ತನ್ನಿಬ್ಬರು ಮಕ್ಕಳನ್ನು ಪಾಣಾಜೆಯಲ್ಲಿ ಕೆರೆಗೆ ತಳ್ಳಿ ಕೊಲೆಗೈದ ಪ್ರಕರಣ : ಅಪರಾಧಿ ರಮೇಶ್ ನಾಯ್ಕನಿಗೆ ಮರಣದಂಡನೆ ಶಿಕ್ಷೆ ಮಾರ್ಪಡಿಸಿ ಸುಪ್ರೀಂ ಕೋರ್ಟ್ ಆದೇಶ

0

‘ದೇವರು ನೀಡಿದ ದಿನಗಳ ಕೊನೆಯವರೆಗೂ ಜೈಲಲ್ಲಿಯೇ ಇರಬೇಕು’

ಪುತ್ತೂರು: ತುಮಕೂರಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ತನ್ನ ನಾದಿನಿ ಹಾಗೂ ಅತ್ತೆಯನ್ನು ಕೊಲೆಗೈದು ನೀರಿನ ಟ್ಯಾಂಕ್‌ನಲ್ಲಿ ಹಾಕಿ ಎರಡು ದಿನಗಳ ಬಳಿಕ ತನ್ನ ಪುಟ್ಟ ಮಕ್ಕಳಿಬ್ಬರನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ನಡೆಸಿದ್ದ ಅಪರಾಧಿಯಾಗಿರುವ ಪಾಣಾಜೆಯ ರಮೇಶ್ ನಾಯ್ಕನಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಮರಣ ದಂಡನೆಯನ್ನು ಮಾರ್ಪಡಿಸಿ, ದೇವರು ನೀಡಿರುವ ಆಯುಷ್ಯದ ಕೊನೆಯ ತನಕವೂ ಆತ ಜೈಲಲ್ಲಿಯೇ ಇರುವಂತೆ ಆದೇಶಿಸಿದೆ.


ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್ ಇದನ್ನು ಎತ್ತಿಹಿಡಿದಿತ್ತು.ಇದನ್ನು ಪ್ರಶ್ನಿಸಿ ರಮೇಶ್ ನಾಯ್ಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ತನಗೆ ವಿಧಿಸಲಾದ ಮರಣ ದಂಡನೆ ಶಿಕ್ಷೆಯ ಬದಲು ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಿದ್ದ. ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ಮಕ್ಕಳಿಬ್ಬರ ಹತ್ಯೆಗೆ ನೀಡಲಾಗಿದ್ದ ಮರಣ ದಂಡನೆಯನ್ನು ರದ್ದುಪಡಿಸಿ, ಜೀವನದ ಕೊನೆಯ ಉಸಿರಿನ ತನಕವೂ ಜೈಲಲ್ಲಿಯೇ ಕಳೆಯುವಂತೆ ಅಪರಾಧಿಗೆ ಆದೇಶಿಸಿದೆ.


ಏನಿದು ಪ್ರಕರಣ:

ಪಾಣಾಜೆ ಅರ್ಧಮೂಲೆಯ ಕೃಷ್ಣ ನಾಯ್ಕರ ಮಗ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರಮೇಶ್ ನಾಯ್ಕ(೪೦ವ.) ತನ್ನ ಮಕ್ಕಳಾದ ಭುವನರಾಜ್(೧೦ವ) ಮತ್ತು ಕೃತಿಕಾ(೩ವ)ರವರನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ಅದಕ್ಕಿಂತ ಎರಡು ದಿನದ ಮೊದಲು ತನ್ನ ಅತ್ತೆ, ಮುಂಡೂರು ಗ್ರಾಮದ ಪಂಜಳ ಸಮೀಪದ ಉದಯಗಿರಿಯವರಾಗಿದ್ದ ಸರಸ್ವತಿ(೬೦ವ.)ಹಾಗೂ ನಾದಿನಿ ಸವಿತಾ(೨೮ವ.)ರವರನ್ನು ತುಮಕೂರಿನಲ್ಲಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದ ತುಮಕೂರು ಮತ್ತು ಪುತ್ತೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರ ವಾದ ಆಲಿಸಿದ ತುಮಕೂರು ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಪುತ್ತೂರು ನ್ಯಾಯಾಲಯ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು.


ಮಕ್ಕಳ ಕೊಲೆ ನಡೆದ ೨ ದಿನ ಬಳಿಕ ಅತ್ತೆ, ನಾದಿನಿಯ ಕೊಲೆ ಪ್ರಕರಣ ಬಯಲಾಗಿತ್ತು:

ತುಮಕೂರು ಜಿಲ್ಲೆಯ ಬನಶಂಕರಿ ೨ನೇ ಸ್ಟೇಜ್‌ನ ಕುಮುಟಾ ಲೇ ಔಟ್‌ನಲ್ಲಿ ‘ಸೌರಭ ನಿಲಯ’ ಹೊಂದಿದ್ದ ರಮೇಶ್ ನಾಯ್ಕ ೨೦೧೦ರ ಜೂ.೧೪ರಂದು ತನ್ನ ಅತ್ತೆ ಸರಸ್ವತಿ ಮತ್ತು ನಾದಿನಿ ಸವಿತಾರವರನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಬಳಿಕ ಜೂ.೧೬ರಂದು ಪಾಣಾಜೆ ಅರ್ಧಮೂಲೆಯಲ್ಲಿರುವ ವಕೀಲರೋರ್ವರ ತೋಟದ ಕೆರೆಗೆ ತಳ್ಳಿ ತನ್ನ ಪುಟ್ಟ ಮಕ್ಕಳಾದ ಭುವನರಾಜ್ ಹಾಗು ಕೃತಿಕಾರವರನ್ನು ಕೊಲೆಗೈದಿರುವುದಾಗಿ ಆರೋಪಿಸಲಾಗಿತ್ತು. ಸೊಲ್ಲಾಪುರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರಮೇಶ್ ನಾಯ್ಕ್ ತುಮಕೂರಿನಲ್ಲಿ ಮನೆಯೊಂದನ್ನು ಹೊಂದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ತುಮಕೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಪತ್ನಿ ಸುಂದರಿ, ಮಕ್ಕಳಾದ ಭುವನರಾಜ್, ಕೃತಿಕಾ ಮತ್ತು ಸುಂದರಿಯವರ ತಂಗಿ ಸವಿತಾರವರೊಂದಿಗೆ ಅಲ್ಲಿ ವಾಸವಾಗಿದ್ದರು.ಸುಂದರಿಯವರಿಗೆ ಮಂಗಳೂರು ಅಳಪೆ ಶಾಖೆಗೆ ವರ್ಗಾವಣೆಯಾದ ಬಳಿಕ ಅವರು ಮಂಗಳೂರಿನ ಮಂಗಳಾದೇವಿ ಬಳಿ ಬಾಡಿಗೆ ಮನೆಯಲ್ಲಿ ಮಕ್ಕಳಾದ ಭುವನರಾಜ್, ಕೃತಿಕಾ ಮತ್ತು ರಮೇಶ್ ನಾಯ್ಕ್‌ರವರ ತಾಯಿ ಲಕ್ಷ್ಮೀಯವರೊಂದಿಗೆ ವಾಸವಾಗಿದ್ದರು.

