ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಹೆಸರಿನಲ್ಲಿ ಆರ್ತಿಲ ನೂಜಿ ಎಂಬಲ್ಲಿ ಎರಡೂಕಾಲು ಎಕರೆ ಕೃಷಿ ಭೂಮಿಯಿದ್ದು, ಇಲ್ಲಿ ನೀರಿನ ಕೊರತೆ ಕಂಡು ಬಂದಿದ್ದರಿಂದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮನವಿಯ ಮೇರೆಗೆ ರಾಜ್ ಬೋರ್ವೆಲ್ಸ್ನ ಮಾಲಕರಾದ ಕೃಷ್ಣರಾಜ್ ಅವರು ಸೇವಾರ್ಥವಾಗಿ ಕೊಳವೆಬಾವಿಯನ್ನು ಕೊರೆಸಿಕೊಟ್ಟು ಅಲ್ಲಿನ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ.
ಈ ಜಾಗದಲ್ಲಿ ತೆಂಗು ಸೇರಿದಂತೆ ಇತರ ಕೃಷಿಗಳಿದ್ದವು. ಆದರೆ ಇಲ್ಲಿ ಕೃಷಿಗೆ ನೀರಿನ ಕೊರತೆ ಕಂಡು ಬಂದಿತ್ತು. ಈ ಬಗ್ಗೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಿ. ಕೃಷ್ಣರಾವ್ ಆರ್ತಿಲ ಅವರು ವಿಶೇಷ ಮುತುವರ್ಜಿ ವಹಿಸಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮೂಲಕ ರಾಜ್ ಬೋರ್ವೆಲ್ಸ್ನ ಮಾಲಕರಾದ ಕೃಷ್ಣರಾಜ್ ಅವರಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಕೃಷ್ಣರಾಜ್ ಅವರು ಅಲ್ಲಿ ಫೆ.28ರಂದು ಸೇವಾ ರೂಪದಲ್ಲಿ ಉಚಿತವಾಗಿ ಕೊಳವೆ ಬಾವಿಯನ್ನು ಕೊರೆಸಿಕೊಟ್ಟಿದ್ದು, ಸುಮಾರು ಐದು ಇಂಚಿನಷ್ಟು ನೀರು ಕೊಳವೆ ಬಾವಿಯಲ್ಲಿ ಸಿಕ್ಕಿದೆ. ಇದರಿಂದ ಆ ಜಾಗದಲ್ಲಿದ್ದ ನೀರಿನ ಸಮಸ್ಯೆ ನೀಗಿದಂತಾಗಿದೆ.
ಕೊಳವೆ ಬಾವಿ ಕೊರೆಸುವ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯ್ಕ್, ಸದಸ್ಯರಾದ ಕೆ. ಹರೀಶ ಉಪಾಧ್ಯಾಯ, ಬಿ. ಗೋಪಾಲ ಕೃಷ್ಣ ರೈ, ಸೋಮನಾಥ, ಜಿ. ಕೃಷ್ಣರಾವ್ ಆರ್ತಿಲ, ಡಾ. ರಮ್ಯ ರಾಜಾರಾಮ್, ದೇವಿದಾಸ್ ರೈ ಬಿ.,ಅನಿತಾ ಕೇಶವ ಗೌಡ, ಎಂ. ವೆಂಕಪ್ಪ ಪೂಜಾರಿ ಇದ್ದರು.