ನೆಲ್ಯಾಡಿ ಆಸ್ಪತ್ರೆ ವೈದ್ಯರನ್ನು ಕೊಯಿಲ ಆಸ್ಪತ್ರೆಗೆ ನಿಯೋಜನೆ ಮಾಡಿರುವುದಕ್ಕೆ ವಿರೋಧ
ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಎರಡು ದಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿರುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾದ ಘಟನೆ ನೆಲ್ಯಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಫೆ.27ರಂದು ಬೆಳಿಗ್ಗೆ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ರವಿಪ್ರಸಾದ್ ಶೆಟ್ಟಿ, ಗ್ರಾಮಸ್ಥರಾದ ಗಣೇಶ್ ಪೊಸೊಳಿಗೆ, ವರ್ಗೀಸ್ ಮಾದೇರಿ ಹಾಗೂ ಇತರರೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 150ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಈಗ ಇಲ್ಲಿನ ವೈದ್ಯರನ್ನು ಎರಡು ದಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ. ಉಳಿದ ದಿನ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿದ್ದರೂ ಮೀಟಿಂಗ್ ಹಾಗೂ ಇಲಾಖೆಯ ಇತರೇ ಕೆಲಸಗಳಿಗೂ ಹೋಗಬೇಕಾಗುತ್ತದೆ. ಆದ್ದರಿಂದ ಅವರ ನಿಯೋಜನೆ ರದ್ದುಗೊಳಿಸಿ ಅವರು ಇದೇ ಆಸ್ಪತ್ರೆಯಲ್ಲಿ ವಾರದ ಎಲ್ಲಾ ದಿನವೂ ಸೇವೆ ಸಲ್ಲಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಸಮಯದಿಂದ ವೈದ್ಯರ ಹುದ್ದೆ ಖಾಲಿ ಇತ್ತು. ವೈದ್ಯರ ನೇಮಕಕ್ಕೆ ಒತ್ತಾಯಿಸಿ ಅಲ್ಲಿ ಪ್ರತಿಭಟನೆ ನಡೆದಿರುವುದರಿಂದ ನೆಲ್ಯಾಡಿ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ತಲಾ 2 ದಿನ ನಿಯೋಜನೆ ಮಾಡಲಾಗಿದೆ. ಖಾಯಂ ವೈದ್ಯರ ನೇಮಕ ಆಗುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲು ಯಾವ ವೈದ್ಯರೂ ಮುಂದೆ ಬರುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಈಗಾಗಲೇ ಪ್ರಕಟಣೆ ನೀಡಿದ್ದೇವು. ಯಾರೂ ಮುಂದೆ ಬಂದಿಲ್ಲ. 15 ದಿನದೊಳಗೆ ಮತ್ತೆ ಪ್ರಕಟಣೆ ನೀಡುತ್ತೇವೆ ಎಂದರು. ನೆಲ್ಯಾಡಿ ವೈದ್ಯರು ವಾರದ ಎಲ್ಲಾ ದಿನ ನೆಲ್ಯಾಡಿ ಆಸ್ಪತ್ರೆಯಲ್ಲೇ ಇರಬೇಕು. ಈ ಬಗ್ಗೆ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಲ್ಯಾಬ್ ಟೆಕ್ನಿಷಿಯನ್ ಹಾಗೂ ಖಾಲಿ ಇರುವ ಇತರೇ ಸಿಬ್ಬಂದಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ನೆಲ್ಯಾಡಿ ಸರಕಾರಿ ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಮಕ್ಕಳ ತಜ್ಞರು ಲಭ್ಯರಿರುವಂತೆ ಮಾಡಬೇಕೆಂದು ಗ್ರಾಮಸ್ಥ ಗಣೇಶ್ ಪೊಸೊಳಿಕೆ ಒತ್ತಾಯಿಸಿದರು.
