ನೆಲ್ಯಾಡಿ: ಕೌಕ್ರಾಡಿ ಗ್ರಾ.ಪಂ.ನ 2024-25ನೇ ಸಾಲಿನ ವಿಕಲಚೇತನರ ಸಮನ್ವಯ ಗ್ರಾಮ ಸಭೆ ಮಾ.6ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ಪುತ್ತೂರು ತಾ.ಪಂ.ಬಹುಮಟ್ಟದ ವಿಕಲಚೇತನರ ಪುನರ್‌ವಸತಿ ಕಾರ್ಯಕರ್ತ ನವೀನ್ ಕುಮಾರ್ ರವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು. ವಿಕಲ ಚೇತನರಿಗೆ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ಶೇ.50ರಷ್ಟು ರಿಯಾಯಿತಿ ಸಿಗಲಿದೆ. ವಿಕಲಚೇತನರ ಬಗ್ಗೆ ಅನುಕಂಪ ಬೇಡ. 2016 ವಿಕಲಚೇತನರ ಅಧಿನಿಯಮ ಕಾಯ್ದೆ ಪ್ರಕಾರ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯಬೇಕು ಎಂದರು.
ವೀಲ್‌ಚೇರ್ ವಿತರಣೆ:
ಪುತ್ತೂರು ತಾ.ಪಂ.ವಿಕಲಚೇತನರ ಸೇವಾ ಕೇಂದ್ರ ಕಚೇರಿ ವತಿಯಿಂದ 5 ಮಂದಿ ವಿಕಲಚೇತನರಿಗೆ ವಿಕಲಚೇತನರ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕೌಕ್ರಾಡಿ ಗ್ರಾ.ಪಂ.ನ ಶೇ.5ರ ವಿಕಲಚೇತನರ ಅನುದಾನದಿಂದ 3 ಮಂದಿ ವಿಕಲಚೇತನರಿಗೆ ವಿಲ್‌ಚೇರ್ ವಿತರಣೆ ