ಪುತ್ತೂರು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಎಂಬಲ್ಲಿ ಎದೆನೋವಿಗೆ ಔಷಧಬೇಕೆಂದು ಹೇಳಿ ಆಯುರ್ವೇದ ಅಂಗಡಿಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಕರಿಮಣಿಯನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಪುತ್ತೂರು ತಾಲೂಕಿನ ಕುಂಜೂರು ಪಂಜ ನಿವಾಸಿ ಶಂಸುದ್ದೀನ್ ಅಸ್ಕರ್ ಅಲಿ(28.ವ), ಪುತ್ತೂರು ಬನ್ನೂರು ನಿವಾಸಿ ನೌಷಾದ್ ಬಿ.ಎ(37.ವ ) ಬಂಧಿತ ಆರೋಪಿಗಳು. ಬದಿಯಡ್ಕ ಪೊಲೀಸರು ಇವರನ್ನು ಫೆ.20 ರಂದು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಜ. 11 ರಂದು ಸಂಜೆ ನೀರ್ಚಾಲು ಮೇಲಿನ ಪೇಟೆಯಲ್ಲಿ ಈ ಘಟನೆ ನಡೆದಿದೆ. ಜೇನುಮೂಲೆ ದಿ. ಡಾ.ಶಂಕರನಾರಾಯಣ ಭಟ್ಟರ ಪತ್ನಿ ಸರೋಜಿನಿ ಎಸ್.ಎನ್.ಅವರ ಮಾಲಕತ್ವದಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್ ನಲ್ಲಿ ಕಳವು ನಡೆದಿದೆ. ಬೈಕ್ ನಲ್ಲಿ ಇಬ್ಬರು ಯುವಕರು ಆಗಮಿಸಿದ್ದು, ಒಬ್ಬ ಬೈಕಿನಲ್ಲೇ ಉಳಿದು ಇನ್ನೊಬ್ಬ ಮೆಡಿಕಲ್ ಒಳಗೆ ಪ್ರವೇಶಿಸಿ ಎದೆ ನೋವಿಗೆ ಔಷಧ ಬೇಕೆಂದು ಕೇಳಿದನೆನ್ನಲಾಗಿದೆ. ಔಷಧಿ ನೀಡುವ ಮದ್ಯೆ ಯುವಕ ಸರೋಜಿನಿ ಅವರ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಕರಿಮಣಿ ಎಗರಿಸಿ ಬೈಕ್ ಹತ್ತಿದ್ದು ಅನಂತರ ಇಬ್ಬರೂ ಪರಾರಿಯಾಗಿದ್ದಾರೆ.
ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದರು. ವಿವಿಧ ಸಿಸಿ ಟಿ.ವಿ ಕ್ಯಾಮರಾ, ಸೈಬರ್ ಮೂಲಕವೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳವುಗೈದ ಆಭರಣವನ್ನು ಮಂಗಳೂರಿನ ಚಿನ್ನದಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು ವಶ ಪಡಿಸಲಾಗಿದೆ. ಕಾಸರಗೋಡು ಡಿವೈಎಸ್ಪಿ ಸುನಿಲ್ಕುಮಾರ್ ಅವರ ಆದೇಶದಂತೆ ಬದಿಯಡ್ಕ ಸಿ.ಐ.ಸುಬೀರ್, ಎಸ್.ಐ.ನಿಖಿಲ್, ಇತರರಾದ ಮುಹಮ್ಮದ್, ಪ್ರಸಾದ್, ಶ್ರೀನೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.