ಉಪ್ಪಿನಂಗಡಿ:ನಾಡಗೀತೆ ಮುಗಿದು ಗ್ರಾಮ ಸಭೆ ಆರಂಭವಾಗುತ್ತಿದ್ದಂತೆಯೇ ನಮಗೆ ಶುದ್ಧ ಕುಡಿಯುವ ನೀರು ಕೊಡಿ. ನಮ್ಮ ಬೇಡಿಕೆ ಯಾವಾಗ ಈಡೇರಿಸುತ್ತೀರಿ ಎಂದು ಮಾತು ಕೊಟ್ಟ ಬಳಿಕವೇ ಗ್ರಾಮ ಸಭೆ ಆರಂಭಿಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಲುಷಿತ ನೀರಿರುವ ಬಾಟಲಿಗಳು ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಗ್ರಾಮಸ್ಥರಾದ ಶಬೀರ್ ಅಹಮ್ಮದ್, ಅಸ್ಕರ್ ಅಲಿ, ಅನಿ ಮಿನೇಜಸ್, ಎಂ.ಎಸ್. ರಫೀಕ್ ಸೇರಿದಂತೆ ಇತರ ಗ್ರಾಮಸ್ಥರು, 34 ನೆಕ್ಕಿಲಾಡಿಯ ಎರಡು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ನೀರನ್ನು ಕುಡಿದು ಆರೋಗ್ಯ ಹದಗೆಟ್ಟಲ್ಲಿ ಅದಕ್ಕೆ ಗ್ರಾ.ಪಂ. ಹೊಣೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಲಿಖಿತವಾಗಿ ತಿಳಿಸಿದೆ. ಆದರೂ ನೀವು ಇನ್ನೆಷ್ಟು ದಿನ ಈ ಕಲುಷಿತ ನೀರನ್ನು ನಮಗೆ ಕುಡಿಸುತ್ತೀರಿ ಎಂದರು.
ಗ್ರಾಮಸ್ಥ ಶಬೀರ್ ಅಹಮ್ಮದ್ ಮಾತನಾಡಿ, ಬಹುಗ್ರಾಮ ಕುಡಿಯುವ ಯೋಜನೆಯ ಕಾರ್ಯಪಾಲಕ ಅಭಿಯಂತರರಿಗೆ ನಾವು ಮನವಿ ಮಾಡಿದ್ದಕ್ಕೆ ಅವರು ಉತ್ತಮವಾಗಿ ಸ್ಪಂದಿಸಿದ್ದು, ಬಹುಗ್ರಾಮ ಕುಡಿಯುವ ನೀರು ಕಾಮಗಾರಿ ಪೂರ್ಣಗೊಳ್ಳುವಲ್ಲಿಯವರೆಗೆ ನೆಕ್ಕಿಲಾಡಿ ಗ್ರಾಮಕ್ಕೆ ತಾತ್ಕಾಲಿಕವಾಗಿ ಪುತ್ತೂರು ನಗರ ಸಭಾ ವ್ಯಾಪ್ತಿಗೆ ಪೂರೈಕೆಯಾಗುವ ಜಲಸಿರಿ ಯೋಜನೆಯ ಶುದ್ಧ ಕುಡಿಯುವ ನೀರನ್ನು ನೀಡುವಂತೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ. ಜಲಸಿರಿ ಯೋಜನೆಯ ನೀರಿನ ಸಂಪರ್ಕ ಕೊಡಿಸಲು ಸಹಕಾರವಾಗುವಂತೆ ಒಂದು ವರ್ಷದ ನಂತರ ನಡೆಸಬೇಕಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನು ಈಗಲೇ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಸಲು ಮುಂದಾಗಿದ್ದಾರೆ. ಆದರೆ ಆ ಪೈಪ್‌ಲೈನ್ ಕಾಮಗಾರಿ ನಡೆಯುವಾಗ ಅವರಿಗೆ ಗ್ರಾ.ಪಂ.ನಿಂದ ಸಹಕಾರ ಸಿಕ್ಕಿಲ್ಲ ಎಂದು ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು ತೆರಳಿದರು. ಶುದ್ಧ ಕುಡಿಯುವ ನೀರಿನ್ನು ಗ್ರಾಮಸ್ಥರಿಗೆ ನೀಡಲು ಗ್ರಾ.ಪಂ. ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಅಸ್ಕರ್ ಅಲಿ ಮಾತನಾಡಿ, ಗ್ರಾಮಸ್ಥರೇ ಜಲಸಿರಿ ನೀರಿಗಾಗಿ ಇದ್ದೆಲ್ಲಾ ಇಲಾಖೆಗಳಿಗೆ ಓಡಾಡಿ, ಅಲ್ಲಿ ಕೆಲಸ ಮಾಡಿಸಿಕೊಂಡು ಗ್ರಾ.