ರಮೇಶ್ ನಾಯ್ಕ್‌ರವರು ಸೊಲ್ಲಾಪುರದಲ್ಲಿಯೇ ತಂಗುತ್ತಿದ್ದುದರಿಂದ ಮತ್ತು ಅಕ್ಕನಿಗೆ ವರ್ಗಾವಣೆಯಾಗಿ ಮಕ್ಕಳೊಂದಿಗೆ ತೆರಳಿರುವುದರಿಂದ ತುಮಕೂರಿನ ಮನೆಯಲ್ಲಿ ತಾನು ಒಂಟಿಯಾಗಿರುವುದನ್ನು ತಪ್ಪಿಸಲೆಂದು ಸವಿತಾರವರು ತನ್ನ ತಾಯಿ ಸರಸ್ವತಿಯವರನ್ನು ಕೃತ್ಯ ನಡೆಯುವ ಕೆಲವು ದಿನಗಳ ಹಿಂದೆ ಪಂಜಳ ಉದಯಗಿರಿಯಿಂದ ತುಮಕೂರಿಗೆ ಕರೆದುಕೊಂಡು ಹೋಗಿದ್ದರು. ಮೂರು ವರ್ಷಗಳಿಂದ ಅಕ್ಕ ಸುಂದರಿಯವರೊಂದಿಗೆ ತುಮಕೂರಿನಲ್ಲಿ ವಾಸವಿದ್ದ ಸವಿತಾರವರಿಗೆ ೨೦೦೯ರಲ್ಲಿ ಬೆಂಗಳೂರಿನ ಪೀಣ್ಯದಲ್ಲಿರುವ ಭವಿಷ್ಯ ನಿಧಿ ಕಛೇರಿಯಲ್ಲಿ ಉದ್ಯೋಗ ದೊರಕಿತ್ತು. ಅವರು ತನ್ನ ಸಹೋದ್ಯೋಗಿ ಮೋಹನ್ ಎಂಬವರನ್ನು ಪ್ರೀತಿಸುತ್ತಿದ್ದರಲ್ಲದೆ, ತಾನು ಸವಿತಾರವರನ್ನು ಮದುವೆಯಾಗುವುದಾಗಿ ಮೋಹನ್‌ರವರು ರಮೇಶ್ ನಾಯ್ಕರಲ್ಲಿ ಹೇಳಿದ್ದರು. ನಾದಿನಿ ಸವಿತಾರವರಿಗೆ ಚಿಕ್ಕ ಪ್ರಾಯದಿಂದಲೇ ವಿದ್ಯಾಭ್ಯಾಸ ಕೊಡಿಸಿ, ಕೆಲಸ ತೆಗೆಸಿಕೊಟ್ಟು ಅವರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ ರಮೇಶ್ ನಾಯ್ಕ್‌ರವರು ಮೋಹನ್-ಸವಿತಾರವರ ನಡುವಿನ ಪ್ರೇಮ ವ್ಯವಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ ಮೋಹನ್‌ರವರನ್ನು ಮದುವೆ ಆಗಬಾರದು ಎಂದು ಸವಿತಾರಿಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಸವಿತಾರವರು ತಾನು ಮೋಹನ್‌ರವರನ್ನು ಪ್ರೀತಿಸುತ್ತಿಲ್ಲ ಎಂದು ಬಾವ ಮತ್ತು ಅಕ್ಕನಿಗೆ ತಿಳಿಸಿದ್ದರು. ಸವಿತಾ ಮತ್ತು ಮೋಹನ್ ನಡುವಿನ ಪ್ರೀತಿ ವಿಚಾರವನ್ನು ಮುಂದಿಟ್ಟುಕೊಂಡು ರಮೇಶ್‌ರವರು ಪತ್ನಿ ಸುಂದರಿಯವರನ್ನು ಪದೇ ಪದೇ ಕೆಣಕುತ್ತಿದ್ದರು. ನಾದಿನಿ ತನ್ನ ಮಾತು ಕೇಳುತ್ತಿಲ್ಲ ಎಂದು ಆಕ್ರೋಶಗೊಂಡ ರಮೇಶ್ ನಾಯ್ಕ್ ರವರು ತುಮಕೂರಿನಲ್ಲಿರುವ ತಮ್ಮ ನಿವಾಸದಲ್ಲಿ ಜೂ.೧೪ರಂದು ನಾದಿನಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು, ಇದನ್ನು ನೋಡಿದ್ದ ಅತ್ತೆ ಸರಸ್ವತಿಯವರನ್ನೂ ಅದೇ ರೀತಿ ಕೊಲೆ ಮಾಡಿ ಮನೆಯ ನೀರಿನ ಟ್ಯಾಂಕ್‌ಗೆ ಹಾಕಿದ್ದರು.

ಜೂ.೧೫ರಂದು ಆತ ಮಂಗಳೂರಿನಲ್ಲಿರುವ ಪತ್ನಿಯ ಬಾಡಿಗೆ ಮನೆಗೆ ಬಂದಿದ್ದರು. ಅಲ್ಲಿ ಪತ್ನಿ ಜತೆ ಜಗಳವಾಡಿದ್ದ ರಮೇಶ್ ನಾಯ್ಕ್ ಬಳಿಕ ಪರಿಚಿತನ ಕಾರನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ತನ್ನಿಬ್ಬರು ಮಕ್ಕಳ ಜತೆ ಪುತ್ತೂರಿಗೆ ಬಂದಿದ್ದರು. ಪುತ್ತೂರಿನಿಂದ ಆರ್ಲಪದವು ಅರ್ಧಮೂಲೆಗೆ ಬಂದಿದ್ದ ರಮೇಶ್ ನ್ಯಾಯವಾದಿ ಕೃಪಾಶಂಕರ್‌ರವರ ತೋಟದ ಕೆರೆಗೆ ಮಕ್ಕಳನ್ನು ದೂಡಿ ಹಾಕಿ ಕೊಲೆಗೈದಿದ್ದರು. ಬಳಿಕ ಆತ ಪುತ್ತೂರಿನ ರಾಮಲಾಡ್ಜ್‌ನಲ್ಲಿ ರೂಮೊಂದನ್ನು ಪಡೆದುಕೊಂಡು ಅಲ್ಲಿ ತಂಗಿದ್ದರು. ತನ್ನ ಇಬ್ಬರು ಮಕ್ಕಳ ಜತೆ ಹೊರಗೆ ಹೋಗಿ ಬರುವುದಾಗಿ ಹೋಗಿದ್ದ ಪತಿ ಹಾಗೂ ಮಕ್ಕಳು ರಾತ್ರಿ ೯ ಗಂಟೆಯವರೆಗೂ ಮನೆಗೆ ಬಾರದೇ ಇರುವುದರಿಂದ ಆತಂಕಗೊಂಡ ಸುಂದರಿಯವರು ಪತಿ ರಮೇಶ್‌ರವರ ಮೊಬೈಲ್ ಫೋನ್‌ ಗೆ ಕರೆ ಮಾಡಿದ್ದರೂ ಅವರು ಕರೆ ಸ್ವೀಕರಿಸಿರಲಿಲ್ಲ, ಬಳಿಕ ತುಮಕೂರಿನಲ್ಲಿರುವ ತನ್ನ ತಾಯಿ ಹಾಗೂ ತಂಗಿಗೆ ದೂರವಾಣಿ ಕರೆ ಮಾಡಿದರೆ ಅಲ್ಲಿಯೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಆತಂಕಿತರಾದ ಸುಂದರಿಯವರು ಬಳಿಕ ಮುಂಡೂರು ಉದಯಗಿರಿಯಲ್ಲಿರುವ ತನ್ನ ಅಣ್ಣ ಐತ್ತಪ್ಪ ನಾಯ್ಕ್‌ರವರಿಗೆ ದೂರವಾಣಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಐತ್ತಪ್ಪ ನಾಯ್ಕ್‌ರವರು ಬಾವ ರಮೇಶ್ ಮತ್ತು ಮಕ್ಕಳು ಇಲ್ಲಿಗೆ ಬಂದಿಲ್ಲ ಎಂದು ತಿಳಿಸಿದ್ದರು. ಬಳಿಕ ಸುಂದರಿಯವರು ಈ ಹಿಂದೆ ವಾಸವಾಗಿದ್ದ ಅರ್ಧಮೂಲೆ ಪರಿಸರದ ಕೆಲವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ, ಕಾರೊಂದರಲ್ಲಿ ರಮೇಶ್ ನಾಯ್ಕ್ ಮತ್ತು ಮಕ್ಕಳು ಇತ್ತ ಬಂದಿರುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಸುಂದರಿಯವರು, ಪತಿ ಮತ್ತು ಮಕ್ಕಳನ್ನು ಕರೆದುಕೊಂಡು ಬಂದಿದ್ದ ಕಾರು ಚಾಲಕನ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದಾಗ, ರಮೇಶ್ ಮತ್ತು ಮಕ್ಕಳನ್ನು ತಾನು ಆರ್ಲಪದವು ಬಳಿ ಬಿಟ್ಟು ಮಂಗಳೂರಿಗೆ ಹಿಂತಿರುಗಿ ಬರುತ್ತಿರುವುದಾಗಿ ಕಾರು ಚಾಲಕ ತಿಳಿಸಿದ್ದರು. ಇದರಿಂದ ಸಂಶಯಗೊಂಡ ಸುಂದರಿಯವರು, ನೀವು ಪುತ್ತೂರಿನಲ್ಲೇ ನಿಲ್ಲಿ, ನಾವು ಅಲ್ಲಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಚಾಲಕ ತನ್ನ ಕಾರನ್ನು ಸಂಟ್ಯಾರ್ ಸಮೀಪ ನಿಲ್ಲಿಸಿದ್ದರು.


