ಪೆರಾಬೆ ಗ್ರಾಮಸಭೆ: ಕುಂತೂರು ಶಾಲಾ ಕಟ್ಟಡ ನಿರ್ಮಾಣಕ್ಕೆ ಇನ್ನೂ ಬಿಡುಗಡೆಯಾಗದ ಅನುದಾನ-ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ

0

ಪೆರಾಬೆ: ಕುಂತೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನುದಾನ ಬಿಡುಗಡೆಯಾಗದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹೋರಾಟದ ಎಚ್ಚರಿಕೆ ನೀಡಿದ ಘಟನೆ ಪೆರಾಬೆ ಗ್ರಾಮಸಭೆಯಲ್ಲಿ ನಡೆದಿದೆ.


ಸಭೆ ಫೆ.19ರಂದು ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಮೆಸ್ಕಾಂ ಕಡಬ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್ ಅವರು ನೋಡೆಲ್ ಅಧಿಕಾರಿಯಾಗಿದ್ದರು. 2024ರ ಆಗಸ್ಟ್ ತಿಂಗಳಲ್ಲಿ ಶಾಲಾ ಅವಧಿಯಲ್ಲಿ ಮಕ್ಕಳು ಆಟದ ಮೈದಾನಕ್ಕೆ ತೆರಳಿದ್ದ ವೇಳೆ ಕುಂತೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ಕಟ್ಟಡವನ್ನು ಪೂರ್ಣ ನೆಲಸಮಗೊಳಿಸಲಾಗಿದ್ದು ಕಳೆದ ಏಳು ತಿಂಗಳಿನಿಂದ ತರಗತಿಗಳು ಶಾಲೆಯ ಪಕ್ಕದ ಬಾಡಿಗೆ ಕಟ್ಟಡವೊಂದರಲ್ಲಿ ನಡೆಯುತ್ತಿದೆ. ಕಟ್ಟಡ ಕುಸಿತಗೊಂಡ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ತುರ್ತಾಗಿ ಕಟ್ಟಡ ರಚನೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ತನಕವೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗದೇ ಇರುವ ವಿಚಾರವನ್ನು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಫೆ.27ರೊಳಗೆ ಟೆಂಡರ್;
ಸಿಆರ್‌ಪಿ ಪ್ರಕಾಶ್ ಬಾಕಿಲ ಅವರು ಮಾತನಾಡಿ, ಕುಂತೂರು ಶಾಲೆಗೆ ಅನುದಾನ ಮಂಜೂರುಗೊಳಿಸುವ ಸಂಬಂಧ ಶಿಕ್ಷಣ ಇಲಾಖೆಯಿಂದಲೂ ಮನವಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ಶಿಕ್ಷಣ ಇಲಾಖೆಯಲ್ಲಿ ಬಾಕಿ ಇಲ್ಲ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಮಾಹಿತಿ ಪಡೆದುಕೊಂಡಿದ್ದು ಫೆ.೨೭ರೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಮುಂದಿನ ಎಪ್ರಿಲ್ ತಿಂಗಳ ಒಳಗೆ ಎರಡು ಕೊಠಡಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಒಂದೇ ಕ್ರೀಯಾಯೋಜನೆಯಲ್ಲಿ ಒಂದೇ ಶಾಲೆಗೆ ನಾಲ್ಕೈದು ಕೊಠಡಿಗೆ ಅನುದಾನ ಮಂಜೂರು ಮಾಡಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈಗ ಎರಡು ಕೊಠಡಿಗೆ ೨೯ ಲಕ್ಷ ರೂ.ಅನುದಾನ ಮಂಜೂರು ಮಾಡಲಾಗಿದೆ. ಇನ್ನೊಂದು ಕ್ರೀಯಾ ಯೋಜನೆಯಲ್ಲಿ ಮತ್ತೆ ೨ ಕೊಠಡಿಗೆ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ರಿ ಶಾಲೆಯಲ್ಲಿ ೧ ರಿಂದ ೮ರ ತನಕ ತರಗತಿ ನಡೆಯುತ್ತಿರುವುದರಿಂದ ನಾಲ್ಕರಿಂದ ಐದು ಕೊಠಡಿಗಳಿಗೆ ಶಿಕ್ಷಣ ಇಲಾಖೆಯಿಂದಲೂ ಬೇಡಿಕೆ ಸಲ್ಲಿಸಿದ್ದೇವೆ. ಈಗ ತಾತ್ಕಾಲಿಕವಾಗಿ ಖಾಸಗಿಯವರ ಕಟ್ಟಡದಲ್ಲಿ ತರಗತಿ ನಡೆಯುತ್ತಿದೆ. ಮುಂದಿನ ವರ್ಷ ಅವರು ಅವಕಾಶ ನೀಡದೇ ಇದ್ದಲ್ಲಿ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗಲಿದೆ ಎಂದರು. ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.,ಅವರು ಮಾತನಾಡಿ, ಕುಂತೂರು ಶಾಲೆಗೆ ತುರ್ತಾಗಿ ಕೊಠಡಿ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ನಿಂದಲೂ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.