ಪಂ.ಗೆ ನೆರವಾಗುತ್ತಿರುವಾಗ ಗ್ರಾ.ಪಂ. ಅಷ್ಟು ಆಸಕ್ತಿಯಿಲ್ಲವೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷೆ ಸುಜಾತ ರೈ, ನಾವು ನಿರಾಸಕ್ತಿ ತೋರಿಲ್ಲ. ನಗರಸಭೆಯವರು ಈಗ ನೀಡಿರುವ ದರ ನಮಗೆ ಹೊರೆಯಾಗಿದೆ. ಅದರ ಪರಿಷ್ಕರಣೆಗೆ ನಾವು ಮನವಿ ಮಾಡಿದ್ದೇವೆ. ಹಾಗಾಗಿ ಇದು ವಿಳಂಬವಾಯಿತು ಎಂದು ತಿಳಿಸಿದರು. ಗ್ರಾ.ಪಂ. ನಾಲ್ಕು ಕಡೆ ಕೊಳವೆ ಬಾವಿ ಕೊರೆಸಲು ತಲಾ ೧.೫೦ಲಕ್ಷದಷ್ಟು ಇಟ್ಟಿದೆ. ಅದರ ದುರಸ್ತಿಗೆಂದು ನಾಲ್ಕು ಕಡೆಗಳಿಗೆ ತಲಾ ೧.೯೫ರಷ್ಟು ಇಟ್ಟಿದೆ. ಇದು ಇಡುವ ಬದಲು ಇಡೀ ಗ್ರಾಮಕ್ಕೆ ಜಲಸಿರಿಯ ಶುದ್ಧ ಕುಡಿಯುವ ನೀರು ಒದಗಿಸಬಹುದಿತ್ತು ಎಂದರು. ಈ ಬಗ್ಗೆ ಸುಮಾರು ಅರ್ಧಗಂಟೆಗಿಂತಲೂ ಹೆಚ್ಚು ಚರ್ಚೆಯಾಗಿ ಕೊನೆಗೇ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಮಾತನಾಡಿ, ನಗರ ಸಭೆಯವರಲ್ಲಿ ಮಾತನಾಡಿ ೧೫ ದಿನಗಳೊಳಗೆ ಶುದ್ಧ ಕುಡಿಯುವ ನೀರು ನೀಡಲು ಕ್ರಮ ವಹಿಸಲಾಗುವುದು ಎನ್ನುವ ಮೂಲಕ ಈ ಪ್ರಕರಣಕ್ಕೆ ತೆರೆ ಎಳೆದರು.
ಗಡುವು ತಪ್ಪಿದರೆ ಪಶು ಆಹಾರ ಪಂಚಾಯತ್‌ಗೆ: ಗ್ರಾಮಸ್ಥ ರಾಜೇಶ್ ಮಾತನಾಡಿ, ೩೪ ನೆಕ್ಕಿಲಾಡಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಳೆದ ೩೫ ವರ್ಷದಿಂದಲೂ ಗ್ರಾ.ಪಂ.ನ ವಾಣಿಜ್ಯ ಕಟ್ಟಡದಲ್ಲಿ ಎರಡು ಕೋಣೆಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿತ್ತು. ಅದರಲ್ಲಿ ಒಂದು ಕೋಣೆಯಲ್ಲಿ ನಾವು ಹಾಲು ಸಂಗ್ರಹ ಹಾಗೂ ಇನ್ನೊಂದು ಕೋಣೆಯಲ್ಲಿ ಪಶು ಆಹಾರ ದಾಸ್ತಾನು ಮಾಡುತ್ತಿದ್ದೆವು. ಆದರೆ ಈಗಿನ ಆಡಳಿತ ಬಂದ ಬಳಿಕ ನಮ್ಮಲ್ಲಿದ್ದ ಒಂದು ಕೋಣೆಯನ್ನು ಏಲಂ ಮಾಡಲಾಯಿತು. ಏಲಂನಲ್ಲಿ ಕೋಣೆಗಳನ್ನು ಪಡೆದುಕೊಳ್ಳುವಷ್ಟು ನಮ್ಮ ಸಂಘ ಆರ್ಥಿಕವಾಗಿ ಬಲಾಢ್ಯವಿಲ್ಲ. ಹಾಲು ಉತ್ಪಾದಕರ ಸಂಘವು ರೈತರ ಪರ ಇರುವಂತದ್ದು. ಈಗ ಆ ಕೋಣೆ ಮತ್ತೆ ಏಲಂ ಆಗದೇ ಖಾಲಿಯಿದ್ದು, ಅದನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಬಾಡಿಗೆಗೆ ನೀಡುವಂತೆ ಕೇಳಿದರು. ಇದಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಉತ್ತರಿಸಿ, ಈಗ ವಿಎ ಕಚೇರಿ ಗ್ರಾ.ಪಂ.