ರಾಮಕ್ಷತ್ರೀಯ ಸಮಾಜ ಭಾಂದವರ ಕ್ರಿಕೆಟ್ ಪಂದ್ಯಾವಳಿ ಯುವ ಟ್ರೋಫಿ 2025

0

ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘ ಮತ್ತು ಕ್ಷತ್ರೀಯ ಯುವ ಸಂಘ ಪುತ್ತೂರು ಇವರ ಆಶ್ರಯದಲ್ಲಿ ಗಣೇಶ್ ಮರಿಲ್ ಸ್ಮರಣಾರ್ಥ ಆಹ್ವಾನಿತ 5 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಯುವ ಟ್ರೋಫಿ-2025 ಮಾ.9ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾಟವನ್ನು ಮಾಜಿ ಸೈನಿಕ ಸುಬ್ರಹ್ಮಣ್ಯ ಕೆಮ್ಮಿಂಜೆ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಮಾತನಾಡಿ, ರಾಮಕ್ಷತ್ರೀಯ ಸಮಾಜದ ಮೂರು ಮಂದಿ ಪುತ್ತೂರು ನಗರ ಸಭೆಯಲ್ಲಿ ಸದಸ್ಯರಾಗಿದ್ದು ರಾಜಕೀಯದಲ್ಲಿ ನಮ್ಮ ಸಮಾಜದವರು ಬೆಳೆಯಬೇಕು. ಸಂಘಟನೆ ಬಲಪಡಿಸಿಕೊಂಡು ಸಮಾಜವನ್ನು ಭದ್ರವಾಗಿಸಬೇಕು ಎಂದರು. ಕ್ರೀಡಾ ಕ್ಷೇತ್ರದಲ್ಲಿ ಚಿರಪರಿಚಿತನಾಗಿದ್ದ ಗಣೇಶ್ ಮರೀಲ್ ಆಡದ ಆಟವಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಅವರು ವಿಶೇಷ ಆಕರ್ಷಣೆ. ಮಂಗಳೂರು ನೆಹರು ಮೈದಾನ ದೊಡ್ಡ ಸಿಕ್ಸ್ ಬಾರಿಸಿ ದಾಖೆಲೆ ನಿರ್ಮಿಸಿದವರು. ಅವರನ್ನೇ ಸ್ಪೂರ್ತಿಯಾಗಿಸಿಕೊಂಡು ಯುವ ಸಂಘವು ಕ್ರಿಕೆಟ್ ಪಂದ್ಯಾಟ ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಟ್ರೋಫಿ ಅನಾವರಣ ಮಾಡಿದ ರಾಮಕ್ಷತ್ರಿಯ ಸೇವಾ ಸಂಘ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ ಮಾತನಾಡಿ, ಜೀವನದ ಜೊತೆ ಕ್ರೀಡೆಯಿರಬೇಕು. ಕ್ರೀಡೆಯೇ ಕಾಯಕವಾಗಿರಬಾರದು. ಕಾಯಕದೊಂದಿಗೆ ಕ್ರೀಡೆಯನ್ನು ಮುನ್ನಡೆಸಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಯುವ ಸಂಘದ ಅಧ್ಯಕ್ಷ ಅನೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದಿ.ಗಣೇಶ್‌ರವರ ಪತ್ನಿ ಅಮಿತಾ ಗಣೇಶ್, ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ನವನೀತ್, ಕ್ಷತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್, ನಿವೃತ್ತ ಎಎಸ್‌ಐ ಯೋಗೀಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸ್ತುತಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಜಿತೇಂದ್ರ ಸ್ವಾಗತಿಸಿದರು. ರಶ್ಮೀ ಕಾರ್ಯಕ್ರಮ ನಿರೂಪಿಸಿ, ಬಾಲಚಂದ್ರ ಮೊಟ್ಟೆತ್ತಡ್ಕ ವಂದಿಸಿದರು. ಧೀರಜ್, ಶ್ರೀಶಾ ಕುಮಾರ್, ವಾಣಿ ಸುರೇಶ್, ಅರುಣ್ ಅಲಂಕಾರ್, ಬಾಲಚಂದ್ರ ಮೊಟ್ಟೆತ್ತಡ್ಕ, ಅನಿಲ್ ಅತಿಥಿಗಳನ್ನು ಹೂ ನೀಡಿ ಶಾಲು ಹಾಕಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here