ಜೆಜೆಎಂ ಕಾಮಗಾರಿ ವಿರುದ್ಧ ಆಕ್ರೋಶ:
ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಯೋಜನೆಯಡಿ ಹೊಸ ಪೈಪು ಅಳವಡಿಸಬೇಕೆಂಬ ನಿಯಮವಿದ್ದರೂ ಹಲವು ಮನೆಗಳಿಗೆ ಹಳೆಯ ಪೈಪ್ಗಳಿಗೇ ನೀರಿನ ಸಂಪರ್ಕ ನೀಡಲಾಗಿದೆ ಎಂದು ವರ್ಗೀಸ್ ಮಾದೇರಿ ಆರೋಪಿಸಿದರು. ಜೆಜೆಎಂ ಕಾಮಗಾರಿ ಸರಿಯಾಗಿ ಮಾಡದೇ ಇದ್ದಲ್ಲಿ ಅವರಿಗೆ ಬಿಲ್ಲು ಪಾವತಿ ಮಾಡಬಾರದು ಎಂದು ಅವರು ಆಗ್ರಹಿಸಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.
ನೆಲ್ಯಾಡಿಗೆ ಬಸ್ಸು ಬರಲಿ:
ಆಲಂತಾಯದಲ್ಲಿ ರಾತ್ರಿ ತಂಗುವ ಕೆಎಸ್ಆರ್ಟಿಸಿ ಬಸ್ಸು ಬೆಳಿಗ್ಗೆ ಆಲಂತಾಯದಿಂದ ಗೋಳಿತ್ತೊಟ್ಟುಗೆ ಬಂದು ಉಪ್ಪಿನಂಗಡಿಗೆ ಸಂಚಾರ ಮಾಡುತ್ತಿದೆ. ಈ ಬಸ್ಸು ಗೋಳಿತ್ತೊಟ್ಟಿನಿಂದ ನೆಲ್ಯಾಡಿಗೆ ಬಂದು ಮತ್ತೆ ಉಪ್ಪಿನಂಗಡಿಗೆ ಸಂಚಾರ ಮಾಡುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಬೆಳಗ್ಗಿನ ಹೊತ್ತು ಬಸ್ಸಿನ ಸಮಸ್ಯೆಯೂ ಇದೆ ಎಂದು ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಹೇಳಿದರು. ಈ ಹಿಂದೆ ಬೆಳಿಗ್ಗೆ ನೆಲ್ಯಾಡಿಯಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ಬಸ್ಸಿನ ಓಡಾಟ ಇತ್ತು. ಈಗ ಈ ಬಸ್ಸೂ ಇಲ್ಲ. ಇದನ್ನು ಪುನರಾರಂಭಿಸುವಂತೆ ಗ್ರಾಮಸ್ಥ ರಮೇಶ್ ಶೆಟ್ಟಿ ಬೀದಿ ಒತ್ತಾಯಿಸಿದರು. ತಾಲೂಕು ಕೇಂದ್ರ ಆಗಿರುವ ಕಡಬ ಹಾಗೂ ನೆಲ್ಯಾಡಿ ಮಧ್ಯೆ ಬಸ್ಸು ಓಡಾಟ ಆರಂಭಿಸುವಂತೆ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಗ್ರಾಮಸ್ಥ ಹೆರಾಲ್ಡ್ ಡಿ.ಸೋಜ ಮತ್ತಿತರರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಅಧಿಕಾರಿ ಸುರೇಶ್ ಅವರು, ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈಗ ಗುತ್ತಿಗೆ ಆಧಾರದಲ್ಲಿ ಚಾಲಕ, ನಿರ್ವಾಹಕರ ನೇಮಕ ಆಗುತ್ತಿರುವುದರಿಂದ ಸಮಸ್ಯೆಯಾಗಿದೆ. ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ವಿದ್ಯುತ್ ಸರಿಯಾಗಿ ಕೊಡಿ:
ಮೆಸ್ಕಾಂ ಜೆಇ ರಾಮಣ್ಣ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಗಣೇಶ್ ಪೊಸೊಳಿಗೆ ಅವರು, ವಿದ್ಯುತ್ ಬಿಲ್ಲು ಜಾಸ್ತಿ ಮಾಡಲಾಗಿದೆ. ವಿದ್ಯುತ್ ಸರಿಯಾಗಿ ಕೊಡಿ. ಈ ಹಿಂದೆ ವಿದ್ಯುತ್ ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆ ಜಾಸ್ತಿಯಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಇ ರಾಮಣ್ಣ ಅವರು, ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಜಾಸ್ತಿಯಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಆಲಂಕಾರಿನಲ್ಲಿ 110 ಕೆ.ವಿ.ಸಬ್ಸ್ಟೇಷನ್ ನಿರ್ಮಾಣವಾದಲ್ಲಿ ಸಮಸ್ಯೆ ಪರಿಹಾರ ಆಗಲಿದೆ. ಆದರೆ ಇಲ್ಲಿಗೆ ವಿದ್ಯುತ್ ಲೈನ್ ಎಳೆಯಲು ರೈತರಿಂದಲೇ ವಿರೋಧ ವ್ಯಕ್ತವಾಗಿದೆ. ನೆಲ್ಯಾಡಿ ಸಬ್ಸ್ಟೇಷನ್ ಸಾಮರ್ಥ್ಯ ಹೆಚ್ಚಳವಾಗಿದ್ದರೂ ಆಲಂಕಾರು 110 ಕೆ.ವಿ.ಸಬ್ಸ್ಟೇಷನ್ ಆಗದೇ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದರು. ರವಿಚಂದ್ರ ಹೊಸವಕ್ಲು, ರಮೇಶ್ ಶೆಟ್ಟಿ ಬೀದಿ ಹಾಗೂ ಇತರೇ ಗ್ರಾಮಸ್ಥರು ವಿದ್ಯುತ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು.
ಸೋಲಾರ್ ದೀಪ ಬೇಡ:
ಪಡುಬೆಟ್ಟುವಿನಿಂದ ಕಲ್ಲಚಡವು ಮಧ್ಯೆ ಹಲವು ಕಡೆಗಳಲ್ಲಿ ಸೋಲಾರ್ ದಾರಿದೀಪ ಹಾಕಲಾಗಿದೆ. ಕೆಲವೊಂದು ಸೋಲಾರ್ ದೀಪಗಳು ಉರಿಯುತ್ತಿಲ್ಲ. ಇದು ಗ್ರಾಮ ಪಂಚಾಯತ್ಗೆ ಹೊರೆಯೂ ಆಗಿದೆ. ಆದ್ದರಿಂದ ಇನ್ನು ಮುಂದೆ ಸೋಲಾರ್ ದಾರಿದೀಪದ ಬದಲು ವಿದ್ಯುತ್ ಬೀದಿದೀಪ ಅಳವಡಿಸುವಂತೆ ಗ್ರಾಮಸ್ಥರಾದ ಕೆ.ಪಿ.ಆನಂದ, ಅಣ್ಣಿ ಎಲ್ತಿಮಾರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅವರು, ಕೆಟ್ಟುಹೋಗಿರುವ ಸೋಲಾರ್ ದೀಪಗಳನ್ನು ಅಲ್ಲಿಂದ ತೆರವು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸೋಲಾರ್ ದಾರಿದೀಪ ಅಳವಡಿಸುವುದಿಲ್ಲ. ವಿದ್ಯುತ್ನಿಂದ ಉರಿಯುವ ಬೀದಿದೀಪ ಅಳವಡಿಸುತ್ತೇವೆ. ವಿದ್ಯುತ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಸೋಲಾರ್ ದೀಪ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಮಶಾನಕ್ಕೆ ಜಾಗ ಕಾದಿರಿಸಿ:
ಪಡುಬೆಟ್ಟು ಪ್ರದೇಶದಲ್ಲಿ ಎಸ್ಸಿ,ಎಸ್ಟಿ ಜನಾಂಗದವರಿಗೆ ಸ್ಮಶಾನಕ್ಕೆ ಜಾಗ ಕಾದಿರಿಸುವಂತೆ ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದು ನಿರ್ಣಯ ಕೈಗೊಳ್ಳಲಾಗಿದೆ. ಇದು ಯಾವ ಹಂತಕ್ಕೆ ಮುಟ್ಟಿದೆ ಎಂದು ಗ್ರಾಮಸ್ಥ ಆನಂದ ಕೆ.ಪಿ.ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಲಾವಣ್ಯ ಅವರು, ಇದಕ್ಕೆ ಸಂಬಂಧಿಸಿದ ಯಾವುದೇ ಅರ್ಜಿ ನಮ್ಮ ಕಚೇರಿಗೆ ಬಂದಿಲ್ಲ ಎಂದರು. ಗ್ರಾಮ ಪಂಚಾಯಿತಿಯಿಂದ ಕಂದಾಯ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಪಿಡಿಒ ಮೋಹನ್ಕುಮಾರ್ ತಿಳಿಸಿದರು. ಅರ್ಜಿ ತಾಲೂಕು ಕಚೇರಿಯಲ್ಲಿ ಇದೆಯಾ ಎಂದು ಪರಿಶೀಲನೆ ನಡೆಸುವುದಾಗಿ ಗ್ರಾಮ ಆಡಳಿತಾಧಿಕಾರಿ ಲಾವಣ್ಯ ಹೇಳಿದರು.
ಜಾಗದ ಗಡಿಗುರುತು ಮಾಡಿ:
ನೆಲ್ಯಾಡಿಯಲ್ಲಿ ಸ್ತ್ರೀಶಕ್ತಿ ಭವನಕ್ಕೆ 8 ಸೆಂಟ್ಸ್ ಜಾಗ ಮಂಜೂರು ಆಗಿದ್ದು ಗಡಿಗುರುತು ಮಾಡಿಕೊಡುವಂತೆ ಸ್ತ್ರೀಶಕ್ತಿ ಸಂಘದ ಮಹಿಳೆಯರು ಒತ್ತಾಯಿಸಿದರು. ಪಡುಬೆಟ್ಟು ಸರಕಾರಿ ಪ್ರೌಢಶಾಲೆಗೆ ಸ್ವಂತ ಜಾಗವಿದ್ದರೂ ಆರ್ಟಿಸಿಯಲ್ಲಿ ನಮೂದು ಆಗಿಲ್ಲ. ಇದರಿಂದ ಅನುದಾನ ಪಡೆಯಲು ತೊಂದರೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕುಶಾಲಪ್ಪ ಗೌಡ ಒತ್ತಾಯಿಸಿದರು.
ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಮಾಹಿತಿ ಕೊಡಿ:
ತೋಟ ಹಾಗೂ ಇತರೇ ಕೆಲಸಗಳಿಗೆ ಹೊರ ರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಲ್ಲಿ ಅವರ ಆಧಾರ್ ಕಾರ್ಡ್ ಅಥವಾ ಇತರೇ ದಾಖಲೆಗಳ ಪ್ರತಿಯನ್ನು ಪೊಲೀಸ್ ಠಾಣೆಗೆ ನೀಡುವಂತೆ ನೆಲ್ಯಾಡಿ ಹೊರಠಾಣೆ ಹೆಡ್ಕಾನ್ಸ್ಸ್ಟೇಬಲ್ ಪ್ರವೀಣ್ ಮಾಹಿತಿ ನೀಡಿದರು.