ಸದ್ರಿ ಶಾಲಾ ಹಿರಿಯ ವಿದ್ಯಾರ್ಥಿ ಪ್ರಭಾಕರ ಶೆಟ್ಟಿ ಕೇವಳಪಟ್ಟೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಯ್ಯೂಬ್ ಬಿ.ಕೆ., ಎಸ್‌ಡಿಎಂಸಿ ಅಧ್ಯಕ್ಷ ಖಾಸೀಂ, ಮಾಜಿ ಅಧ್ಯಕ್ಷ ಹರೀಶ್ ಬಾಣಬೆಟ್ಟು, ಸದಸ್ಯೆ ಅಪ್ಸಾ ಮತ್ತಿತರರು ಮಾತನಾಡಿ, ೫ ಕೊಠಡಿಗಳಿಗೆ ರೂ.೮೫ ಲಕ್ಷದ ಅಂದಾಜು ಪಟ್ಟಿ ತಯಾರಿಸಿ ಶಾಸಕರಿಗೆ, ಶಿಕ್ಷಣ ಇಲಾಖೆ ಸಹಿತ ಸಂಬಂಧಪಟ್ಟವರಿಗೆ ಕಳಿಸಿಕೊಡಲಾಗಿದೆ. ಆದರೆ ಈ ತನಕ ಶಾಲೆಗೆ ಯಾರೂ ಬಂದು ಪರಿಶೀಲನೆ ನಡೆಸಿಲ್ಲ. ಸಿಎಸ್‌ಆರ್ ಫಂಡ್‌ಗೂ ಅಡ್ಡಗಾಲು ಬರುತ್ತಿದೆ. ಶಾಸಕರಿಂದಲೂ ಸೂಕ್ತ ರೀತಿಯ ಸ್ಪಂದನೆ ಸಿಕ್ಕಿಲ್ಲ. ಈ ಶಾಲೆ ಉಳಿಯಬೇಕು. ಆದ್ದರಿಂದ ಇಲ್ಲಿಗೆ ತುರ್ತಾಗಿ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಹಳೆ ವಿದ್ಯಾರ್ಥಿಗಳು, ಊರವರು ಸೇರಿಕೊಂಡು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕುಂತೂರು ಶಾಲೆಗೆ ತುರ್ತಾಗಿ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಗಡಿಗುರುತು ಮಾಡಿಲ್ಲ:
ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯ ಜಾಗದ ಗಡಿಗುರುತು ಮಾಡಿಕೊಡುವಂತೆ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ೧ ತಿಂಗಳು ಕಳೆದಿದೆ. ಈ ಅರ್ಜಿ ತಹಶೀಲ್ದಾರ್ ಕಚೇರಿಯಲ್ಲೇ ಇದ್ದು ಅಲ್ಲಿಂದ ಮುಂದೆ ಹೋಗಿಲ್ಲ ಎಂದು ಸದ್ರಿ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹರೀಶ್ ಬಾಣಬೆಟ್ಟು ಆರೋಪಿಸಿದರು. ಶಾಲಾ ಜಾಗದ ಗಡಿ ಗುರುತು ಮಾಡಿಕೊಡುವಂತೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸದಸ್ಯರ/ಅಧಿಕಾರಿಗಳ ಗೈರು ಹಾಜರಿಗೆ ಆಕ್ಷೇಪ:
ಗ್ರಾಮಸಭೆಗೆ ಸದಸ್ಯರು ಗೈರುಹಾಜರಿಯಾಗಿರುವ ವಿಚಾರವನ್ನು ಗ್ರಾಮಸ್ಥ ಶೇಷಪತಿ ರೈ ಅವರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸಂಧ್ಯಾ ಕೆ.,ಅವರು ೧೫ ಸದಸ್ಯರ ಪೈಕಿ ೧೧ ಸದಸ್ಯರು ಹಾಜರಾಗಿದ್ದಾರೆ. ಉಳಿದ ಸದಸ್ಯರು ಕಾರಣ ತಿಳಿಸಿ ಸಭೆಗೆ ಗೈರು ಹಾಜರಿಯಾಗಿದ್ದಾರೆ ಎಂದರು. ಕೆಲವೊಂದು ಇಲಾಖೆ ಅಧಿಕಾರಿಗಳೂ ಸಭೆಗೆ ಗೈರು ಹಾಜರಿಯಾಗಿರುವುದಕ್ಕೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಪಿಡಿಒ ಶಾಲಿನಿ ಕೆ.ಬಿ.,ಅವರು ಮಾತನಾಡಿ, ತಾ.ಪಂ.ನಿಂದ ನಿಗದಿಗೊಳಿಸಿದ ದಿನದಂತೆ ಗ್ರಾಮಸಭೆ ಆಯೋಜಿಸಿದ್ದೇವೆ. ಕೆಲವೊಂದು ಸದಸ್ಯರು ಕಾರಣ ತಿಳಿಸಿ ಗೈರು ಆಗಿದ್ದಾರೆ. ಎಲ್ಲಾ ಇಲಾಖೆಯವರಿಗೂ ನೋಟಿಸ್ ನೀಡಲಾಗಿದೆ ಎಂದರು.

