ಅಕ್ಷಯ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ದಿಕ್ಸೂಚಿ-4 ಕಾರ್ಯಕ್ರಮ

0

ವಿದ್ಯಾರ್ಥಿಗಳ ವಿಷಯದ ಆಯ್ಕೆಯು ಧನಾತ್ಮಕತೆ, ಸ್ಪಷ್ಟತೆಯಿರಲಿ-ಸತೀಶ್ ಬಿಳಿನೆಲೆ

ಪುತ್ತೂರು: ಪುತ್ತೂರಿನಲ್ಲಿ ವಿನೂತನ ಪದವಿ ಕೋರ್ಸ್‌ಗಳನ್ನು ಪರಿಚಯಿಸಿ ಶೈಕ್ಷಣಿಕ ಕ್ಷೇತ್ರದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡುತ್ತಿರುವ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಫೆ.16 ರಂದು ಪುತ್ತೂರು ಹಾಗೂ ಪುತ್ತೂರು ಆಸುಪಾಸಿನ ತಾಲೂಕುಗಳ ಪಿಯುಸಿ ವಿದ್ಯಾರ್ಥಿಗಳಿಗೆ ಪಿಯುಸಿ ಬಳಿಕ ಇರುವ ಆಯ್ಕೆ, ವೃತ್ತಿ ಶಿಕ್ಷಣ ಕ್ಷೇತ್ರದ ಪ್ರಾಮುಖ್ಯತೆ ವಿಷಯಗಳ ಸಮಗ್ರ ರೂಪುರೇಷೆಯ ‘ದಿಕ್ಸೂಚಿ-4’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ವಿದ್ಯಾರ್ಥಿಗಳ ವಿಷಯದ ಆಯ್ಕೆಯು ಧನಾತ್ಮಕತೆ, ಸ್ಪಷ್ಟತೆಯಿರಲಿ-ಸತೀಶ್ ಬಿಳಿನೆಲೆ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಮಕುಂಜ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಬಿಳಿನೆಲೆರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ವಿದ್ಯೆ ಹಾಗೂ ವಿವೇಕ ಎರಡೂ ಬೇಕಾಗುತ್ತದೆ. ವಿದ್ಯೆಯನ್ನು ನಾವು ಗಳಿಸುವಂತಹುದು ಆದರೆ ವಿವೇಕವನ್ನು ಬೆಳೆಸುವಂತಹುದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದೆ ಬರಬೇಕಾದರೆ ತನ್ನ ಶಿಕ್ಷಕರ ಹಾಗೂ ಉಪನ್ಯಾಸಕರ ಮಾರ್ಗದರ್ಶನವನ್ನು ಪಡೆದು ಬುದ್ಧಿವಂತರೆನೆಸಿಕೊಳ್ಳಬೇಕು ಅಥವಾ ಜ್ಞಾನರ್ಜನೆಯ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವವರಾಗಬೇಕು ಅಥವಾ ಒಳ್ಳೆಯ ಸ್ನೇಹಿತರ ಸಂಘದಿಂದ ಉತ್ತಮ ಮಾರ್ಗದರ್ಶನ ಪಡೆದುಕೊಳ್ಳುವಂತಾಗಬೇಕಿದೆ ಎಂದ ಅವರು ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಬಹಳ ಆದ್ಯತೆಯಿದ್ದು ಪಿಯುಸಿ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅನನ್ಯ ನಿರ್ಧಾರ ತಳೆಯಬೇಕಾಗಿದೆ. ವಿದ್ಯಾರ್ಥಿಗಳು ತೆಗೆದುಕೊಳ್ಳುವ ವಿಷಯದ ಆಯ್ಕೆಯು ಧನಾತ್ಮಕವಾಗಿರಬೇಕು, ಸ್ಪಷ್ಟತೆಯಿರಬೇಕು ಇದರಿಂದ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಿರಬೇಕು ಎಂದರು.


ಗುರಿ ಮುಟ್ಟಬಲ್ಲೆ ಎಂಬಂತೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಾವುದೇ ವಿಷಯವನ್ನು ಆರಿಸಿ, ಆದರೆ ಆರಿಸಿದ ವಿಷಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಪರೀಕ್ಷಾ ಸಂದರ್ಭ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗದಿರಿ, ಪರೀಕ್ಷೆಯನ್ನು ಗುರಿ ಮುಟ್ಟಬಲ್ಲೆನೆಂಬ ಆತ್ಮವಿಶ್ವಾಸದಿಂದ ಧೈರ್ಯದಿಂದ ಎದುರಿಸಿ. ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸುವುದು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಎಲ್ಲವನ್ನೂ ಖುಶಿಯಿಂದ ಎದುರಿಸಿ. ಪರೀಕ್ಷಾ ಸಂದರ್ಭ ಮೊಬೈಲ್‌ನಿಂದ ಸ್ವಲ್ಪ ದೂರವಿರಿ, ಅಗತ್ಯವಿದ್ದರೆ ಮಾತ್ರ ಮೊಬೈಲನ್ನು ಬಳಸಿ. ಮುಂದಿನ ನಿಮ್ಮ ಉಜ್ವಲ ಭವಿಷ್ಯಕ್ಕೆ ವೃತ್ತಿಪರ ಕೋರ್ಸ್‌ಗಳು ನಮ್ಮ ಸಂಸ್ಥೆಯಲ್ಲಿದ್ದು, ನಮ್ಮ ಸಂಸ್ಥೆಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಪಡೆದುಕೊಂಡು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ ಎಂದರು.
ಕಾಲೇಜು ಆಡಳಿತ ಮಂಡಳಿ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಢಳಿತಾಧಿಕಾರಿ ಅರ್ಪಿತ್ ಟಿ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಬಿಸಿಎ ವಿದ್ಯಾರ್ಥಿಗಳಾದ ಸಂಜನಾ ಹಾಗೂ ಜಶ್ಮಿತಾ ಪ್ರಾರ್ಥಿಸಿದರು. ಕಾಲೇಜು ಉಪ ಪ್ರಾಂಶುಪಾಲ ರಕ್ಷಣ್ ಟಿ ಸ್ವಾಗತಿಸಿ, ಫ್ಯಾಷನ್ ಡಿಸೈನಿಂಗ್ ಉಪನ್ಯಾಸಕಿ ಜನಿತ ವಂದಿಸಿದರು. ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು.



ಕಾರ್ಯಾಗಾರ/ಕಿಟ್ ವಿತರಣೆ..
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಅತ್ತ್ಯುತ್ತಮವಾಗಿ ಪರೀಕ್ಷೆಯಲ್ಲಿ ಉತ್ತರಿಸುವ ಬಗ್ಗೆ, ಪರೀಕ್ಷೆಯಲ್ಲಿ ಸಮಯದ ನಿರ್ವಹಣೆ, ಅತ್ತ್ಯುತ್ತಮ ಅಂಕ ಗಳಿಸುವಲ್ಲಿ ಬೇಕಾದ ಪೂರ್ವ ಸಿದ್ಧತೆ, ವಿಷಯವನ್ನು ಮನನ ಮಾಡಿಕೊಳ್ಳುವ ವಿಧಾನಗಳನ್ನು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ರಾಮಕುಂಜ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಬಿಳಿನೆಲೆರವರು ಪವರ್ ಪಾಯಿಂಟ್ ಮುಖೇನ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು. ಜೊತೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿಯ ಕಿಟ್ ಅನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here