ಇಂಜಿನಿಯರ್ ಬರಲಿ:
ಕಾಂಕ್ರಿಟ್ ರಸ್ತೆ ಕಾಮಗಾರಿ, ಜೆಜೆಎಂ ಕಾಮಗಾರಿ ಕುರಿತು ಮಾತನಾಡಲು ಇದೆ. ಸಭೆಗೆ ಇಂಜಿನಿಯರ್ ಅವರನ್ನು ಕರೆಸುವಂತೆ ಗ್ರಾಮಸ್ಥರಾದ ಸೆಬಾಸ್ಟಿನ್ ಮಾದೇರಿ, ಆನಂದ ಕೆ.ಪಿ., ಜಿ.ವರ್ಗೀಸ್ ಮಾದೇರಿ ಹಾಗೂ ಇತರರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪಿಡಿಒ ಮೋಹನ್ಕುಮಾರ್ ಅವರು ಇಂಜಿನಿಯರ್ಗೆ ಕರೆ ಮಾಡಿದರು. ಇಂಜಿನಿಯರ್ ಅವರು ಕಾಮಗಾರಿ ಪರಿಶೀಲನೆಗಾಗಿ ಎಡಮಂಗಲ ಗ್ರಾಮಕ್ಕೆ ತೆರಳಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಬೇಡಿಕೆ ಇದ್ದಲ್ಲಿ ತಿಳಿಸಿ. ಪಂಚಾಯತ್ನಿಂದ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ವಿವಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ;
ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಬಾಡಿಗೆ ಕಟ್ಟಡದಲ್ಲಿದ್ದು ಇದಕ್ಕೆ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಆನಂದ ಕೆ.ಪಿ.ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮೋಹನ್ಕುಮಾರ್ ಅವರು, ನೆಲ್ಯಾಡಿ ವಿವಿಗೆ ಈಗಾಗಲೇ ೨೪ ಎಕ್ರೆ ಜಾಗ ಮಂಜೂರು ಆಗಿದೆ. ಆದರೆ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಹಾಗೂ ಗೇರು ನಿಗಮದವರು ಎನ್ಒಸಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಶ್ರೀರಾಮ ಶಾಲೆಯ ಪಕ್ಕದಲ್ಲಿರುವ ಗ್ರಾಮ ಪಂಚಾಯತ್ ಜಾಗ ನೀಡುವಂತೆ ಪತ್ರ ಬಂದಿದೆ. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಅಂಗನವಾಡಿ ಕಟ್ಟಡ ಪೂರ್ಣಗೊಳಿಸಿ:
ಕೊಲ್ಯೊಟ್ಟುಬೈಲು ಅಂಗನವಾಡಿ ಹೊಸ ಕಟ್ಟಡ ಗೋಡೆಯ ಹಂತದಲ್ಲಿದೆ. ಕಟ್ಟಡ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಒತ್ತಾಯಿಸಿದರು.
ಘನತ್ಯಾಜ್ಯ ಘಟಕಕ್ಕೆ ಗೇಟ್ ಅಳವಡಿಸಿ:
ಕರಂದಳದಲ್ಲಿರುವ ಗ್ರಾಮ ಪಂಚಾಯತ್ನ ಘನತ್ಯಾಜ್ಯ ಘಟಕದಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಪರಿಸರದ ಖಾಸಗಿ ಜಾಗದವರ ರಬ್ಬರ್ ಮರಗಳೂ ಸುಟ್ಟುಹೋಗಿವೆ. ಅಲ್ಲದೇ ಇಲ್ಲಿ ಬೇರೆ ಚಟುವಟಿಕೆಗಳೂ ನಡೆಯುತ್ತಿವೆ ಎಂಬ ಆರೋಪವೂ ಇದೆ. ಆದ್ದರಿಂದ ಘನತ್ಯಾಜ್ಯ ಘಟಕದ ಆವರಣಕ್ಕೆ ಬೇಲಿ, ಗೇಟ್, ಸಿಸಿ ಕ್ಯಾಮರಾ ಅಳವಡಿಸುವಂತೆ ಕೊಲ್ಯೊಟ್ಟು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಒತ್ತಾಯಿಸಿದರು.