ಕೆರೆಯಲ್ಲಿ ಶವ ಪತ್ತೆ:

ಮಂಗಳೂರಿನಿಂದ ಪಂಜಳಕ್ಕೆ ಬಂದ ಸುಂದರಿಯವರು ತನ್ನ ತಂದೆ ಈಶ್ವರ ನಾಯ್ಕರನ್ನು ಕರೆದುಕೊಂಡು ಕಾರು ಚಾಲಕನೊಂದಿಗೆ ಆರ್ಲಪದವಿಗೆ ತೆರಳಿ ರಮೇಶ್ ಮತ್ತು ಮಕ್ಕಳನ್ನು ಬಿಟ್ಟು ಬಂದಿದ್ದ ಸ್ಥಳದೆಡೆಗೆ ತೆರಳಿದ್ದರು. ಅಲ್ಲಿ ಸ್ಥಳೀಯರು ಹುಡುಕಾಡಿದಾಗ ಅರ್ಧಮೂಲೆಯ ಕೆರೆಯಲ್ಲಿ ಭುವನ್‌ರಾಜ್ ಶವ ಪತ್ತೆಯಾಗಿತ್ತು, ಸ್ವಲ್ಪ ಹೊತ್ತಿನಲ್ಲಿ ಕೃತಿಕಾ ಅವರ ಶವವೂ ದೊರೆಯಿತು. ಮಕ್ಕಳನ್ನು ಕೊಂದು ರಮೇಶ್ ನಾಯ್ಕ್ ರವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು ಅವರ ಶವವೂ ಕೆರೆಯಲ್ಲಿ ಇರಬಹುದು ಎಂಬ ಸಂಶಯದಲ್ಲಿ ಹುಡುಕಾಟ ಮುಂದುವರಿಸಲಾಗಿತ್ತು.


ಮಕ್ಕಳ ಶವ ಕೆರೆಯಲ್ಲಿ ದೊರೆತಿರುವುದರಿಂದ ತಂದೆ ರಮೇಶ್ ಪುತ್ತೂರು ಪರಿಸರದಲ್ಲಿಯೇ ಇರಬಹುದು ಎಂಬ ಸಂಶಯದಲ್ಲಿ ಪೊಲೀಸರು ಮತ್ತು ಆತನ ಸಂಬಂಧಿಕರು ವಿವಿಧ ಕಡೆಗಳಲ್ಲಿ ಶೋಧ ನಡೆಸಿದ್ದರು. ವಿವಿಧ ಲಾಡ್ಜ್‌ಗಳಲ್ಲಿಯೂ ಶೋಧ ನಡೆಸಲಾಗಿತ್ತು. ಪುತ್ತೂರು ನಗರ ಠಾಣಾಧಿಕಾರಿಯಾಗಿದ್ದ ಬಿ.ಕೆ.ಮಂಜಯ್ಯ ಮತ್ತು ಸಿಬ್ಬಂದಿಗಳು ರಾಮ ಲಾಡ್ಜ್‌ಗೆ ತೆರಳಿ ಹುಡುಕಾಡಿದಾಗ ಅಲ್ಲಿ ರಮೇಶ್ ನಾಯ್ಕ್ ಪಾನಮತ್ತನಾಗಿ ಮಲಗಿದ್ದ. ಲಾಡ್ಜ್‌ನಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಮಕ್ಕಳ ಹತ್ಯೆಗೆ ಸಂಬಂಧಿಸಿ ಆತನನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಮಕ್ಕಳನ್ನಲ್ಲದೆ ಅತ್ತೆ, ನಾದಿನಿಯನ್ನು ಎರಡು ದಿನಗಳ ಹಿಂದೆಯೇ ತುಮಕೂರಿನಲ್ಲಿದ್ದ ತನ್ನ ಮನೆಯಲ್ಲಿ ಕೊಲೆ ಮಾಡಿ ಬಂದಿರುವುದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಆ ನಂತರ ಇನ್ಸ್‌ಪೆಕ್ಟರ್ ಮಂಜಯ್ಯರವರು ತುಮಕೂರು ಪೊಲೀಸರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದರು. ತುಮಕೂರು ಪೊಲೀಸರು ಹೋಗಿ ರಮೇಶ್‌ರವರ ಅಲ್ಲಿನ ಮನೆಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಸರಸ್ವತಿ ಮತ್ತು ಸವಿತಾರವರು ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು. ಮಕ್ಕಳನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಠಾಣೆಯಲ್ಲಿ ಮತ್ತು ಅತ್ತೆ, ನಾದಿನಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಆಪಾದಿತನ ವಿರುದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಸ್ತುತ ಪಶ್ಚಿಮ ವಲಯ ಐಜಿಪಿ ಆಗಿರುವ ಆಗಿನ ಪುತ್ತೂರು ಎ.ಎಸ್.ಪಿ. ಅಮಿತ್ ಸಿಂಗ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.