ರಾತ್ರಿ ವೇಳೆ ಮರ ಸಾಗಾಟ:
ಬೀರಂತಡ್ಕ ಸರಕಾರಿ ಕಾಡಿನಿಂದ ರಾತ್ರಿ ವೇಳೆ ಮರ ಸಾಗಾಟ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಹಳೆಯ ರಸ್ತೆ ಮುಚ್ಚಬಾರದು:
ಪೆರಾಬೆ ಗ್ರಾಮದ ಸರ್ವೆ ನಂ.೨ರ ಆರ್‌ಟಿಸಿಯಲ್ಲಿ ಸರಕಾರಿ ಜಾಗ ಎಂದು ಇದೆ. ಆದರೆ ಇದು ಅರಣ್ಯ ಇಲಾಖೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಂಟಿ ಸರ್ವೆಗೆ ಕಂದಾಯ ಇಲಾಖೆ ಮುಂದಾಗಿದೆ. ಜಂಟಿ ಸರ್ವೆ ನಡೆಯುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪ್ರತಿನಿಧಿಗಳೂ ಉಪಸ್ಥಿತರಿದ್ದು ಸರ್ವೆಯರ್‌ಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಇಲ್ಲಿ ಇರುವ ರಸ್ತೆ, ಹಳೆಯ ರಸ್ತೆ ಮುಚ್ಚಬಾರದು ಎಂದು ಗ್ರಾಮಸ್ಥ ಮೋನಪ್ಪ ಗೌಡ ಒತ್ತಾಯಿಸಿದರು.

