ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಯನ್ನು ಅಟ್ಯಾಕ್ ಮಾಡಿ: ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್
ಪ್ರತೀ ಬೂತ್ ನಲ್ಲಿ ಯುವಕರ ತಂಡ,ಮಹಿಳೆಯರ ತಂಡವನ್ನು ಕಟ್ಟಬೇಕು- ಶಾಸಕ ಅಶೋಕ್ ರೈ
ಮಂಗಳೂರು: ದ ಕ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಪ್ರಥಮ ಸಭೆಯು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಯುವಕರೇ ಕಾಂಗ್ರೆಸ್ ಪಕ್ಷದ ಫೌಂಡೇಶನ್ ಆಗಿದ್ದು, ಯುವಕರೇ ಮುಂದೆ ಪಕ್ಷವನ್ನು ಕಟ್ಟಬೇಕಾಗಿದೆ.ಪಕ್ಷದಲ್ಲಿ ಶಿಸ್ತು ಪಾಲನೆ ಅತೀ ಮುಖ್ಯವಾಗಿದೆ. ಈ ಹಿಂದೆ ಇದ್ದ ಜೋಶ್ ಮತ್ತೆ ಕಾಂಗ್ರೆಸ್ಸಿಗರಲ್ಲಿ ಮೂಡಿಬರುವಂತೆ ಮಾಡಬೇಕಿದೆ ಎಂದು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡುವ ಮೂಲಕ ನಾಯಕರಾಗಬೇಕು. ಪಕ್ಷದ ತತ್ವ ಸಿದ್ದಾಂತದ ಮೇಲೆ ನಾವು ಮುಂದುವರೆಯಬೇಕು.ಬೂತ್ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ ಪಕ್ಷ ಬೆಳೆಯುವಂತೆ ಮಾಡಬೇಕು.ಯುವ ಕಾಂಗ್ರೆಸ್ ಪದಾಧಿಕಾರಿಗಳಾದವರು ದಿನದಲ್ಲಿ ಕನಿಷ್ಟ ಮೂರು ಗಂಟೆ ಪಕ್ಷಕ್ಕಾಗಿ ಕೆಲಸ ಮಾಡಬೇಕು, ಪಕ್ಷದ ವೃದ್ದಿಗಾಗಿ ಏನೆಲ್ಲಾ ಯುವಕರಿಂದ ಮಾಡಬಹುದೋ ಅದೆಲ್ಲವನ್ನೂ ಮಾಡಬೇಕು,ಕ್ರೀಡಾಕೂಟವನ್ನು ಸೇರಿದಂತೆ ವಿವಿಧ ಪಂದ್ಯಾವಳಿ ಆಯೋಜಿಸಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಮಾಡಬೇಕು ಎಂದ ಅವರು ನಾಯಕರ ಹಿಂದೆ ಸುತ್ತಾಡುವುದನ್ನು ಕಡಿಮೆ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಿ ಮುಂದೆ ಜಿಲ್ಲೆಯಲ್ಲಿ ಹಿಂದಿನಗಿಂತ ವೈಭವ ಮರಳಿ ತರುವಲ್ಲಿ ಯುವ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಜನರ ಹಿತ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿ ತಂದಿದೆ ಇದು ಪ್ರತೀ ಮನೆಗೂ ಮುಟ್ಟಿದೆ ಇದೆಲ್ಲವನ್ನೂ ಜನರ ಬಳಿ ಹೇಳುವ ಮೂಲಕ ಯುವ ಪೀಳಿಗೆಯನ್ನು ಕಾಂಗ್ರೆಸ್ ನತ್ತ ಸೆಳೆಯಬೇಕು ಎಂದು ಹೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಯನ್ನು ಅಟ್ಯಾಕ್ ಮಾಡಿ:
ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಸುಳ್ಳು ಹೇಳುತ್ತಲೇ ಅಧಿಕಾರ ನಡೆಸುತ್ತಿದೆ. ಇಂದು ದೇಶದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಜನತೆಗೆ ತಿಳಿಸಿ ಬಿಜೆಪಿ ಮೇಲೆ ಅಟ್ಯಾಕ್ ಮಾಡಬೇಕು ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಹಾಗಿದ್ದಲ್ಲಿ ಮಾತ್ರ ಮುಂದೆ ದ ಕ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಬಲ ವೃದ್ದಿಯಾಗಲು ಸಾಧ್ಯವಾಗುತ್ತದೆ. ಪ್ರತೀ ಬೂತ್ ನಲ್ಲಿ ಯುವಕರ ತಂಡ,ಮಹಿಳೆಯರ ತಂಡವನ್ನು ಕಟ್ಟಬೇಕು. ಜಿಲ್ಲೆಯಲ್ಲಿ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆಯನ್ನು ಮತ್ತಷ್ಟು ಬಲಯುತವಾಗಿಸಬೇಕು. ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳೂ ಪ್ರತೀ ದಿನ ತನ್ನ ಕಾರ್ಯವ್ಯಾಪ್ತಿಯ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಪದ್ಮರಾಜ್ ಆರ್ ಪೂಜಾರಿ, ಇನಾಯತ್ ಆಲಿ , ಪುತ್ತೂರು ಬ್ಲಾಕ್ ಅಧ್ಯಕ್ಷ ಕೆಪಿ ಆಳ್ವ, ಇಬ್ರಾಹಿಂ ಕೋಡಿಜಾಲ್, ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಸ್ವಾಗತಿಸಿದರು. ಉಪಾಧ್ಯಕ್ಷ ಸಂಶುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.