ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಮೂರನೇ ದಿನವೂ ಕಾಣಿಸಿಕೊಂಡ ಬೆಂಕಿ

0

ವಿಟ್ಲ: ಕಳೆದ ಕೆಲದಿನಗಳಿಂದ ಬಿಸಿಲಿನ ತಾಪ ವ್ಯಾಪಕವಾಗಿದ್ದು, ಕಳೆಂಜಿಮಲೆ ರಕ್ಷಿತಾರಣ್ಯದ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾ.11 ರಂದು ಬಂಟ್ವಾಳ ತಾಲೂಕಿನ ಕಳೆಂಜಿಮಲೆ ರಕ್ಷಿತಾರಣ್ಯದ ಕುಳಾಲು-ಕುಂಟ್ರಕಳ ಪ್ರದೇಶದಲ್ಲಿ ಮತ್ತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಎಕರೆಗಟ್ಟಲೆ ಪ್ರದೇಶ ಬೆಂಕಿಗಾಹುತಿಯಾದ ಘಟನೆ ನಡೆದಿದೆ.


ಕೊಳ್ನಾಡು ಗ್ರಾಮದ ಕಳೆಂಜಿಮಲೆ ರಕ್ಷಿತಾರಣ್ಯ ಕಳೆದ ಮೂರು ದಿನಗಳಿಂದ ಹೊತ್ತಿ ಉರಿಯುತ್ತಿದೆ. ಕಳೆದೆರಡು ದಿನಗಳಿಂದ ಸ್ಥಳೀಯರ ಜೊತೆ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ಜರು. ಮಾ.11ರಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಮತ್ತೆ ರಕ್ಷಿತಾರಣ್ಯದ ಕುಂಟ್ರಕಳ ಪ್ರದೇಶದಲ್ಲಿ ಸಾವಿರಾರು ಮೀಟರ್ ಅಂತರದ ಎತ್ತರದ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೆಳಭಾಗದ ರಸ್ತೆ ಬದಿ ವಿದ್ಯುತ್ ತಂತಿಗಳು ಹಾದು ಹೋಗುವುದು ಬಿಟ್ಟರೆ ಅರಣ್ಯದೊಳಗೆ ಬೆಂಕಿ ಹತ್ತಿಕೊಳ್ಳಲು ಇನ್ಯಾವುದೇ ಕಾರಣಗಳಿಲ್ಲ. ಇದರಿಂದಾಗಿ ಇದೊಂದು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.


ಮಾಹಿತಿ ಅರಿತು ಬಂಟ್ವಾಳದಿಂದ ಆಗಮಿಸಿದ ಎರಡು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಹಳಷ್ಟು ಶ್ರಮಪಟ್ಟು ಸಾರ್ವಜನಿಕರ ಸಹಕಾರದಲ್ಲಿ ಸುಮಾರು ಏಳು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ. ಕಾಡಿನ ಒಳಭಾಗಕ್ಕೆ ಬೆಂಕಿ ಆವರಿಸುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಲು ರಸ್ತೆಯ ವ್ಯವಸ್ಥೆ ಇಲ್ಲದ್ದರಿಂದಾಗಿ ಬೆಂಕಿ ನಂದಿಸಲು ಅಂಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಗಿ ಬಂತು.

LEAVE A REPLY

Please enter your comment!
Please enter your name here