಮ್ಮದ್ ಪಿ.ಕೆಯವರ ನೇತೃತ್ವದಲ್ಲೂ ಇನ್ನು ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ, ಮುಂದಿನ ದಿನಗಳಲ್ಲಿ 10 ದಿನಕ್ಕೊಮ್ಮೆ ಪೇಟೆಯನ್ನು ಗುಡಿಸುವ ವ್ಯವಸ್ಥೆಯನ್ನು ಸಂಘದಿಂದ ಮಾಡಲಾಗುತ್ತದೆ ಹಾಗೇ ಹುಸೈನ್ ದಾರಿಮಿಯವರು ಸೂಚಿಸಿದ ನೀರಿನ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
![](https://puttur.suddinews.com/wp-content/uploads/2025/02/2-vartaka.jpg)
ನಿಕಟಪೂರ್ವ ಅಧ್ಯಕ್ಷ ಹೊಟೇಲ್ ಉದ್ಯಮಿ ರಫೀಕ್ ಅಲ್ರಾಯರವರು ಮಾತನಾಡಿ, 2 ವರ್ಷಗಳ ಕಾಲ ಸಂಘದ ಸರ್ವರ ಸಹಕಾರ ಪಡೆದುಕೊಂಡು 20 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ ತೃಪ್ತಿ ನನಗಿದೆ. ನನ್ನ ಅವಧಿಯಲ್ಲಿ ನೆನಪಿಡುವಂತಹ ಕಾರ್ಯಕ್ರಮಗಳು ನಡೆದಿದೆ. ಮುಂದೆಯೂ ಇದೇ ರೀತಿ ಮುಂದುವರಿಯಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು. ಪದ ಸ್ವೀಕರಿಸಿದ ನೂತನ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ಮಾತನಾಡಿ, ಎಲ್ಲರ ಸಹಕಾರ ಇದ್ದಾಗಲೇ ಯಾವುದೇ ಕೆಲಸ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘದ ಪ್ರತಿಯೊಬ್ಬರ ಸಹಕಾರವನ್ನು ಬಯಸುತ್ತೇನೆ. ನಾನು ವೇದಿಕೆಯಲ್ಲಿ ನಿಂತು ಮಾತನಾಡುವುದು ಕಡಿಮೆ ಆದರೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇದ್ದರೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿ ಎಲ್ಲರ ಸಹಕಾರ ಕೋರಿ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷರಾದ ರಫೀಕ್ ಅಲ್ರಾಯರವರ ಅವಧಿಯಲ್ಲಿ ಸಹಕಾರ ನೀಡಿದ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಮತ್ತು ಪತ್ರಕರ್ತ ಸಿಶೇ ಕಜೆಮಾರ್ರವರುಗಳಿಗೆ ರಫೀಕ್ ಅಲ್ರಾಯರವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಉಡುಗೊರೆಗಳನ್ನು ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಉಪಸ್ಥಿತರಿದ್ದರು. ಯಕ್ಷಿತ ಪ್ರಾರ್ಥಿಸಿದರು. ವರ್ತಕರ ಸಂಘದ ನೂತನ ಕೋಶಾಧಿಕಾರಿ ರಮೇಶ್ ಆಳ್ವ ಕಲ್ಲಡ್ಕ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸದಾಶಿವ ನಾಯ್ಕ ಶೇಖಮಲೆ, ಜತೆ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್, ಕಾರ್ಯಕಾರಿ ಸಮತಿಯ ಕೆ.ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಎಸ್.ಮಾಧವ ರೈ, ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್, ಶರತ್ ಕುಮಾರ್ ರೈ, ಉದಯ ಆಚಾರ್ಯ ಕೃಷ್ಣನಗರ, ಲಕ್ಷ್ಮಣ ಕೆ, ಅಝರ್ ಷಾ ಕುಂಬ್ರ, ಶುತಿಚಂದ್ರ, ಬಾಲಕೃಷ್ಣ ಪಾಟಾಳಿ, ಹನೀಫ್ ಅತಿಥಿಗಳಿಗೆ ಹೂ ಮತ್ತು ಶಾಲು ನೀಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು.
ಅಪಘಾತ ವಲಯ, ಸಿಸಿ ಕ್ಯಾಮರ ಅಳವಡಿಕೆ ಮನವಿ
ಕುಂಬ್ರವನ್ನು ಅಪಘಾತ ವಲಯ (ಬ್ಲಾಕ್ ಸ್ಪಾಟ್) ಎಂದು ಈಗಾಗಲೇ ಗುರುತಿಸಲಾಗಿದ್ದು ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಠಾಣೆಯ ವತಿಯಿಂದ ೩ ಕಡೆಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದ್ದು ಇದಕ್ಕೆ ಸುಮಾರು 4 ಲಕ್ಷ ರೂ.ಖರ್ಚು ಆಗಲಿದೆ. ಇದಕ್ಕೆ ಕುಂಬ್ರ ವರ್ತಕರ ಸಂಘವು ಕೂಡ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದನೆ ನೀಡಿದ ಸಂಘವು ಸಹಕಾರ ನೀಡುವುದಾಗಿ ಘೋಷಿಸಿತು.
![](https://puttur.suddinews.com/wp-content/uploads/2025/02/3-vartaka-1.jpg)
ಬಿರಿಯಾನಿ ಹಂಚಿ ಸಂಭ್ರಮಾಚರಣೆ
ನೂತನ ಪದಾಧಿಕಾರಿಗಳ ಪದ ಸ್ವೀಕಾರದ ಬಳಿಕ ಸಾರ್ವಜನಿಕವಾಗಿ ಬಿರಿಯಾನಿ ಹಂಚಲಾಯಿತು. ನೂತನ ಅಧ್ಯಕ್ಷ ಪಿ.ಕೆ ಮಹಮ್ಮದ್ ಮತ್ತು ಉಪಾಧ್ಯಕ್ಷ ಸದಾಶಿವ ನಾಯ್ಕ ಶೇಖಮಲೆಯವರ ಪ್ರಾಯೋಜಕತ್ವದಲ್ಲಿ ನೆರೆದ ಜನರಿಗೆ ಬಿರಿಯಾನಿ ಬಾಕ್ಸ್ಗಳನ್ನು ನೀಡಲಾಯಿತು.
“ ನಾನು ಅಧ್ಯಕ್ಷನಾದರೂ ಒಬ್ಬ ಸದಸ್ಯನಂತೆ ನಿಮ್ಮೆಲ್ಲರ ಸಹಕಾರ ನನಗೆ ಅತೀ ಮುಖ್ಯ, ಎಲ್ಲರೂ ಜೊತೆಗೂಡಿ ಕೆಲಸ ಮಾಡುವ, ಕುಂಬ್ರ ವರ್ತಕರ ಸಂಘವನ್ನು ರಾಜ್ಯಕ್ಕೆ ಮಾದರಿ ಸಂಘವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರವನ್ನು ಬಯಸುತ್ತೇನೆ.”
ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ಕುಂಬ್ರ ವರ್ತಕರ ಸಂಘ