ಪುತ್ತೂರು:ಕಳೆದ 20 ವರ್ಷಗಳಿಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಗೀತ, ಭರತನಾಟ್ಯ ಕಲಾವಿದರನ್ನು ಪುತ್ತೂರಿಗೆ ಪರಿಚಯಿಸಿ ಅವರ ಮೂಲಕ ಸಾಂಸ್ಕೃತಿಕ ರಸದೌತನ ಉಣ ಬಡಿಸುತ್ತಿರುವ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್& ರಿಸರ್ಚ್ ಸೆಂಟರ್‌ನ ಎಸ್‌ಡಿಪಿ ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮದ 21ನೇ ವರ್ಷದ ಕಾರ್ಯಕ್ರಮಗಳು ಫೆ.22ರಿಂದ ಪ್ರಾರಂಭಗೊಂಡು 24ರ ತನಕ ಪರ್ಲಡ್ಕದಲ್ಲಿರುವ ಸಂಸ್ಥೆಯ ಆವರಣದಲ್ಲಿ ಸಂಭ್ರಮಿಸಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ಬಡಗು ತೆಂಕು ಯಕ್ಷಗಾನಗಳ ಶ್ರೇಷ್ಠ ಕಲಾವಿದರು ಕಲೋಪಾಸನಾ ವೇದಿಕೆಯಲ್ಲಿ ಮೂಡಿ ಬಂದಿರುವುದು ಪುತ್ತೂರು ಮತ್ತು ಸುತ್ತ ಮುತ್ತಲಿನ ತಾಲೂಕಿನ ಕಲಾಶ್ರೋತೃಗಳ ನೆನಪಿನಲ್ಲಿ ಉಳಿದಿದೆ. ಈ ವರ್ಷವೂ ಉತ್ತಮ ಕಾರ್ಯಕ್ರಮ ಮೂಡಿ ಬರಲಿದೆ. ಕಲಾ ಸಂಭ್ರಮದ ಮೊದಲ ದಿನವಾದ ಫೆ.22ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪಾಣಾಜೆ ಸುಬೋಧ ಹೈಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಕೃಷ್ಣಭಟ್ ಪಿಲಿಂಗಲ್ಲು ಅವರು ಉದ್ಘಾಟಿಸಲಿದ್ದಾರೆ. ಬಳಿಕ ಚೆನ್ನೈಯ ರಂಜನಿ ಮತ್ತು ಗಾಯತ್ರಿ ಸಹೋದರಿಯರ ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅವರಿಗೆ ವಯಲಿನ್‌ನಲ್ಲಿ ಎಲ್ ರಾಮಕೃಷ್ಣನ್, ಮೃದಂಗದಲ್ಲಿ ದಿಲ್ಲಿ ಸಾಯಿರಾಮ್, ಘಟಂನಲ್ಲಿ ವಝಪಿನಲ್ಲಿ ಕೃಷ್ಣಕುಮಾರ್ ಸಹಕರಿಸಲಿದ್ದಾರೆ.
ಫೆ. 23ಕ್ಕೆ ಸಂಜೆ ಗಂಟೆ 6.30ಕ್ಕೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ಶ್ರೀಕೃಷ್ಣ ಪಾರಿಜಾತ – ನರಕಾಸುರ ವಧೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ. 24ರಂದು ಸಂಜೆ ಗಂಟೆ 6.30ಕ್ಕೆ ಶ್ರೀ ಹನುಮಗಿರಿ ಮೇಳದವರಿಂದ ಸಾಕೇತ ಸಾಮ್ರಾಜ್ಞಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಉಚಿತ ಪ್ರವೇಶವಾಗಿದ್ದು ಎಲ್ಲರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಡಾ.ಹರಿಕೃಷ್ಣ ಪಾಣಾಜೆ ಅವರ ಪುತ್ರ ಡಾ. ಕೇದಾರಕೃಷ್ಣ ಪಾಣಾಜೆ ಅವರು ಉಪಸ್ಥಿತರಿದ್ದರು.