ಹಳೆಯ ತಂತಿ ಬದಲಾಯಿಸಿ:
ಕೆಲವು ಕಡೆಗಳಲ್ಲಿ ೪೦ ವರ್ಷಕ್ಕೂ ಹಿಂದಿನ ಕಾಲದ ವಿದ್ಯುತ್ ತಂತಿಗಳಿದ್ದು ಇದು ತುಂಡಾಗಿ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಹಳೆಯ ವಿದ್ಯುತ್ ತಂತಿಗಳ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜನಾರ್ದನ ಬಿ.ಎಲ್.ಒತ್ತಾಯಿಸಿದರು. ಹಳೆಯ ತಂತಿಗಳನ್ನು ಹಂತ ಹಂತವಾಗಿ ಬದಲಾವಣೆ ಮಾಡಲಾಗುತ್ತಿದೆ ಎಂದು ಜೆ.ಇ.ಪ್ರೇಮ್‌ಕುಮಾರ್ ಅವರು ತಿಳಿಸಿದರು. ಗ್ರಾಮಸ್ಥರು ಅಲ್ಯೂಮಿನಿಯಂ ಏಣಿ ಬಳಸಿ ಕಾಳುಮೆಣಸು ಕೊಯ್ಯುವ ವೇಳೆ, ತೋಟಕ್ಕೆ ಮದ್ದು ಬಿಡುವ ಹಾಗೂ ಇತರೇ ಸಂದರ್ಭದಲ್ಲಿ ಮೆಸ್ಕಾಂಗೆ ಮಾಹಿತಿ ನೀಡಿ ಲೈನ್ ಆಫ್ ಮಾಡಿಸಿಕೊಳ್ಳಿ. ಇದರಿಂದ ಅನಾಹುತ ಸಂಭವಿಸುವುದು ತಪ್ಪಲಿದೆ ಎಂದು ನೋಡೆಲ್ ಅಧಿಕಾರಿಯಾಗಿದ್ದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್ ಅವರು ಸಲಹೆ ನೀಡಿದರು. ಪೆರಾಬೆಯಿಂದ ಮಾಯಿಲ್ಗದ ತನಕ ದಾರಿದೀಪ ಅಳವಡಿಸಬೇಕೆಂದು ಜನಾರ್ದನ ಬಿ.ಎಲ್.ಒತ್ತಾಯಿಸಿದರು.

ಎರ್ಮಾಳದಲ್ಲಿ ಬಸ್ಸು ನಿಲ್ಲಿಸಲಿ:
ಎರ್ಮಾಳದಲ್ಲಿ ಬಸ್ಸು ನಿಲ್ದಾಣವಿದ್ದರೂ ಕೆಲವೊಂದು ಕೆಎಸ್‌ಆರ್‌ಟಿಸಿ ಬಸ್ಸುಗಳು ನಿಲ್ಲುತ್ತಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಲ್ಲಿ ಬಸ್ಸು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಡಿಸಿಯವರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಬಸ್‌ಗಳ ಕೊರತೆಯಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು ಗಮನ ಹರಿಸಿ ಸ್ಪಂದಿಸಬೇಕೆಂದು ಜಯಕುಮಾರಿ ಅವರು ಒತ್ತಾಯಿಸಿದರು.

ಬ್ಯಾನರ್ ತೆರವುಗೊಳಿಸಿ:
ಕುಂತೂರು ಬಸ್‌ನಿಲ್ದಾಣದ ಅಸುಪಾಸಿನಲ್ಲಿ ತಿಂಗಳ ಹಿಂದೆ ಅಳವಡಿಸಿದ ಬ್ಯಾನರ್‌ಗಳು ಇನ್ನೂ ಹಾಗೇ ಉಳಿದಿವೆ. ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಗುರುರಾಜ್ ಕೇವಳ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಸಿದ ಪಿಡಿಒ ಶಾಲಿನಿ ಅವರು, ಬ್ಯಾನರ್ ಅಳವಡಿಕೆಗೆ ಪರವಾನಿಗೆ ನೀಡುವ ಸಂದರ್ಭದಲ್ಲೇ ಕಾರ್ಯಕ್ರಮ ಮುಗಿದ ಬಳಿಕ ತೆರವುಗೊಳಿಸಲು ಸೂಚನೆ ನೀಡುತ್ತೇವೆ. ಪರಿಶೀಲನೆ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಸ್ವಚ್ಛತಾ ಕಾರ್ಯಕ್ರಮಗಳಿಗೆ ಗ್ರಾ.ಪಂ.ನಿಂದ ಘನತ್ಯಾಜ್ಯ ಸಾಗಾಟದ ವಾಹನ ನೀಡಿ ಸಹಕರಿಸುವಂತೆಯೂ ಗ್ರಾಮಸ್ಥ ಗುರುರಾಜ್ ಕೇವಳ ಅವರು ಒತ್ತಾಯಿಸಿದರು.