ಮಕ್ಕಳ ಹತ್ಯೆಗೆ ಗಲ್ಲು ಶಿಕ್ಷೆ:

ಮಕ್ಕಳನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ಜಿಲ್ಲಾ ಐದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಟಿ.ಜಿ.ಶಿವಶಂಕರೇ ಗೌಡರವರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ೨೦೧೩ರ ದ.೩ರಂದು ತೀರ್ಪು ನೀಡಿದ್ದರು. ಆ ಸಂದರ್ಭ ಸರಕಾರದ ಪರ ಸರಕಾರಿ ಅಭಿಯೋಜಕ, ಪ್ರಸ್ತುತ ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿಯಾಗಿರುವ ಕೆ.ಶಿವಪ್ರಸಾದ್ ಆಳ್ವ ಅವರು ವಾದಿಸಿದ್ದರು. ಮಕ್ಕಳೆಂದರೆ ದೇವರ ಸಮಾನ. ತನ್ನ ಸ್ವಂತ ಮಕ್ಕಳನ್ನೇ ಕೊಂದ ಈ ಪ್ರಕರಣ ಅತೀ ಘೋರವಾಗಿದ್ದು ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಆತನಿಗೆ ಮರಣದಂಡನೆಗಿಂತ ಕಡಿಮೆ ಯಾವ ಶಿಕ್ಷೆಯನ್ನೂ ನೀಡಬಾರದು ಎಂದು ಶಿವಪ್ರಸಾದ ಆಳ್ವ ಆಗ್ರಹಿಸಿದ್ದರು.