ನೆಲ್ಯಾಡಿ ಬೈಲುಸೇತುವೆ ದುರಸ್ತಿ ಸೇರಿದಂತೆ ವಿವಿಧ ವಿಚಾರಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು. ಮೆಸ್ಕಾಂ ಜೆಇ ರಾಮಣ್ಣ, ಕೆಎಸ್ಆರ್ಟಿಸಿಯ ಸುರೇಶ್, ಗ್ರಾಮ ಆಡಳಿತಾಧಿಕಾರಿ ಲಾವಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಸಿಆರ್ಪಿ ಪ್ರಕಾಶ್ ಬಾಕಿಲ, ನೆಲ್ಯಾಡಿ ಹೊರಠಾಣೆ ಹೆಡ್ಕಾನ್ಸ್ಸ್ಟೇಬಲ್ ಪ್ರವೀಣ್, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ವಿಕಲಚೇತನ ಇಲಾಖೆಯ ನವೀನ್ಕುಮಾರ್, ಆರೋಗ್ಯ ಇಲಾಖೆಯವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಅಬ್ದುಲ್ ಜಬ್ಬಾರ್, ಚೇತನಾ, ಆನಂದ ಪಿಲವೂರು, ಉಷಾ ಓ.ಕೆ., ಜಯಲಕ್ಷ್ಮೀಪ್ರಸಾದ್, ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಪುಷ್ಪಾ, ಪ್ರಕಾಶ್, ಜಯಂತಿ, ಜಯಾನಂದ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಶಿವಪ್ರಸಾದ್ ವರದಿ ವಾಚಿಸಿದರು. ಪಿಡಿಒ ಮೋಹನ್ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಂಗು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ದುಡ್ಡುಕೊಟ್ಟು ಬಸ್ಸಿನಲ್ಲಿ ನಿಂತುಕೊಂಡೇ ಹೋಗಬೇಕಾಗಿದೆ:
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಬಸ್ಸಿನಲ್ಲಿ ಮಹಿಳೆಯೇ ತುಂಬಿ ಹೋಗಿದ್ದಾರೆ. ಇದರಿಂದಾಗಿ ಪುರುಷರು ದುಡ್ಡುಕೊಟ್ಟು ಮಂಗಳೂರು ತನಕ ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಆದ್ದರಿಂದ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಗಣೇಶ್ ಪೊಸೊಳಿಕೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಅಧಿಕಾರಿ ಸುರೇಶ್ ಅವರು, ಈಗ ಬಸ್ಸಿನಲ್ಲಿ ಮಹಿಳೆಯರ ಪ್ರಯಾಣ ಮೂರುಪಟ್ಟು ಹೆಚ್ಚಳಗೊಂಡಿದೆ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇರುವುದರಿಂದ ಹೆಚ್ಚುವರಿ ಬಸ್ಸು ಓಡಾಟಕ್ಕೆ ಸಮಸ್ಯೆಯಾಗಿದೆ. ಗ್ರಾಮಸ್ಥರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿಯೇ ಬರಬೇಕು:
ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್ ಅವರು ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ಗ್ರಾಮಸ್ಥ ಆನಂದ ಕೆ.ಪಿ.,ಅವರು ಮಾತನಾಡಿ, ಇಲಾಖೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇದ್ದಲ್ಲಿ ನೀವು ಮಾಹಿತಿ ಕೊಡುವುದು ಬೇಡ. ನೆಲ್ಯಾಡಿಯ ಅಂಬೇಡ್ಕರ್ ಭವನದ ವಿಚಾರ ಯಾವ ಹಂತಕ್ಕೆ ಬಂದಿದೆ. ಮೊರಾರ್ಜಿ ದೇಸಾಯಿ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಇದರ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೇಶ್ ಅವರು, ಈ ಕುರಿತು ನಮ್ಮಲ್ಲಿ ಮಾಹಿತಿ ಇಲ್ಲ. ಮೇಲಾಧಿಕಾರಿಗಳ ಸೂಚನೆಯಂತೆ ಸಭೆಗೆ ಬಂದಿದ್ದೇನೆ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಅಣ್ಣಿ ಎಲ್ತಿಮಾರ್ ಅವರು, ನೀವು ಸಭೆಗೆ ಬಂದಿರುವುದರಿಂದ ಇಲಾಖೆಯ ಮಾಹಿತಿ ನೀಡಿ. ಮುಂದಿನ ಗ್ರಾಮಸಭೆಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಯವರೇ ಬರಬೇಕು. ಅವರು ಬಾರದೇ ಇದ್ದಲ್ಲಿ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದರು.