ಮಹಿಳಾ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪಂಚಾಯತ್ನಿಂದ ಹಲವು ಯೋಜನೆಗಳು – ವಿದ್ಯಾಶ್ರೀ
ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿರಿಯ ಮಹಿಳೆ ಸೀತಮ್ಮ ಕಜೆ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪ್ಯ ಠಾಣೆಯ ಪಿಎಸ್ಐ ಸುಷ್ಮಾ ಜಿ. ಬಂಡಾರಿ ಮಹಿಳೆಯರಿಗೆ ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿದರು.
ಬೆಟ್ಟಂಪಾಡಿ ಗ್ರಾಮ ಪಂಚಾಯಿತಿಯಲ್ಲಿ ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುತ್ತಿರುವ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಾದ ಪ್ರವೀಣ ಕುಮಾರಿ, ಪೂರ್ಣಿಮಾ, ಸುಮತಿ ಇವರಿಗೆ ಸನ್ಮಾನ ನಡೆಸಲಾಯಿತು. ಗ್ರಾಮ ಪಂಚಾಯತ್ ಸದಸ್ಯೆ ಉಮಾವತಿ ತಾವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಯದ ಅನುಭವವನ್ನು ಹಂಚಿಕೊಂಡರು. ಸದಸ್ಯರಾದ ಚಂದ್ರಶೇಖರ್ ರವರು ಇರ್ದೆ ಬೆಟ್ಟಂಪಾಡಿ ಗ್ರಾಮದ ಮಹಿಳೆಯರು ಇನ್ನೂ ಹೆಚ್ಚು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಂತೆ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾಶ್ರೀ ಸುರೇಶ್ ಮಾತನಾಡಿ ‘ಯಾವುದೇ ಒಂದು ಕಾರ್ಯಕ್ರಮ ಅಥವಾ ಸಭೆಗಳು ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲಾ ಗ್ರಾಮಸ್ಥರ ಸಹಕಾರ ಅಗತ್ಯ. ಎಲ್ಲಿ ಮಹಿಳೆಯರು ಹೆಚ್ಚು ಗೌರವಕ್ಕೆ ಒಳಗಾಗುತ್ತಾರೋ ಅಲ್ಲಿನ ಸಮಾಜ ಉನ್ನತಿಯತ್ತ ಸಾಗುತ್ತದೆ. ಬೆಟ್ಟಂಪಾಡಿ ಪಂಚಾಯತ್ ವತಿಯಿಂದಲೂ ಮಹಿಳೆಯರ ಸ್ವಾವಲಂಬನೆ ಮತ್ತು ಅಭಿವೃದ್ಧಿಗಾಗಿ ಹಲವು ಯೋಜನೆಗಳ ಕಾರ್ಯಾನುಷ್ಟಾನದಲ್ಲಿದೆ ಎಂದು ತಿಳಿಸುತ್ತಾ, ಮಹಿಳೆಯರಿಗಾಗಿ ರಚಿಸಿದ ಒಂದು ಹಾಡನ್ನು ಹಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸೌಮ್ಯ ಎಂ ಎಸ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪಂಚಾಯತ್ ಸದಸ್ಯರಾದ ಮೋಯಿದ್ ಕುಂಞ, ಮಹಾಲಿಂಗ ನಾಯಕ, ಶ್ರೀಮತಿ ಲಲಿತಾ, ಶ್ರೀಮತಿ ಪವಿತ್ರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಮತ್ತು ಕೃಷಿ ಸಖಿ ಪಶುಸಖಿ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಸಭೆಯ ನಂತರ ಗುಂಡ್ಯಡ್ಕ ಪರಿಸರದ ಮಹಿಳೆಯರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