ರಮೇಶ ನಾಯ್ಕ ಏಳರಿಂದ ನಾಲ್ಕು ವರ್ಷಗಳ ಒಳಗಿರುವ ತನ್ನ ಪುಟ್ಟ ಮಕ್ಕಳನ್ನು ಕೊಂದಿದ್ದಾನೆ. ಮಕ್ಕಳೆಂದರೆ ದೇವರ ಸಮಾನ. ಅಂತ ಮುಗ್ಧ ಮಕ್ಕಳನ್ನೇ ಕೊಂದಾತ ನಿರ್ದಯಿ ಹಂತಕ, ತಾನು ರಕ್ಷಿಸಬೇಕಾದ ಜೀವಗಳನ್ನೇ ಆತ ಬಲಿ ಹಾಕಿದ್ದಾನೆ.ಆತ ಕೊನೆಗಳಿಗೆಯಲ್ಲಾದರೂ ಮಕ್ಕಳ ಮೇಲೆ ಕರುಣೆ ತೋರಿಸಬಹುದಿತ್ತು.ಆದರೆ ಆತ ಅದನ್ನು ತೋರಲೇ ಇಲ್ಲ. ಮಕ್ಕಳನ್ನು ಕೆರೆಗೆ ಅಮಾನುಷವಾಗಿ ದೂಡಿ ಹಾಕಿ ಕೊಂದ ಆತನ ವೈಖರಿ ತೀರಾ ಭೀಕರವಾದುದು,ನಾಗರಿಕ ಸಮಾಜದಲ್ಲಿ ಬದುಕುವ ಹಕ್ಕನ್ನೇ ಆತ ಕಳೆದುಕೊಂಡಿರುವುದರಿಂದ ಆತನಿಗೆ ಮರಣ ದಂಡನೆ ಶಿಕ್ಷೆಯನ್ನೇ ವಿಧಿಸುವಂತೆ ಶಿವಪ್ರಸಾದ್ ಆಳ್ವ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಧೀಶರು ಮಕ್ಕಳ ಹಂತಕನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದರು. ಪುತ್ತೂರಿನ ಇತಿಹಾಸದಲ್ಲಿಯೇ ಮರಣ ದಂಡನೆಯ ಪ್ರಥಮ ತೀರ್ಪು ಇದಾಗಿತ್ತು.ಹೈಕೋರ್ಟ್ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿತ್ತು.ಇದರ ವಿರುದ್ಧ ಅಪರಾಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಸುಪ್ರೀಂ ಕೋರ್ಟ್ ಹೇಳಿದ್ದು…
ಮಕ್ಕಳ ಹತ್ಯೆಗೆ ತನಗೆ ಮರಣ ದಂಡನೆ ವಿಧಿಸಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಇದನ್ನು ಖಾಯಂಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಅಪರಾಧಿ ರಮೇಶ್ ನಾಯ್ಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲು, ತನ್ನ ಪರವಾಗಿ ಇರುವ ಸೌಮ್ಯ ಮತ್ತು ಉಲ್ಬಣಗೊಳಿಸುವ ಸಂದರ್ಭಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸಿಲ್ಲ ಎಂದು ಆತ ವಾದಿಸಿದ್ದ. ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯ ಪೀಠವು ಮೇಲ್ಮನವಿಯ ವಿಚಾರಣೆ ನಡೆಸಿತು. ಆಕ್ಷೇಪಾರ್ಹ ನಿರ್ಧಾರವನ್ನು ಪರಿಶೀಲಿಸಿದ ನಂತರ, ಅಪರಾಧದ ಅನಾಗರಿಕತೆ ಮತ್ತು ತಮ್ಮ ತಂದೆಯಿಂದ ಕೊಲ್ಲಲ್ಪಟ್ಟ ಮಕ್ಕಳ ಅಸಹಾಯಕತೆಯನ್ನು ನ್ಯಾಯಪೀಠ ಒಪ್ಪಿಕೊಂಡಿತು.ಆದಾಗ್ಯೂ,ಮೇಲ್ಮನವಿದಾರನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳಿಲ್ಲ ಮತ್ತು ಮೃತ ವ್ಯಕ್ತಿಗಳೊಂದಿಗೆ ಘಟನೆಗೆ ಮೊದಲು ಆತ ಉತ್ತಮ ಸಂಬಂಧ ಹೊಂದಿದ್ದ.ಆದರೆ ಇವುಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸಲಿಲ್ಲ.ಎಲ್ಲಾ ತಗ್ಗಿಸುವ ಮತ್ತು ಉಲ್ಬಣಗೊಳಿಸುವ ಸಂದರ್ಭಗಳನ್ನು ಪರಿಗಣಿಸಿದನಂತರ ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬೇಕು’ ಎಂದು ಒತ್ತಿ ಹೇಳಿದ ನ್ಯಾಯಪೀಠ, ಶಿಕ್ಷೆಯ ಮಾರ್ಪಾಡಿನ ಮೇಲ್ಮನವಿಗಳನ್ನು ಭಾಗಶಃ ಅನುಮತಿಸಿದೆ.ಗಲ್ಲಿಗೇರಿಸುವ ಕುಣಿಕೆಯನ್ನು ಶಿಕ್ಷಿತನ ಕುತ್ತಿಗೆಯಿಂದ ತೆಗೆಯಬೇಕು ಮತ್ತು ಸರ್ವಶಕ್ತ ದೇವರು ನೀಡಿದ ಅವನ ದಿನಗಳ ಕೊನೆಯವರೆಗೂ ಅವನು ಜೈಲಿನಲ್ಲಿಯೇ ಇರಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

LEAVE A REPLY

Please enter your comment!
Please enter your name here