ನ ಸಭಾಂಗಣದಲ್ಲಿದೆ. ಈ ಸಭಾಂಗಣದ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಂದಿದೆ. ಆದ್ದರಿಂದ ಇಲ್ಲಿ ಕಾಮಗಾರಿ ನಡೆಯುವಾಗ ವಿಎ ಕಚೇರಿಯನ್ನು ಗ್ರಾ.ಪಂ.ನ ವಾಣಿಜ್ಯ ಕಟ್ಟಡದಲ್ಲಿ ಖಾಲಿ ಇರುವ ಕೋಣೆಗೆ ಸ್ಥಳಾಂತರಿಸಬೇಕಾಗುತ್ತದೆ. ಆದ್ದರಿಂದ ಅದನ್ನು ಹಾಲು ಉತ್ಪಾದಕರ ಸಂಘಕ್ಕೆ ನೀಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಅನಿ ಮಿನೇಜಸ್, ಗ್ರಾ.ಪಂ.ನ ಆವರಣದಲ್ಲಿ ಸುಸ್ಥಿತಿಯಲ್ಲಿದ್ದ ಗ್ರಂಥಾಲಯದ ಕಟ್ಟಡವೊಂದಿತ್ತು. ಅದರಲ್ಲಿ ಈ ಹಿಂದೆ ಗ್ರಾಮ ಆಡಳಿತಾಧಿಕಾರಿಯವರ ಕಚೇರಿಯೂ ಇತ್ತು. ನಿಮ್ಮ ಆಡಳಿತ ಬಂದ ಕೂಡಲೇ ಅಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವ ಯೋಜನೆ ಮಾಡಿ ಹಿಂದೆ ಇದ್ದ ಕಟ್ಟಡವನ್ನು ಕೆಡವಿದ್ದೀರಿ. ಆದಾಗಿ ಸುಮಾರು ಮೂರು ವರ್ಷವಾದರೂ ಅಲ್ಲಿ ಕಟ್ಟಡಕ್ಕೆ ಪಂಚಾಂಗ ಕೂಡಾ ಬಿದ್ದಿಲ್ಲ. ಇದ್ದ ವ್ಯವಸ್ಥೆಯನ್ನು ನೀವೇ ಹಾಳು ಮಾಡಿದ್ದೀರಿ ಎಂದರು. ಗ್ರಾಮಸ್ಥ ರೂಪೇಶ್ ರೈ ಮಾತನಾಡಿ, ಹಾಲು ಉತ್ಪಾದಕರ ಸಂಘವೆಂದರೆ ಅದು ರೈತರಿಗಾಗಿ ಇರುವಂತದ್ದು. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗ ಸಂಘವು ಹಾಲು ಸಂಗ್ರಹ ಮಾಡುವ ಪಕ್ಕದಲ್ಲಿರುವ ಕೊಠಡಿಯನ್ನು ಸಂಘಕ್ಕೆ ಪಶು ಆಹಾರ ದಾಸ್ತಾನಿಗೆಂದು ತಿಂಗಳ ಬಾಡಿಗೆಯಲ್ಲಿ ನೀಡಬೇಕು ಎಂದರು. ಈ ಬಗ್ಗೆ ಚರ್ಚೆಯಾಗಿ ಒಂದು ತಿಂಗಳೊಳಗೆ ಸಭಾಂಗಣದ ಕಾಮಗಾರಿ ಮುಗಿಯಲಿದೆ. ಆ ಬಳಿಕ ಅಷ್ಟರವರೆಗೆ ಆ ಕೊಠಡಿಯನ್ನು ಗ್ರಾಮ ಆಡಳಿತಾಧಿಕಾರಿಯವರ ಕಚೇರಿಗೆ ನೀಡಿ, ಬಳಿಕ ಅದನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಹಾಲು ಉತ್ಪಾದಕರ ಸಂಘಕ್ಕೆ ಬಿಟ್ಟುಕೊಡಲಾಗುವುದು ಎಂದು ನಿರ್ಣಯಿಸಲಾಯಿತು. ಒಂದು ತಿಂಗಳ ಗಡುವು ತಪ್ಪಿದ್ದಲ್ಲಿ ಗ್ರಾ.ಪಂ. ಕಚೇರಿಯಲ್ಲೇ ಹಾಲು ಉತ್ಪಾದಕರ ಸಂಘದ ಪರವಾಗಿ ನಿಂತು ನಾವೆಲ್ಲರೂ ಪಶು ಆಹಾರವನ್ನು ದಾಸ್ತಾನು ಮಾಡುತ್ತೇವೆ ಎಂದು ರೂಪೇಶ್ ರೈ ಸಹಿತ ಇತರ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ತೆರಿಗೆ ಪಡೆದರೂ ನೀರು ಕೊಡುತ್ತಿಲ್ಲ:
ಬೇರಿಕೆ ಎಂಬಲ್ಲಿ ವಾಸವಾಗಿರುವ ಕೆಲವರು ಕಳೆದ ೫ ವರ್ಷದಿಂದ ನೀರಿನ ಸಮಸ್ಯೆ ಅನುಭವಿಸಿಕೊಂಡು ಬರತ್ತಿದ್ದಾರೆ. ಆದರೂ ಅವರಿಗೆ ನೀರಿನ ಸಂಪರ್ಕ ಕೊಡಲು ಗ್ರಾ.ಪಂ. ಮುಂದಾಗುತ್ತಿಲ್ಲ ಎಂದು ಜೇಮ್ಸ್ ಎಂಬವರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಆ ಜಾಗವನ್ನು ಮಾರಾಟ ಮಾಡಿರುವ ಜಾಗದ ಮಾಲಕರು ಗ್ರಾ.ಪಂ.ಗೆ ರಸ್ತೆಯನ್ನು ಬರೆದುಕೊಡಬೇಕು. ಇಲ್ಲದಿದ್ದಲ್ಲಿ ನೀರಿನ ಸಂಪರ್ಕ ನೀಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಗಂಭೀರವಾಗಿಯೇ ಮಾತನಾಡಿದ ಅಸ್ಕರ್ ಅಲಿ, ಆ ಜಾಗವನ್ನು ಅದರ ಮಾಲಕರು ಲೇ ಔಟ್ ಮಾಡಿ ಮಾರಾಟ ಮಾಡಿದ್ದಾರೆ. ೯/೧೧ ಕೂಡಾ ಆಗಿದೆ. ಅಲ್ಲಿ ಮನೆ ಕಟ್ಟಿದವರು ಗ್ರಾ.ಪಂ.ಗೆ ಮನೆ ತೆರಿಗೆಯನ್ನೂ ಕಟ್ಟುತ್ತಿದ್ದಾರೆ. ೯/೧೧ ಮಾಡುವಾಗ ೧೦೦ ರೂ.ನ ಸ್ಟ್ಯಾಂಪ್ ಪೇಪರ್ ಇಟ್ಟು ಅಪಿಧಾವಿತ್ ಕೂಡಾ ಗ್ರಾ.ಪಂ. ಮಾಡುತ್ತದೆ. ಅದರಲ್ಲಿ ಎಲ್ಲಾ ಕಂಡಿಷನ್‌ಗಳಿವೆ. ಲೇಔಟ್ ಮಾಡುವಾಗ ರಸ್ತೆ, ಚರಂಡಿಯೂ ಬರುತ್ತದೆ. ಹೀಗಿರುವಾಗ ಜಾಗ ಮಾರಿದವರು ಇನ್ನೂ ಗ್ರಾ.ಪಂ.ಗೆ ರಸ್ತೆಯನ್ನು ಬರೆದುಕೊಡಬೇಕೆಂಬುದರಲ್ಲಿ ಅರ್ಥವಿಲ್ಲ. ನೀವು ಸುಮ್ಮನೇ ಸತಾಯಿಸಬೇಡಿ. ಅವರಿಗೆ ಮೂಲಭೂತ ಸೌಕರ್ಯವಾದ ನೀರಿನ ಸಂಪರ್ಕವನ್ನು ನೀಡಲು ತಕ್ಷಣವೇ ಕ್ರಮ ಕೈಗೊಳ್ಳಿ ಎಂದರು. ಇದಕ್ಕೆ ಅನಿ ಮಿನೇಜಸ್, ರೂಪೇಶ್ ರೈ ಧನಿಗೂಡಿಸಿದರು. ಬಳಿಕ ಈ ಬಗ್ಗೆ ಕ್ರಮ ವಹಿಸಲು ನಿರ್ಣಯ ಬರೆದುಕೊಳ್ಳಲಾಯಿತು.
ಸಿಕ್ಕಿ ಸಿಕ್ಕ ಆಕ್ಷೇಪಗಳನ್ನು ಪರಿಗಣಿಸಬೇಡಿ:
ಗ್ರಾಮಸ್ಥ ಚಂದ್ರಹಾಸ ಶೆಟ್ಟಿ ಮಾತನಾಡಿ, ನನ್ನ ಕೃಷಿ ಭೂಮಿಯಲ್ಲಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪತ್ರ ನೀಡಲು ಗ್ರಾ.ಪಂ.ಗೆ ಅರ್ಜಿ ಕೊಟ್ಟಿದ್ದೆ. ಆದರೆ ಅದನ್ನು ಗ್ರಾ.ಪಂ. ತಡೆಹಿಡಿದಿದೆ ಎಂದರು. ಇದಕ್ಕೆ ಪಿಡಿಒ ದೇವಪ್ಪ ನಾಯ್ಕ ಉತ್ತರಿಸಿ, ಅರ್ಜಿಯನ್ನು ತಡೆಹಿಡಿದಿಲ್ಲ. ಆ ಅರ್ಜಿಗೆ ಆಕ್ಷೇಪವಿದೆ. ಆ ಜಾಗದ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಸೂಕ್ತ ಮಾರ್ಗದರ್ಶನಕ್ಕಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಬರೆಯಲಾಗಿದೆ ಎಂದರು. ಆಗ ಅನಿ ಮಿನೇಜಸ್ ಮಾತನಾಡಿ, ಯಾರಾದರೂ ಆಕ್ಷೇಪ ಕೊಟ್ಟದೆಂದು ಅರ್ಜಿಯನ್ನು ವಿಲೇವಾರಿ ಮಾಡದೇ ಪೆಂಡಿಂಗ್ ಇಡುವುದು ಎಷ್ಟು ಸರಿ. ಇಲ್ಲಿ ಕಡತವೊಂದನ್ನು ವಿಲೇವಾರಿ ಮಾಡುವುದಕ್ಕೆ ಗ್ರಾ.ಪಂ.