ಕಣ್ಣುಮುಚ್ಚಿ ಕುಳಿತ ಇಲಾಖೆ, ಸಾರ್ವಜನಿಕರ ಆಕ್ರೋಶ
ನಿಡ್ಪಳ್ಳಿ: ರೆಂಜದಿಂದ ನಿಡ್ಪಳ್ಳಿ ಬಡಗನ್ನೂರು ಹೋಗುವ ಲೋಕೋಪಯೋಗಿ ಇಲಾಖೆಯ ರಸ್ತೆಯ ಕೂಟೇಲು ಎಂಬಲ್ಲಿಂದ ಕುಕ್ಕುಪುಣಿವರೆಗೆ ಸುಮಾರು ಒಂದು ಕಿ.ಮೀ ರಸ್ತೆಯ ದುರವಸ್ಥೆಯಿಂದ ಮತ್ತು ಅಪಾಯಕಾರಿ ತಿರುವುಗಳಿಂದಾಗಿ ಹೆಚ್ಚಾಗಿ ಅಪಘಾತ ನಡೆಯುತ್ತಲೇ ಇದೆ.
ಇಲ್ಲಿ ಎರಡು ವಾಹನಗಳು ಎದುರಾದರೆ ಸೈಡ್ ಕೊಡಲು ಜಾಗವಿಲ್ಲ.ಇದರಿಂದಾಗಿ ಫೆ.14 ರಂದು ಬೆಳಿಗ್ಗೆ ರೆಂಜ ಕಡೆಯಿಂದ ಬಡಗನ್ನೂರು ಹೋಗುವ ಕಾರು ಮತ್ತು ಬಡಗನ್ನೂರಿನಿಂದ ರೆಂಜ ಕಡೆಗೆ ಹೋಗುವ ಬೈಕ್ ಒಂದರ ನಡುವೆ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯವಾಗಿದೆ. ಆದರೆ ಈ ಅಪಘಾತ ದೊಡ್ಡ ಪ್ರಮಾಣದಲ್ಲಿ ಆಗದೆ ಅಲ್ಪಸ್ವಲ್ಪ ಗೊಂಡು ಅಪಾಯದಿಂದ ಪಾರಾಗಿದ್ದಾರೆ.ಈ ರೀತಿಯ ಘಟನೆಗಳು ಇದೇ ಮೊದಲಲ್ಲ ಎಷ್ಟೋ ಬಾರಿ ಸಂಭವಿಸಿದೆ.ಇದಕ್ಕೆ ಕಾರಣ ಈ ರಸ್ತೆಯ ಅಂಚು ಸುಮಾರು ಒಂದು ಅಡಿಯಷ್ಟು ಆಳವಾಗಿದೆ. ಕಿರಿದಾದ ಡಾಮರು ರಸ್ತೆಯ ಬದಿ ಮಳೆಗಾಲದಲ್ಲಿ ನೀರು ಹರಿದು ಹೊಂಡ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವ ಪ್ರಸಂಗ ಎದುರಾಗುತ್ತಿದೆ.ಸಾರ್ವಜನಿಕರು ಇದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಣ್ಣು ಮುಚ್ಚಿ ಕುಳಿತ ಇಲಾಖೆ ಮತ್ತು ಜನಪ್ರತಿನಿಧಿಗಳು- ಸಾರ್ವಜನಿಕರ ಆಕ್ರೋಶ
ಕಳೆದ ಎರಡು ವರ್ಷದಿಂದ ಒಂದು ಕಿ.ಮೀ ರಸ್ತೆಯ ದುರವಸ್ಥೆಯನ್ನು ಯಾರು ಕೇಳುವವರಿಲ್ಲವೇ.ಇಲ್ಲಿ ಪ್ರತಿದಿನ ಸಣ್ಣ ಸಣ್ಣ ಅಪಘಾತ ಸಂಭವಿಸುತ್ತಲೇ ಇದೆ.ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.ಇನ್ನಾದರೂ ತಕ್ಷಣ ಇದರ ಕಡೆ ಗಮನ ಹರಿಸಿ ರಸ್ತೆ ಅಗಲಗೊಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.