- ತೀಯಾ ಸಮುದಾಯದ ಇತಿಹಾಸ ಪ್ರಸಿದ್ಧ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಲ್ಲಿ ಮಾ.9 – ಮಾ.16 ರವರೆಗೆ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ
- ಮಾ. 20 – ಮಾ. 27 ರವರೆಗೆ ಭರಣಿ ಮಹೋತ್ಸವ
ತೀಯಾ ಸಮುದಾಯದ ಇತಿಹಾಸ ಪ್ರಸಿದ್ಧ 18 ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವು ವಿಟ್ಲ ಸೀಮೆಯ ಪುಣ್ಯ ಕ್ಷೇತ್ರಗಳಲ್ಲೊಂದು. ವಿಟ್ಲ ಅರಮನೆಯ ಅರಸರ ಆಡಳಿತಕೊಳಪಟ್ಟ ಕಾಲದಲ್ಲಿ ಈ ಕ್ಷೇತ್ರದಲ್ಲಿ ಬಹಳ ವಿಜೃಂಭಣೆಯಿಂದ ಪೂಜಾ ಉತ್ಸವಾದಿಗಳು ನಡೆಯುತ್ತಿದ್ದವು. ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದ ಇದೀಗ ಮತ್ತೆ ಜೀರ್ಣೊದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.
ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಅಳಿಕೆ ಗ್ರಾಮದ ಎರುಂಬು ಎಂಬ ಹಸಿರಿನ ನಡುವೆ ಶ್ರೀ ದೇವಿಯು ತನ್ನ ದೈವೀ ಶಕ್ತಿಯೊಂದಿಗೆ ನೆಲೆಯಾಗಿ ಭಕ್ತರನ್ನು ಹರಸಿಕೊಂಡು ಬಂದಿರುವುದು ಈ ಕ್ಷೇತ್ರದ ವಿಶೇಷತೆ. ’ಬೊಳ್ನಾಡು 40 ಬಿಲ್ಲಿ’ ಎಂದು ಕರೆಯಲ್ಪಡುವ ಈ ಕ್ಷೇತ್ರ ಬಹಳ ಕಾರಣಿಕದ ಸಕಲ ಸಮೃದ್ಧಿಯಿಂದ ಕೂಡಿದ ಅತ್ಯಂತ ಪುರಾತನ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.
600 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರ ಅನ್ಯರ ಆಕ್ರಮಣಕ್ಕೆ ಬಲಿಯಾಗಿ ಸಂಪೂರ್ಣ ನಾಶವಾಗಿತ್ತು. ತನ್ನದೇ ಇತಿಹಾಸ ಪೌರಾಣಿಕ ಹಿನ್ನಲೆಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಅನೇಕ ಪುರಾತನ ಕುರುಹುಗಳು ದೊರೆತಿದ್ದು, ಅಷ್ಟಮಂಗಲ ಪ್ರಶ್ನಾಚಿಂತನೆ ಪ್ರಕಾರ ಈ ಕ್ಷೇತ್ರಕ್ಕೆ ತೀಯಾ ಸಮುದಾಯದವರ, ಹಲವಾರು ಮಹನೀಯರ ಪ್ರಯತ್ನದ ನಂತರ ಮುಂಬೈ ಕೊಡುಗೈ ದಾನಿಗಳಾದ ಕೃಷ್ಣ ಎನ್ ಉಚ್ಚಿಲರವರಿಗೆ ಸ್ವಪ್ನದರ್ಶನವಾಗಿ ಕ್ಷೇತ್ರವನ್ನು ಅರಸುತ್ತಾ ಬಂದು ಪುನರ್ ನಿರ್ಮಾಣದ ಸಂಕಲ್ಪ ಮಾಡಿದರು.
ಕ್ಷೇತ್ರದ ಮೂಲ ನೆಲೆ ಕೈ ತಪ್ಪಿರುವುದರಿಂದ ದೈವ ಹಿತವನ್ನು ಕಂಡು ಸಮೀಪದಲ್ಲಿಯೇ ಬೇರೊಂದು ಜಾಗ ಖರೀದಿಸಿ 2016ರ ಅಕ್ಟೋಬರ್ ೨೦ ರಂದು ಗಣಹೋಮ ನಡೆಸಿ, ಊರಿನ ಅರಸರು, ಹಿರಿಯರು ಭಗವತೀ ಕ್ಷೇತ್ರಗಳ ಆಚಾರಪಟ್ಟವರ ಸಹಭಾಗಿತ್ವದಲ್ಲಿ ಮೂತ ಭಗವತೀ, ಎಳೆಯ ಭಗವತೀ, ದಂಡರಾಜ, ಘಂಠಾಕರ್ಣನ್, ವಿಷ್ಣುಮೂರ್ತಿ, ಧೂಮಾವತಿ, ಪಂಜುರ್ಲಿ, ಗುಳಿಗ ಮತ್ತು ನಾಗ ಸಾನಿಧ್ಯಗಳನ್ನೊಳಗೊಂಡ ಕ್ಷೇತ್ರದ ಬಗ್ಗೆ ಸಂಕಲ್ಪ ನಡೆಸಲಾಗಿತ್ತು. ಭಂಡಾರದ ಮನೆಯಲ್ಲಿ ನಿತ್ಯ ಪೂಜೆ ಮತ್ತು ಹೂವಿನ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತೀ ಮಂಗಳವಾರ ಇಲ್ಲಿ ಶ್ರೀ ದೇವಿಗೆ ಭಜನಾ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ
೨೦೧೭ನೇ ಮಾರ್ಚ್ ೧೬ರಂದು ಭೂಮಿ ಪೂಜೆ, ಶಿಲನ್ಯಾಸ ನಡೆದು ಇದೀಗ ಅತ್ಯಂತ ಸುಂದರವೂ, ವಿಸ್ತೃತವೂ ಆದ ಕ್ಷೇತ್ರ ಸಮುಚ್ಚಯವು ಬ್ರಹ್ಮಕಲಶದ ಸುಮೂಹರ್ತಕ್ಕೆ ಅಣಿಯಾಗಿ ನಿಂತಿದೆ.
8 ಕೋಟಿ ವೆಚ್ಚದಲ್ಲಿ ಕ್ಷೇತ್ರ ನಿರ್ಮಾಣ
ಬೊಳ್ನಾಡು 40 ಬಿಲ್ಲಿ ಎಂದು ಕರೆಯಲ್ಪಡುವ ಬೊಳ್ತಾಡು ಕ್ಷೇತ್ರದ ಸಮುಚ್ಚಯದಲ್ಲಿ ಶ್ರೀ ಚೀರುಂಭ ಭಗವತೀ, ಎಳೆಯ ಭಗವತೀ, ಕಂಡಕರ್ಣನ್, ದಂಡರಾಜನ್ ಎಂಬ ದೇವಿ ಸಾನಿಧ್ಯ ಹಾಗೂ ಕ್ಷೇತ್ರದ ಹೊರಗೆ ಶ್ರೀ ವಿಷ್ಣುಮೂರ್ತಿ ಮತ್ತು ಧೂಮಾವತಿ ಮತ್ತು ಪಂಜುರ್ಲಿ ದೈವಗಳು ಹಾಗೂ ನಾಗದೇವತೆಯ ಸಾನ್ನಿಧ್ಯವಿದೆ. ಕ್ಷೇತ್ರದ ಸುತ್ತು ಪೌಳಿ, ಗುಳಿಗನ ಕಟ್ಟೆ, ತೀರ್ಥಬಾವಿ ಹಾಗೂ ಭಂಡಾರಮನೆ ಇತ್ಯಾದಿಗಳನ್ನು ಒಳಗೊಂಡಿದ್ದು, ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರ ನಿರ್ಮಾಣವಾಗಿದೆ.
ಉದ್ಯಮಿ ಎನ್ ಕೃಷ್ಣ ಎನ್ ಉಚ್ಚಿಲರವರಿಗೆ ದೇವಿಯ ಸ್ವಪ್ನ ದರ್ಶನ:
ದೂರದ ಮುಂಬೈಯಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕೃಷ್ಣ ಎನ್ ಉಚ್ಚಿಲ ರವರು ಕೋರಿಕಾರ್ ತರವಾಡಿಗೆ ಸಂಬಂಧಪಟ್ಟವರು. ಪುರಾತನ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬರಿಂದ ಬೊಳ್ನಾಡು ಭಗವತೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತದೆ ಎಂಬುವುದಾಗಿ ಅನೇಕ ವರ್ಷಗಳ ಹಿಂದಿನ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು. ಅದರಂತೆಯೇ ಕೃಷ್ಣ ಎನ್ ಉಚ್ಚಿಲ್ ರವರಿಗೆ ಬೊಳ್ನಾಡು ಕ್ಷೇತ್ರದ ಶ್ರೀ ಭಗವತೀ ದೇವಿಯು ಸ್ವಪ್ನದರ್ಶನವಾಗಿ ಕಂಡುಬಂದು ಈ ಕ್ಷೇತ್ರದ ಬಗ್ಗೆ ಜ್ಞಾನ ನೀಡಿದರು. ಅದಲ್ಲದೆ ಉಚ್ಚಿಲ ಭೈರವನ ಆರಾಧನೆಯ ಪ್ರಶ್ನಾಚಿಂತನೆಯಲ್ಲಿಯೂ ಬೋಳ್ನಾಡು ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಕಂಡುಬಂದಿತ್ತು. ಹೀಗೆ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವನ್ನು ಅರಸಿಕೊಂಡು ಬಂದ ಕೃಷ್ಣ ಉಚ್ಚಿಲರವರ ಮುಂದಾಳತ್ವ ಮಾರ್ಗದರ್ಶನ ಸಹಕಾರದೊಂದಿಗೆ ಇಂದು ಈ ಕ್ಷೇತ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ, ಭರಣಿ ಮಹೋತ್ಸವಕ್ಕೆ ಅಣಿಯಾಗಿ ನಿಂತಿದೆ.
ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವು ತನ್ನ ಗೋಚರಕ್ಕೆ ಸಮೀಪಿಸಿದ ಬಳಿಕ ಕೃಷ್ಣ ಉಚ್ಚಿಲರವರು ಶಿಲನ್ಯಾಸ ಕಾರ್ಯಕ್ರಮ, ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲು ಮುಂದಾಗ್ತಾರೆ. ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ, ನಂತರದ ದಿನಗಳಲ್ಲಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಬರಲಾಗಿದೆ. ಕೃಷ್ಣ ಎನ್ ಉಚ್ಚಿಲವರ ಬಾಯಲ್ಲಿ ಬರುವ ಶ್ರೀ ದೇವಿಯ ಅಭಯದ ನುಡಿ, ಇವರ ವ್ಯಕ್ತಿತ್ವದಲ್ಲಿ ಅಡಗಿದ ಸಾಮಾಜಿಕ ಕಳಕಳಿ, ಕೈಯೆತ್ತಿ ನೀಡುವ ಶ್ರೀದೇವಿಯ ಪ್ರಸಾದ ಇವೆಲ್ಲವೂ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ, ಮಾನಸಿಕ ಖಿನ್ನತೆ ಇವೆಲ್ಲದಕ್ಕೂ ಪರಿಹಾರ. ಮುಂಬೈಯಿಂದ ಊರಿಗೆ ಆಗಮಿಸುವ ವೇಳೆ ಕೃಷ್ಣ ಎನ್ ಉಚ್ಚಿಲರವರು ಅನಾರೋಗ್ಯ ಪೀಡಿತರಿಗಾಗಿ ಅಗತ್ಯ ಆಯುರ್ವೇದ ಔಷಧಿಯನ್ನು ತಂದು, ಅದನ್ನು ಈ ಕ್ಷೇತ್ರದಲ್ಲಿ ಶ್ರೀ ಭಗವತೀ ದೇವಿಯ ಮುಂದಿರಿಸಿ, ಆ ಔಷಧಿಯನ್ನು ಪ್ರಸಾದ ರೂಪವಾಗಿ ಈ ಕ್ಷೇತ್ರದಲ್ಲಿ ಅನಾರೋಗ್ಯ ಪೀಡಿತರಿಗೆ ನೀಡಿ, ಈ ಮೂಲಕ ತಮ್ಮ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ವರುಷಗಳ ಹಿಂದೆ ನಾಪತ್ತೆಯಾದ ಮಗ ಪತ್ತೆ:
ಸುಮಾರು 6-7 ವರ್ಷಗಳ ಹಿಂದೆ ಮನೆಯಿಂದ ಹೋದ ಮಗನೊಬ್ಬ ನಾಪತ್ತೆಯಾಗಿರುತ್ತಾನೆ .ಈ ಸಂದರ್ಭದಲ್ಲಿ ಕಣ್ಣೀರಿನಲ್ಲಿ ಆ ಕುಟುಂಬಕ್ಕೆ ಕೃಷ್ಣ ಉಚ್ಚಿಲರವರ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರಕ್ಕೆ ಬನ್ನಿ, ತಾಯಿ ಭಗವತಿಯಲ್ಲಿ ಮನಶುದ್ಧತೆಯಿಂದ ಪ್ರಾರ್ಥೀಸಿ ಎಂದು ಸಾಂತ್ವನ ಹೇಳ್ತಾರೆ. ಅದರಂತೆಯೇ ಆ ಕುಟುಂಬ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೃಷ್ಣ ಉಚ್ಚಿಲರವರ ಸಮ್ಮುಖದಲ್ಲಿಯೇ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಆ ಕ್ಷಣಾರ್ಧದಲ್ಲೇ ನಾಪತ್ತೆಯಾದ ಮಗನ ಇರುವಿಕೆಯ ಬಗ್ಗೆ ಸುಳಿವು ಗೋಚರವಾಗುತ್ತದೆ. ಅದಲ್ಲದೇ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಿಂದ ಶ್ರೀ ಕೃಷ್ಣ ಉಚ್ಚಿಲರವರು ತೀವ್ರ ಅನಾರೋಗ್ಯ ಪೀಡಿತರಿಗೆ ದೇವಿಯ ಪ್ರಸಾದವನ್ನು ನೀಡಿ ಅದೆಷ್ಟೋ ರೋಗ ರುಜಿನಗಳನ್ನು ಮಾಯಗೊಳಿಸಿದ ಅದೆಷ್ಟೋ ನಿದರ್ಶನಗಳಿವೆ.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರಿಗೂ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರಕ್ಕೂ ಇರುವ ಸಂಬಂಧ:
ವಿಟ್ಲ ಸೀಮೆಯಲ್ಲಿ ಅತ್ಯಂತ ಪುರಾತನ ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ದೇವಿ ಕ್ಷೇತ್ರಗಳಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಒಂದು. ಹಿಂದಿನ ಕಾಲದಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಭರಣಿ ಮಹೋತ್ಸವದ ಸಂದರ್ಭದಲ್ಲಿ ಬೊಳ್ನಾಡು ಕ್ಷೇತ್ರದಿಂದ ಶ್ರೀ ಭಗವತೀಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಪದ್ದತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು. ಅಂದಿನ ಕಾಲದಲ್ಲಿ ಕಾಲ್ನಿಡಿಗೆಯಲ್ಲಿ, ದೊಂದಿ ಬೆಳಕಿನೊಂದಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಸಂಪ್ರದಾಯವಿತ್ತು. ಇದೀಗ ಮತ್ತೆ ಅದೇ ಸಂಪ್ರದಾಯವನ್ನು ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು, ಸಾವಿರಾರು ವರ್ಷಗಳ ಬಳಿಕ ಮಾ. 25 ರಂದು ರಾತ್ರಿ 7 ಗಂಟೆಗೆ ದೇವರ ಭೇಟಿ ಉತ್ಸವ ನಡೆಯಲಿದೆ. ಮುಂದಿನ ದಿನಗಳಲ್ಲಿ ಮೂರು ವರ್ಷಗಳಿಗೊಮ್ಮೆ ಬೊಳ್ನಾಡು ಶ್ರೀ ಭಗವತೀ ದೇವಿಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಕೃಷ್ಣ ಉಚ್ಚಿಲರವರ ಮುಂದಾಳತ್ವ, ಮಾರ್ಗದರ್ಶನದಲ್ಲಿ ಬೋಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ (ರಿ) ಎರುಂಬು ಮತ್ತು ಸಮಸ್ತ ಆಸ್ತಿಕ ಬಾಂಧವರ ಸಹಭಾಗಿತ್ವದಲ್ಲಿ ಮಾ. 9 ರಿಂದ ಮಾ.16 ರವರೆಗೆ ಪುನರ್ ನಿರ್ಮಾಣಗೊಂಡ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣುಅಸ್ರ ರವರ ನೇತೃತ್ವದಲ್ಲಿ ನಡೆಯಲಿದ್ದು, ಮಾ. 20 ರಿಂದ ಮಾ. 27 ರವರೆಗೆ ಭರಣಿ ಮಹೋತ್ಸವ ಕಣ್ಣ ಕಲೆಕಾರ್ ಹಾಗೂ ಆಚಾರಪಟ್ಟವರ ನೇತೃತ್ವದಲ್ಲಿ ನಡೆಯಲಿದೆ.
ಒಟ್ಟಿನಲ್ಲಿ ಕಾರಣಿಕ ಮಹಿಮ ಕ್ಷೇತ್ರದಲ್ಲಿ ಸಕಲ ಭಕ್ತರೂ ಒಡಗೂಡಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನಡೆಸಲು ಈ ಮೂಲಕ ಪರವೂರ ಭಕ್ತರನ್ನೂ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಆಸ್ತಿಕ ಬಾಂಧವರು ಏಕಮನಸ್ಸಿನಿಂದ ಒಂದಾಗಿ ಬ್ರಹ್ಮಕಲಶೋತ್ಸವ ಹಾಗೂ ಭರಣಿ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.
ಪುನರ್ ನಿರ್ಮಾಣದ ರೂವಾರಿ ಕೃಷ್ಣ ಉಚ್ಚಿಲ್ ರವರ ಸಮಾಜ ಸೇವೆ
ತುಳುನಾಡಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದವರ ಸಾಲಿಗೆ ಮುಂಬಯಿಯ ಪ್ರತಿಷ್ಠಿತ ಉದ್ಯಮಿ ಕೃಷ್ಣಎನ್. ಉಚ್ಚಿಲ್ ಸೇರುತ್ತಾರೆ. ಮೂಲತಃ ಸೋಮೇಶ್ವರ ಉಚ್ಚಿಲದ ಇವರು ತೀಯಾ ಸಮಾಜದ ಕೋರಿಕಾರ್ ತರವಾಡಿಗೆ ಸೇರಿದವರು. ಸಾಮೂಹಿಕ ವಿವಾಹ, ಹೆಣ್ಣುಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸುವ ಸಲುವಾಗಿ ಸಾಮೂಹಿಕ ಮೂಗು ಚುಚ್ಚುವ ಕಾರ್ಯಕ್ರಮವನ್ನು ಆಯೋಜಿಸಿ ಸುಮಾರು 152 ಮಂದಿಗೆ ಬಂಗಾರದ ಮೂಗುಬೊಟ್ಟು (ಮೂಗುತಿ) ನೀಡಿದ್ದರು. ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ನೀಡುತ್ತಿದ್ದಾರೆ. ಶ್ರೀ ಕೃಷ್ಣಜನ್ಮಾಷ್ಠಮಿಯ ಅಂಗವಾಗಿ ಹಲವು ವರ್ಷಗಳಿಂದ ಅಕ್ಕಿ ವಿತರಣೆ ಮಾಡುತ್ತಿರುವ ಇವರು 2020ರ ಅಗಸ್ಟ್ 8ರಂದು ಕೋವಿಡ್ ಲಾಕ್ಡೌನ್ ಸಂಕಷ್ಟದ ಸಂದರ್ಭ 1220 ಮನೆಗಳಿಗೆ ಅಕ್ಕಿ ವಿತರಣೆ ಮಾಡಿದ್ದಾರೆ. ಬೊಳ್ನಾಡು ಶ್ರೀ ಭಗವತಿ ಕ್ಷೇತ್ರ ಪುನರ್‌ನಿರ್ಮಾಣದ ಕೈಂಕರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡು. ಯಥೇಚ್ಛವಾಗಿ ಧನಸಹಾಯ ಮಾಡಿರುವ ಧಾನಿಯಾಗಿದ್ದಾರೆ.