ನ ಕೆಲವು ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಕ್ಷೇಪವಿಟ್ಟಿದ್ದರೂ, ನೀವು ಆ ಕಡತವನ್ನು ವಿಲೇವಾರಿ ಮಾಡಿ ಕೊಟ್ಟಿದ್ದೀರಿ. ಅದಕ್ಕೆ ನನ್ನಲ್ಲಿ ದಾಖಲೆ ಇದೆ. ಅದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರಲ್ಲದೇ, ಆಕ್ಷೇಪದಲ್ಲಿ ಆ ಜಾಗದ ಪ್ರಕರಣ ನ್ಯಾಯಾಲಯದಲ್ಲಿರುವುದಕ್ಕೆ ಏನಾದರೂ ದಾಖಲೆ ಇದೆಯಾ ಎಂದು ಪ್ರಶ್ನಿಸಿದರು. ಆಗ ಪಿಡಿಒ ಇಲ್ಲ ಎಂದು ಉತ್ತರಿಸಿದರು. ರೂಪೇಶ್ ರೈ ಮಾತನಾಡಿ, ದಾರಿಯಲ್ಲಿ ಹೋಗುವವರೆಲ್ಲರೂ ಆಕ್ಷೇಪ ಅರ್ಜಿ ಹಾಕಿದರೆ ನೀವು ಆಕ್ಷೇಪವುಂಟೆಂದು ಆ ಕಡತಗಳನ್ನು ವಿಲೇವಾರಿ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷೆ ಸುಜಾತ ರೈ ಮಾತನಾಡಿ, ಇದು ನನ್ನ ಹಾಗೂ ನನ್ನ ಅಕ್ಕನಿಗೆ ಸಂಬಂಧಿಸಿದ ಜಾಗ. ಈ ಜಾಗದ ಪ್ರಕರಣವೊಂದು ನ್ಯಾಯಾಲಯದಲ್ಲಿದೆ ಎಂದರು. ಅದಕ್ಕೆ ಚಂದ್ರಹಾಸ ಶೆಟ್ಟಿ ಉತ್ತರಿಸಿ, ನಾನು ಈಗ ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪತ್ರಕ್ಕಾಗಿ ಅರ್ಜಿ ಹಾಕಿರುವ ಜಾಗ ಬೇರೆಂದು ಸರ್ವೇ ನಂಬರ್‌ನಲ್ಲಿದೆ ಎಂದರು. ಆಗ ಅಸ್ಕರ್ ಅಲಿ ಮಾತನಾಡಿ, ನಿಮ್ಮ ಕೌಟುಂಬಿಕ ವಿಚಾರವನ್ನು ಗ್ರಾ.ಪಂ.ಗೆ ಎಳೆದು ತರಬೇಡಿ. ಅದನ್ನು ಮನೆಯೊಳಗೆ ಪರಿಹರಿಸಿ. ಗ್ರಾ.ಪಂ.ನಲ್ಲಿ ಎಲ್ಲರಿಗೂ ಸಮಾನ ನ್ಯಾಯ ನೀಡಿ ಎಂದರು. ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ಕೃಷಿಕರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ ಎಂದು ಅನಿ ಮಿನೇಜಸ್ ತಿಳಿಸಿದರು.
ಭೂಮಿ ತೆರಿಗೆ ದುಪ್ಪಟ್ಟು ಯಾಕೆ:
ಭೂಮಿ ತೆರಿಗೆ ನಮ್ಮ ಪಕ್ಕದ ಗ್ರಾ.ಪಂ.ನಲ್ಲಿ ಸೆಂಟ್ಸ್‌ಗೆ ಕಡಿಮೆ ಇದೆ. ಆದರೆ ನಮ್ಮ ಗ್ರಾ.ಪಂ.ನಲ್ಲಿ ಅದಕ್ಕಿಂತ ಮೂರುಪಟ್ಟು ಜಾಸ್ತಿ ಇದೆ. ಅದ್ಯಾಕೆ ಎಂದು ಕಲಂದರ್ ಶಾಫಿ ಪ್ರಶ್ನಿಸಿದರಲ್ಲದೆ, ಅದನ್ನು ಕಡಿಮೆಗೊಳಿಸಲು ತಿಳಿಸಿದರು. ಅಲ್ಲದೇ, ಈಗ ನಿರ್ಮಾಣಗೊಂಡಿರುವ ಗ್ರಾ.ಪಂ.ನ ಗ್ರಂಥಾಲಯದ ಕಟ್ಟಡವು ಒಂದನೇ ಮಹಡಿಯಲ್ಲಿದ್ದು, ಆ ಕಟ್ಟಡದ ಕಾರ್ಯಕ್ಷಮತೆ ಬಗ್ಗೆ ಎಂಜಿನಿಯರ್‌ರವರ ನಿರಪೇಕ್ಷಣಾ ಪತ್ರ ಇಲ್ಲ. ಮತ್ತೆ ಅಲ್ಲಿಗೆ ಹೋಗಲು ವೃದ್ಧರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅದನ್ನು ಕೆಳಗಡೆ ಶಿಫ್ಟ್ ಮಾಡಿ ಅಂಚೆ ಇಲಾಖೆಯನ್ನು ಮೇಲ್ಗಡೆ ಸ್ಥಳಾಂತರಿಸಲು ತಿಳಿಸಿದರು.
ಆರೋಗ್ಯ ಸಮೀಕ್ಷೆ ಸರಿ ನಡೆದಿಲ್ಲ:
ಇಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಹದಗೆಟ್ಟಿರುವ ಸಂಶಯವಿದ್ದು, ಈ ಬಗ್ಗೆ ನಾವು ಇಲ್ಲಿನವರ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯಾಧಿಕಾರಿಯವರಿಗೆ ಮನವಿ ಮಾಡಿದ್ದೆವು. ಅದರಂತೆ ಸಮೀಕ್ಷೆಗೆ ಬಂದವರು ಎಲ್ಲಾ ಮನೆಗಳವರ ಸಮೀಕ್ಷೆ ನಡೆಸಿಲ್ಲ. ಕೆಲವರು ಮನೆಗಳವರೊಂದಿಗೆ ದಬ್ಬಾಳಿಕೆ ಕೂಡಾ ನಡೆಸಿದ್ದಾರೆ ಎಂದು ಆರೋಪಿಸಿದರು.
ಮನೆ ತೆರಿಗೆ ಮಾನದಂಡದಲ್ಲಿ ತಾರತಮ್ಯ:
ಗ್ರಾಮಸ್ಥ ಜೆರಾಲ್ಡ್ ಮಸ್ಕರ‍್ಹೇನಸ್ ಮಾತನಾಡಿ, ಮನೆ ತೆರಿಗೆ ಹಾಕುವಲ್ಲಿ ಗ್ರಾ.ಪಂ. ತಾರತಮ್ಯವೆಸಗುತ್ತಿದ್ದು, ಪ್ರತಿ ಮನೆಯನ್ನು ಅಳತೆ ಮಾಡಿ ಮನೆ ತೆರಿಗೆ ವಿಧಿಸಿ. ಕಳೆದ ಬಾರಿಯೂ ನಾನು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೂ ಏನೂ ಕ್ರಮವಾಗಿಲ್ಲ. ಇದನ್ನು ಸರಿಪಡಿಸುವವರೆಗೆ ನಾನು ಮನೆ ತೆರಿಗೆ ಕಟ್ಟುವುದಿಲ್ಲ ಎಂದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ತುಳಸಿ, ರಮೇಶ್ ನಾಯ್ಕ್, ಗೀತಾ, ಹರೀಶ್ ಕೆ. ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾ.ಪಂ. ಪಿಡಿಒ ದೇವಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.
ಲಂಚದ ಆರೋಪ: ಸಭೆಯಲ್ಲಿ ಗಲಾಟೆ- ಗದ್ದಲ
ಗ್ರಾ.ಪಂ. ಸದಸ್ಯ ಪ್ರಶಾಂತ್ ಅವರು ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ನೀಡುವಂತೆ ಕೆಲವರ ಅಧ್ಯಕ್ಷೆಯವರನ್ನು ಒತ್ತಾಯಿಸಿದರು. ಆಗ ಅಧ್ಯಕ್ಷೆ ಸುಜಾತ ರೈ ಅಲಿಮಾರ್, ನಾನು ರಾಜೀನಾಮೆ ಅಂಗೀಕರಿಸಿಲ್ಲ. ಅದಕ್ಕೆ ೧೫ ದಿನಗಳ ಕಾಲಾವಕಾಶ ಇದೆ ಎಂದರು. ಅವರು ಮನಸ್ಸಿಗೆ ನೋವಾಗಿ ರಾಜೀನಾಮೆ ನೀಡಿರಬಹುದು. ನಾವು ಅವರನ್ನು ಆರಿಸಿ ಕಳುಹಿಸಿದವರು. ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಹೇಳಿ ಎಂದು ಗ್ರಾಮಸ್ಥರಾದ ಫಯಾಝ್, ಎಂ.