ನೆಲ್ಯಾಡಿ: ಗೋಳಿತ್ತೊಟ್ಟಿನ ರಿಕ್ಷಾ ಚಾಲಕರೋರ್ವರ ಮೃತದೇಹ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಮಾ.11ರಂದು ಸಂಜೆ ಪತ್ತೆಯಾಗಿದೆ.

ಗೋಳಿತ್ತೊಟ್ಟು ಗ್ರಾಮದ ಅಂಜರ ನಿವಾಸಿ ರವಿಚಂದ್ರ ಶೆಟ್ಟಿ ಅವರ ಪುತ್ರ ಗಗನ್‌ರಾಜ್ ಶೆಟ್ಟಿ(20ವ.)ಮೃತ ರಿಕ್ಷಾ ಚಾಲಕ. ಗಗನ್‌ರಾಜ್ ಶೆಟ್ಟಿ ಸ್ವಂತ ರಿಕ್ಷಾ ಹೊಂದಿದ್ದು 1 ವರ್ಷದಿಂದ ಗೋಳಿತ್ತೊಟ್ಟಿನಲ್ಲಿ ಬಾಡಿಗೆ ನಡೆಸುತ್ತಿದ್ದರು. ಮಾ.10ರಂದು ರಾತ್ರಿ 8 ಗಂಟೆ ಸುಮಾರಿಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಕ್ಕನ ಮಗ ಸುಜೀತ್ ಶೆಟ್ಟಿಯನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿಸಿ ಗೋಳಿತ್ತೊಟ್ಟು ಹಲಸಿನಕಟ್ಟೆ ಎಂಬಲ್ಲಿರುವ ಅವರ ಮನೆಗೆ ಬಿಟ್ಟು ಇನ್ನೊಂದು ಬಾಡಿಗೆಗೆ ನೆಲ್ಯಾಡಿಗೆ ಹೋಗಿ ಮನೆಗೆ ಬರುವುದಾಗಿ ಹೇಳಿ ಆಟೋರಿಕ್ಷಾದಲ್ಲಿ ಹೋಗಿದ್ದರು. ರಾತ್ರಿ 9 ಗಂಟೆಗೆ ಮನೆಯವರು ಗಗನ್‌ರಾಜ್ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ನಾನು ಬರುತ್ತೇನೆ. ನೀವು ಊಟ ಮಾಡಿ ಮಲಗಿ ಎಂದು ಹೇಳಿದ್ದು ನಂತರ ರಾತ್ರಿ 10 ಗಂಟೆಗೆ ಕರೆ ಮಾಡಿದಾಗ ಗಗನ್‌ರಾಜ್‌ರವರ ಮೊಬೈಲ್ ಸ್ವೀಚ್ ಆಫ್ ಆಗಿದ್ದು ಆ ಬಳಿಕ ಆತನ ಬಗ್ಗೆ ಮನೆಯವರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಶವ ಪತ್ತೆ:
ಮಾ.11ರಂದು ಸಂಜೆ 3.45ರ ವೇಳೆಗೆ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಗಗನ್‌ರಾಜ್ ಮೃತದೇಹ ಪತ್ತೆಯಾಗಿದೆ. ಈತನ ಆಟೋ ರಿಕ್ಷಾ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಬಳಿ ಇರುವ ಮರದ ಕೆಳಗೆ ಪತ್ತೆಯಾಗಿದೆ. ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗಗನ್‌ರಾಜ್ ನೇತ್ರಾವತಿ ಹೊಳೆಗೆ ಹಾರಿ ಆತ್ಮಹತ್ಮೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಗನ್‌ರಾಜ್‌ರವರ ತಂದೆ ರವಿಚಂದ್ರ ಶೆಟ್ಟಿಯವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಗಗನ್‌ರಾಜ್ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.