ಬೊಳ್ಳಾಡಿನಲ್ಲಿದ್ದ ಭಗವತೀ ಕ್ಷೇತ್ರ ಅಳಿದುಹೋಗಿದ್ದ ಕಾರಣ ತೀಯಾ ಸಮುದಾಯದವರ 18 ಕ್ಷೇತ್ರಗಳ ಪೈಕಿ ಒಂದು ಕಡಿಮೆಯಾಗಿತ್ತು. ಭಗವತೀ ಅಮ್ಮನ ಪ್ರೇರಣೆಯಿಂದ ಇಡೀ ಸಮುದಾಯಕ್ಕೆ ಕೊರತೆಯಾಗಿ ಕಾಡುತ್ತಿದ್ದ ಒಂದು ಕ್ಷೇತ್ರವನ್ನು ಪುನಃ ನಿರ್ಮಿಸಲು ಆ ತಾಯಿಯೇ ಮುಂದೆ ನಿಂತು ಈ ಎಲ್ಲ ಕೆಲಸವನ್ನು ನಮ್ಮಿಂದ ಮಾಡಿಸಿದ್ದಾಳೆ. ಈ ಕ್ಷೇತ್ರ ಮುಂದಿನ ದಿನಗಳಲ್ಲಿ ತೀಯಾ ಸಮುದಾಯದವರ ಒಂದನೇ ಕ್ಷೇತ್ರವಾಗಿ ಗತಕಾಲದ ಪರಮ ವೈಭವವನ್ನು ಪಡೆದುಕೊಂಡು ಮೆರೆಯಬೇಕೆನ್ನುವುದು ನನ್ನ ಅಪೇಕ್ಷೆ.

ಕೃಷ್ಣ ಎನ್. ಉಚ್ಚಿಲ್
ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ
ಸಂಕಲ್ಪ ಮಾಡಿರುವ ಕ್ಷೇತ್ರ ಪುನರ್ ನಿರ್ಮಾಣದ ಕಾರ್ಯಗಳು ದೇವರ ಅನುಗ್ರಹದಿಂದ ಸಾಕಾರಗೊಂಡಿದೆ. ಕೊಡುಗೈ ದಾನಿ ಕೃಷ್ಣಎನ್. ಉಚ್ಚಿಲ್ ರವರ ಮಾರ್ಗದರ್ಶನ, ಕೊಡುಗೆ ಹಾಗೂ ಸಮಸ್ತ ಆಸ್ತಿಕ ಬಾಂಧವರ ಸಹಕಾರ ಕ್ಷೇತ್ರದ ಜೀರ್ಣೋದ್ದಾರ ಕಾರ್ಯ ಪೂರೈಸಲು ಸಾಧ್ಯವಾಗಿದ್ದು, ಇದೀಗ ನಾವೆಲ್ಲರೂ ಬ್ರಹ್ಮಕಲಶೋತ್ಸವ ಹಾಗೂ ಭರಣಿ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಮಾ.೯ರಂದು ಸಾಯಂಕಾಲ ವಿವಿಧ ಕಡೆಗಳಿಂದ ಸಂಗ್ರಹಿಸಲ್ಪಟ್ಟ ಹಸಿರುವಾಣಿಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೇರಿ ಬಳಿಕ ಅಲ್ಲಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಬಳಿಕ ಮೆರವಣಿಗೆಯು ಕ್ಷೇತ್ರ ತಲುಪಲಿದೆ.

ಮೋನಪ್ಪ ಎಂ. ವಕೀಲರು
ಪ್ರಧಾನ ಕಾರ್ಯದರ್ಶಿ, ಬೋಳ್ನಾಡು ಶ್ರೀ ಭಗವತಿ ತೀಯ ಸಮಾಜ ಸೇವಾ ಸಮಿತಿ