ಎಸ್. ರಫೀಕ್, ರೂಪೇಶ್ ರೈ, ಇಸಾಕ್ ಸೇರಿದಂತೆ ಇನ್ನಿತರ ಗ್ರಾಮಸ್ಥರು ಒತ್ತಾಯಿಸಿದರು. ಆಗ ಕಲಂದರ್ ಶಾಫಿ ಅಧ್ಯಕ್ಷರ ಪರವಾಗಿ ಮಾತನಾಡಿ ಅವರ‍್ಯಾಕೆ ಹೇಳಬೇಕು. ನೀವು ಹೇಳಬೇಡಿ ಎಂದರು. ಅದು ಅವರವರೊಳಗೆ ತೀವ್ರ ಮಾತಿನ ಚಕಮಕಿ, ನೂಕಾಟಕ್ಕೂ ಕಾರಣವಾಯಿತು. ಬಳಿಕ ಗ್ರಾಮಸ್ಥರ ಸತತ ಒತ್ತಾಯದ ಮೇರೆಗೆ ಅಧ್ಯಕ್ಷೆ ಸುಜಾತ ಆರ್. ರೈಯವರು ಮಾತನಾಡಿ, ಜಮೀನೊಂದಕ್ಕೆ ಸಂಬಂಧಿಸಿ ಲೇಔಟ್ ಮಾಡಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿ ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ಬಂತು. ಸಾಮಾನ್ಯ ಸಭೆಯ ನಿರ್ಣಯದಂತೆ ಆ ಲೇ ಔಟ್ ಮಾಡಿಕೊಡಲಾಗಿದೆ. ಕಡತ ಗ್ರಾ.ಪಂ.ನದ್ದು ಅಲ್ಲ. ಅದು ಮೇಲಾಧಿಕಾರಿಯಿಂದ ಬಂದ ಕಡತ. ಆ ವಿಷಯವಾಗಿ ಮನಸ್ತಾಪಗೊಂಡು ಅವರು ರಾಜೀನಾಮೆ ನೀಡಿದ್ದಾರೆ ಎಂದರಲ್ಲದೆ, ಈ ಕಡತದ ಬಗ್ಗೆ ಮತ್ತಷ್ಟು ಹುಡುಕಾಡಿದಾಗ ಇದೇ ಕಡತಕ್ಕೆ ಸಂಬಂಧಿಸಿ ಕೆಲವು ಲೇಔಟ್‌ಗಳನ್ನು ಅವರ ಅವಧಿಯಲ್ಲಿಯೇ ಮಾಡಿಕೊಡಲಾಗಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ಈ ಹಿಂದೆ ಗ್ರಾ.ಪಂ. ಪಿಡಿಒ ಆಗಿದ್ದ ಸತೀಶ್ ಅವರು ನನ್ನಲ್ಲಿಗೆ ಆ ಕಡತದೊಂದಿಗೆ ನನ್ನಲ್ಲಿಗೆ ಬಂದು ಇದಕ್ಕೊಂದು ಕೌಂಟರ್ ಸಹಿ ಹಾಕಲು ಕೇಳಿಕೊಂಡಿದ್ದರು. ಆಗ ಆ ಕಡತದಲ್ಲಿ ಕೆಲವೊಂದು ಗೊಂದಲ ಇತ್ತು. ಅದಕ್ಕೆ ನಾನು ಸಹಿ ಹಾಕಲು ಆಕ್ಷೇಪಿಸಿ, ನೀವೇ ಸಹಿ ಹಾಕಿ ಅಂದೆ. ಈಗ ಆ ಕಡತದಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಹಾಗಾಗಿ ಆ ಕಡತವನ್ನು ವಿಲೇವಾರಿ ಮಾಡಿಕೊಡಲಾಗಿದೆ ಎಂದರು.
ಫಯಾಜ್ ಮಾತನಾಡಿ, ಈ ಕಡತ ಮಾಡಿಕೊಡಲು ಗ್ರಾ.ಪಂ. ಸದಸ್ಯರು ೨೫-೩೦ ಲಕ್ಷ ರೂ. ಹಣದ ಬೇಡಿಕೆಯಿಟ್ಟಿದ್ದಾರೆ ಎಂಬ ಬಗ್ಗೆ ಇಡೀ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾ.ಪಂ. ಸದಸ್ಯ ವಿಜಯಕುಮಾರ್, ನೀವು ಇಲ್ಲಿ ಗ್ರಾ.ಪಂ. ಸದಸ್ಯರು ಅಂತ ಉಲ್ಲೇಖಿಸಬೇಡಿ. ಎಲ್ಲರಿಗೂ ಹೇಳಬೇಡಿ. ಅಂತ ವಿಷಯದಲ್ಲಿ ನಾನಿಲ್ಲ ಎಂದರು. ಆಗ ಗ್ರಾಮಸ್ಥ ರಫೀಕ್ ಎಂ.ಎಸ್. ಅವರು, ಬೇಡಿಕೆಯಿಟ್ಟದ್ದು ರಾಜೀನಾಮೆ ಕೊಟ್ಟ ಸದಸ್ಯ ಎಂದರು. ಗ್ರಾಮಸ್ಥರೊಂದಿಗೆ ಸಭೆಯಲ್ಲಿ ಕೂತಿದ್ದ ಸದಸ್ಯ ಪ್ರಶಾಂತ್ ಅವರು ಆಗ ಆಕ್ರೋಶಗೊಂಡು ಇದಕ್ಕೆ ದಾಖಲೆ ಉಂಟಾ? ದಾಖಲೆ ಇಲ್ಲದೆ ಈ ಆರೋಪ ಮಾಡುವುದು ಯಾಕೆ? ರಫೀಕ್ ಎಂ.ಎಸ್. ಅವರನ್ನು ಉಲ್ಲೇಖಿಸಿ ನೀನು ನೋಡಿದ್ದೀಯಾ? ದಾಖಲೆ ತೋರಿಸು ಎಂದು ಆಕ್ರೋಶಭರಿತವಾಗಿಯೇ ಮಾತನಾಡಿದರು.