ಜನತಾ ಕಾಲೋನಿಗೆ ಬೀದಿದೀಪ ಅಳವಡಿಸಿ:
ಕುಂತೂರು ಜನತಾ ಕಾಲೋನಿಯಲ್ಲಿ ಬೀದಿದೀಪ ಅಳವಡಿಸಬೇಕೆಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ಡ್‌ನ ಸದಸ್ಯೆ ಮಮತಾ ಅಂಬರಾಜೆ ಅವರು, ವಾರ್ಡ್‌ಸಭೆಗೆ ಆ ಕಾಲೋನಿಯ ಯಾರೂ ಬರುವುದಿಲ್ಲ. ಮನವಿಯೂ ಕೊಡುವುದಿಲ್ಲ. ಈ ವರ್ಷದ ಕ್ರೀಯಾಯೋಜನೆ ಈಗಾಗಲೇ ಮಾಡಿ ಆಗಿದೆ. ಮುಂದಿನ ವರ್ಷದ ಕ್ರೀಯಾಯೋಜನೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಪಲ ರಸ್ತೆ ಅಭಿವೃದ್ಧಿಗೊಳಿಸಿ:
ಮಾಪಲ ರಸ್ತೆ ಅಭಿವೃದ್ಧಿಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಈ ವರ್ಷದ ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ಮಮತಾ ಅಂಬರಾಜೆ ಅವರು, ಸದ್ರಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದೆ. ಜಲ್ಲಿ ತಂದೂ ಹಾಕಲಾಗಿದೆ. ಮಾರ್ಚ್‌ನೊಳಗೆ ಕಾಮಗಾರಿ ಮುಗಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮುಗಿಸಿಕೊಡದೇ ಇದ್ದಲ್ಲಿ ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಸೂಚನೆ ನೀಡಲಾಗುವುದು ಎಂದರು.

ಇಲಾಖಾಧಿಕಾರಿಗಳಾದ ಪೆರಾಬೆ ಗ್ರಾಮದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀಲಾವತಿ, ಅಲ್ಪಸಂಖ್ಯಾತ ಇಲಾಖೆಯ ಮಹಮ್ಮದ್ ರಫೀಕ್, ಸಮಾಜ ಕಲ್ಯಾಣ ಇಲಾಖೆಯ ವಿಶ್ವನಾಥ ಬೆನಕಣ್ಣವರ, ಸಿಎ ಬ್ಯಾಂಕ್‌ನ ಆಶಾಲತಾ, ಗಸ್ತು ಅರಣ್ಯ ಪಾಲಕ ರವಿಕುಮಾರ್, ಪೊಲೀಸ್ ಇಲಾಖೆಯ ಹರೀಶ್, ಕಿರಿಯ ಪಶುವೈದ್ಯ ಪರೀಕ್ಷಕ ರವಿತೇಜ, ಮೆಸ್ಕಾಂ ಆಲಂಕಾರು ಶಾಖಾ ಜೆಇ ಪ್ರೇಮ್‌ಕುಮಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿಯವರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಮೋಹನದಾಸ್ ರೈ, ಸುಶೀಲ, ಸಿ.ಎಂ.ಫಯಾಜ್, ಕಾವೇರಿ, ಲೀಲಾವತಿ, ಬಿ.ಕೆ.ಕುಮಾರ್, ಮಮತಾ, ಪಿ.ಜಿ.ರಾಜು, ಕೃಷ್ಣ ವೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ.ಸ್ವಾಗತಿಸಿದರು. ಸಿಬ್ಬಂದಿಗಳಾದ ಪದ್ಮಕುಮಾರಿ, ಉಮೇಶ್ ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here