ಗಣೇಶೋತ್ಸವ ಸಮಿತಿಯಿಂದ ನಿರಂತರವಾಗಿ ಸಾಮಾಜಿಕ ಕಳಕಳಿಯ ಕೆಲಸ: ಮಾಧವ ಮಾವೆ
ವಿಟ್ಲ:ಸುಮಾರು ಮೂವತ್ತು ವರುಷಗಳ ಹಿಂದೆ ಹಲವಾರು ಹಿರಿಯರ ಹಾಗೂ ದಾನಿಗಳ ಸಹಕಾರದಲ್ಲಿ ಗಣೇಶೋತ್ಸವ ಸಮಿತಿಯನ್ನು ಆರಂಭಿಸಲಾಯಿತು. ಆ ಬಳಿಕ ನಿರಂತರವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದ ನಮ್ಮ ಗಣೇಶೋತ್ಸವ ಸಮಿತಿಯು ಇದೀಗ ಸ್ವಂತ ಜಾಗ ಖರೀದಿ ಮಾಡಿ ಸಭಾಂಗಣವನ್ನು ನಿರ್ಮಿಸಲು ಮುಂದಡಿ ಇಟ್ಟಿದ್ದು ಅದರ ಶಿಲನ್ಯಾಸ ಕಾರ್ಯಕ್ರಮವು ಮಾ.17ರಂದು ಸಾಲೆತ್ತೂರು ಶಾಲಾ ಬಳಿಯ ನಿವೇಶನದಲ್ಲಿ ನಡೆಯಲಿದೆ ಎಂದು ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಉದಯಕುಮಾರ್ ರೈ ಅಗರಿ ರವರು ಹೇಳಿದರು.
ಅವರು ಸಾಲೆತ್ತೂರಿನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಲವಾರು ವರುಷಗಳಿಂದ ನಿರಂತರ ಗಣೇಶೋತ್ಸವದ ಜೊತೆಗೆ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಸ್ವಂತ ಕಟ್ಟಡ ನಿರ್ಮಾಣದ ಉದ್ದೇಶದಿಂದ ಊರಪರವೂರ ದಾನಿಗಳ ಸಹಕಾರದಿಂದ 40 ಸೆನ್ಸ್ ಜಾಗವನ್ನು ಖರೀದಿ ಮಾಡಿದ್ದು, ಈ ಪೈಕಿ 5 ಸೆನ್ಸ್ ಜಾಗವನ್ನು ಉದ್ಯಮಿ ಮಾದವ ಮಾವೆಯವರು ಉಚಿತವಾಗಿ ನೀಡಿದ್ದು, ಉಳಿದ ಜಾಗವನ್ನು ಅವರು ಮಿತದರದಲ್ಲಿ ನೀಡಿದ್ದಾರೆ. ಅದರಲ್ಲಿ ಸುಸಜ್ಜಿತವಾದ ಒಂದು ಸಭಾಭವನವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮಾ.17ರಂದು ಮುಂಬೈನ ಹೇರಂಭ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿರವರು ಶಿಲನ್ಯಾಸ ನೆರವೇರಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪ್ರಭಾಕರ ಭಟ್ ಕಲ್ಲಡ್ಕರವರು ದೀಪ ಬೆಳಗಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ನೀಲಿ ನಕಾಶೆ ಅನಾವರಣ ಮಾಡಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಶ್ರೀ ಗಣೇಶ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಮಾಧವ ಮಾವೆರವರು ಮಾತನಾಡಿ, ಗಣೇಶೋತ್ಸವವನ್ನು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ವಿಜ್ರಂಭಣೆಯಿಂದ ಮಾಡಲಾಗುತ್ತಿದೆ. ವರ್ಷಂಪ್ರತಿ ಗಣೇಶೋತ್ಸವ ಸಂದರ್ಭದಲ್ಲಿ ಸಮಾಜದಲ್ಲಿನ ಬಡಬಗ್ಗರಿಗೆ ಧನಸಹಾಯ ನೀಡುವ ಕೆಲಸವನ್ನು ಟ್ರಸ್ಟ್ ನಿರಂತರವಾಗಿ ಮಾಡುತ್ತಾ ಬಂದಿದೆ. ಮಾತ್ರವಲ್ಲದೆ ಹಲವಾರು ಆರೋಗ್ಯ ಶಿಬಿರಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಅಲ್ಲಿ ಗಣೇಶೋತ್ಸವ ಆಚರಣೆ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಅಕ್ಷಯ್ ಕುಮಾರ್ ರೈ ಕೊಲ್ಲಾಡಿ, ಕೋಶಾಧಿಕಾರಿ ಸುಧೀರ್ ಕುಮಾರ್ ಪಾಲ್ತಾಜೆ, ಜೊತೆಕಾರ್ಯದರ್ಶಿ ಪ್ರಶಾಂತ್ ಕೋಕಳ, ಟ್ರಸ್ಟಿಗಳಾದ ಅಮರೇಶ್ ಶೆಟ್ಟಿ ತಿಮರಾಜೆ, ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿ, ಸಾರ್ವಜನಿಕ ಗಣೇಶೋತ್ಸ ಸಮಿತಿ ಗೌರವ ಸಲಹೆಗಾರರಾದ ಸುಬ್ಬಣ್ಣ ನಾಯ್ಕ್ ಪಡೆಕುಂಜ ಮೊದಲಾದವರು ಉಪಸ್ಥಿತರಿದ್ದರು.