ಇದು ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತ್ತಲ್ಲದೇ, ಹೊಯ್-ಕೈ ಹಂತದವರೆಗೂ ತಲುಪಿತು. ಇದರೊಂದಿಗೆ ಏಕವಚನದಲ್ಲಿ ಮಾತನಾಡಿದ್ದು ಕೂಡಾ ಆಕ್ರೋಶಕ್ಕೆ ಕಾರಣವಾಯಿತಲ್ಲದೆ, ಇದು ಸಭೆಯಲ್ಲಿ ಪರಸ್ಪರ ಗದ್ದಲಕ್ಕೆ ಕಾರಣವಾಯಿತು. ಬಳಿಕ ಇವರನ್ನು ಸಮಾಧಾನಿಸುವ ಕೆಲಸವಾದ ಬಳಿಕ, ಸದಸ್ಯ ಪ್ರಶಾಂತ್ ಅವರು ಈ ಬಗ್ಗೆ ಮಾತನಾಡಿ, ೨೦೨೩ರಲ್ಲಿ ಈ ಜಾಗದ ಸಿಂಗಲ್ ಲೇ ಔಟ್ ಕನ್ವರ್ಷನ್ ಆಗಿದೆ. ೨೦೨೪ರ ಮೇ ತಿಂಗಳಿನಲ್ಲಿ ಈ ಜಾಗವನ್ನು ಖರೀದಿಸಿದ ವ್ಯಕ್ತಿ ಈ ಜಮೀನಿನ ೯/೧೧ ಅನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೇ ೨೦೨೪ರ ಫೆಬ್ರವರಿ ತಿಂಗಳಲ್ಲಿ ಈ ಜಮೀನಿನ ಮಲ್ಟಿ ಲೇಔಟ್ ವಿನ್ಯಾಸ ನಕ್ಷೆ ಮಾಡಿ ಗ್ರಾ.ಪಂ.ಗೆ ಜಾಗವನ್ನು ಕಟ್ ಮಾಡಿಕೊಡಲು ಕಡತ ಬಂದಿದೆ. ಆದ್ದರಿಂದ ಈ ಕಡತದಲ್ಲಿ ಗೊಂದಲವಿರುವುದರಿಂದ ಇದನ್ನು ಸೂಕ್ತ ಮಾರ್ಗದರ್ಶನಕ್ಕಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಕಳುಹಿಸಲು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ಅದನ್ನೆಲ್ಲಾ ಕಡೆಗಣಿಸಿ ಈ ಜಾಗವನ್ನು ವಿಭಜನೆ ಮಾಡಿಕೊಟ್ಟಿರುವುದೇ ನಾನು ರಾಜೀನಾಮೆ ಕೊಡಲು ಕಾರಣ ಎಂದರು. ಆಗ ಇಸಾಕ್ ಮಾತನಾಡಿ, ಈ ಜಾಗವನ್ನು ಹ್ಯಾಂಡಲ್ ಮಾಡಿದ್ದೇ ನಾನು. ಇದರ ಎಲ್ಲಾ ದಾಖಲೆ ಸರಿ ಇತ್ತು. ಆದರೆ ಅಂದು ಲಂಚಕ್ಕೆ ಬೇಡಿಕೆ ಬಂದಿತ್ತು. ಆದರೆ ಈಗ ಲಂಚ ಕೊಡದೇ ಕೆಲಸ ಆಗಿದೆ ಎಂದರು. ಹಲವು ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾದ ಈ ಪ್ರಕರಣದ ಚರ್ಚೆಯು ಸುಮಾರು ಒಂದು ತಾಸಿನಷ್ಟು ನಡೆದು, ಕೊನೆಗೆ ತೆರೆಬಿತ್ತು.

ಟ್ಯಾಂಕ್ ವಿತರಣೆಯಲ್ಲಿ ಸದಸ್ಯರಿಗೆ ಮೊದಲ ಪ್ರಾಶಸ್ತ್ಯ
ಶೇ.೨೫ರ ನಿಧಿ ಹಾಗೂ ಶೇ.೫ರ ನಿಧಿಯಲ್ಲಿ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಟ್ಯಾಂಕ್ ವಿತರಿಸಲಾಗಿದ್ದು, ಇಲ್ಲಿ ಬಡವರಿಗೆ, ಮೊದಲು ಅರ್ಜಿ ಕೊಟ್ಟವರಿಗೆ ಟ್ಯಾಂಕ್ ವಿತರಣೆಯಾಗಿಲ್ಲ. ಗ್ರಾ.ಪಂ.ನ ಕೆಲ ಸದಸ್ಯರ ಕುಟುಂಬದವರೇ ಇದನ್ನು ಮೊದಲ ಆದ್ಯತೆಯಲ್ಲಿ ಪಡೆದುಕೊಂಡಿದ್ದಾರೆ ಎಂದು ಅನಿ ಮಿನೇಜಸ್ ಈ ಸಂದರ್ಭ ಆರೋಪಿಸಿದರು.