ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಸಂಬಂಧಿಸಿ ಪೋಷಕರಿಗೆ ಕಾರ್ಯಾಗಾರ ನಡೆಯಿತು. ವಿದ್ಯಾಭಾರತಿ ಕ್ಷೇತ್ರೀಯ ಶಿಶು ಶಿಕ್ಷಣ ಸಹಪ್ರಮುಖರಾದ ತಾರಾ ಕಾಳಿಚರಣ್- ಬೆಂಗಳೂರು ಇವರು ಶಾಲಾ ಪೂರ್ವ ಪ್ರಾಥಮಿಕ, ಒಂದನೇ ಹಾಗೂ 2ನೇ ತರಗತಿಯ ಪೋಷಕರೊಂದಿಗೆ ಮಾತನಾಡುತ್ತಾ ಸೊನ್ನೆಯಿಂದ 9 ವರ್ಷದವರೆಗಿನ ಮಗುವಿನ ಬೆಳವಣಿಗೆಯಲ್ಲಿ ಮನೆ, ಶಾಲೆ, ಸಮಾಜ ಪ್ರಮುಖ ಪಾತ್ರ ವಹಿಸುತ್ತಿದ್ದು, ಮನೆ ಮತ್ತು ಶಾಲೆ ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭ ಮಗು ನೋಡಿ ಕಲಿಯುವ ಸಂಗತಿಗಳೇ ಅತೀ ಹೆಚ್ಚಾಗಿರುವುದರಿಂದ ಹಿರಿಯರಾದ ನಾವೇ ನಿರಂತರ ನಮ್ಮನ್ನು ಕಲಿಕೆಗೆ ತೆರೆದುಕೊಳ್ಳಬೇಕು.ಆದ್ದರಿಂದ ಚಟುವಟಿಕೆ ಪ್ರಧಾನ ಕಲಿಕೆಯ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ನಿರಂತರ ತರಬೇತಿ ಪಡೆಯುತ್ತಿರಬೇಕು ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ್ಚಂದ್ರ ಎಂ, ಪ್ರೌಢ ವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಮೂರು ವಿಭಾಗದ ಮಕ್ಕಳಿಂದ ಶಬ್ದ ಮತ್ತು ವಾಸನಾ ಗ್ರಹಿಕೆ ಹಾಗೂ ಅಭಿವ್ಯಕ್ತಿ ಅಕ್ಷರಗಳಿಂದ ಪದ ರಚನೆ, ದೈಹಿಕ ಆರೋಗ್ಯ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆಗಳು ಪ್ರದರ್ಶಿಸಲ್ಪಟ್ಟವು.