ಚೆರುಮೋತ್ ಉಸ್ತಾದ್ ಆಗಮನ, 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ಪ್ರತೀ ತಿಂಗಳು ನಡೆಸಿ ಕೊಂಡು ಬರುತ್ತಿರುವ ಮಜ್ಲಿಸುನ್ನೂರು ಹಾಗೂ ಬೃಹತ್ ಇಫ್ತಾರ್ ಕೂಟವು ಮಾ.7ರ ಶುಕ್ರವಾರ ಸಂಜೆ 3 ಗಂಟೆಗೆ ಮಾಡನ್ನೂರು ನೂರುಲ್ ಹುದಾ ಕ್ಯಾಂಪಸ್‌ನಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ.
ಖ್ಯಾತ ವಿದ್ವಾಂಸರೂ, ಸೂಫಿವರ್ಯರೂ ಆದ, ಶೈಖುನಾ ಚೆರುಮೋತ್ ಉಸ್ತಾದ್ ಮಜ್ಲಿಸುನೂರ್ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಡ್ವ. ಹನೀಫ್ ಹುದವಿ ಮುಖ್ಯ ಭಾಷಣ ನಡಸಲಿದ್ದಾರೆ. ಸೈಯ್ಯದ್ ಬುರ್ಹಾನ್ ಅಲಿ ತಂಳ್ ಅಲ್ ಬುಖಾರಿ ಕಾಸರಗೋಡು, ಮಾಡನ್ನೂರು ಜುಮಾ ಮಸೀದಿ ಖತೀಬರಾದ ಎಸ್.ಬಿ. ಮುಹಮ್ಮದ್ ದಾರಿಮಿ ಸಂದೇಶ ಭಾಷಣ ಮಾಡಲಿದ್ದಾರೆ.
ವಾಹನಗಳ ವ್ಯವಸ್ಥೆ :
ಇಫ್ತಾರ್ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಭಾರೀ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದು, ನೂರುಲ್ ಹುದಾ ವಲಯ ಸಮಿತಿಗಳು ಕುಂಬ್ರ, ಪುತ್ತೂರು, ಉಪ್ಪಿನಂಗಡಿ, ಕೊಡಗು, ಸುಳ್ಯ, ವಿಟ್ಲ, ಆತೂರು, ಕಡಬ ಮುಂತಾದ ಸ್ಥಳಗಳಿಂದ ಬಸ್ ಸೇರಿದಂತೆ ವಿವಿಧ ವಾಹನಗಳ ವ್ಯವಸ್ಥೆಯನ್ನು ಏರ್ಪಡಿಸಿದ್ದಾರೆ.
ಈ ಬೃಹತ್ ಸಂಗಮದಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ಉಲಮಾಗಳು, ಸಾದಾತುಗಳು, ಸಂಸ್ಥೆಯ ಆಡಳಿತ ಸಮಿತಿ ಸದಸ್ಯರು, ಪೋಷಕರು, ಹಿತೈಷಿಗಳು ಸೇರಿದಂತೆ ಸುಮಾರು 5 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಕಾರ್ಯ ಕ್ರಮಕ್ಕೆ ಆಗಮಿಸುವವರನ್ನು ಬರಮಾಡಿಕೊಳ್ಳಲು ಸ್ವಾಗತ ಸಮಿತಿಯು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಚೆರುಮೋತ್ ಉಸ್ತಾದ್ ಪರಿಚಯ:
ಕಲ್ಲಿಕೋಟೆಯ ನದಾಪುರಂ ಸಮೀಪವಿರುವ ಕಿಝಿಶ್ಶೇರಿ ನಿವಾಸಿಯಾಗಿರುವ ಬಹು. ಬಶೀರ್ ಬಾಖವಿ ಉಸ್ತಾದರು ಸದ್ಯ ಚೆರುಮೋತ್ ಎಂಬಲ್ಲಿ ದರ್ಸ್ ಶಿಕ್ಷಣ ಸೇರಿದಂತೆ ಆಧ್ಯಾತ್ಮಿಕ ಮಜ್ಲಿಸ್‌ಗಳಿಗೆ ನಾಯಕತ್ವ ನೀಡುತ್ತಾ ಬರುತ್ತಿದ್ದು, ಚೆರುಮೋತ್ ಉಸ್ತಾದ್ ಎಂದೇ ಖ್ಯಾತಿ ಪಡೆದಿದ್ದಾರೆ. ಪ್ರಮುಖ ವಿದ್ವಾಂಸರೂ, ಸೂಫಿವರ್ಯರೂ ಆಗಿರುವ ಇವರು ಉತ್ತಮ ಭಾಷಣಗಾರರು ಹೌದು. ಚೆರುಮೋತ್ ನಲ್ಲಿ ಇವರ ಮುಂದಾಳುತ್ವದಲ್ಲಿ ನಡೆಸಲ್ಪಡುವ ಸ್ವಲಾತ್ ಮಜ್ಲಿಸ್ ಹಾಗೂ ಾಮೂಹಿಕ ಪ್ರಾರ್ಥನೆಯು ಸಂತ್ರಸ್ತರ ಪಾಲಿಗೆ ದೊಡ್ಡ ಸಾಂತ್ವಾನ ತಾಣವಾಗಿ ಮಾರ್ಪಟ್ಟಿದೆ. ಸಾವಿರಾರು ಜನರು ಈ ಆಧ್ಯಾತ್ಮಿಕ ಮಜ್ಲಿಸ್ ನಲ್ಲಿ ಪಾಲ್ಗೊಂಡು, ತನ್ನ ಕಷ್ಟ-ನಷ್ಟ- ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ಭಾರೀ ಜನಪ್ರಿಯವಾಗಿದೆ.
ಇವರು ಎರಡನೇ ಬಾರಿಗೆ ಮಾಡನ್ನೂರು ನೂರುಲ್ ಹುದಾ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡಲು ಆಗಮಿಸುತ್ತಿದ್ದಾರೆ.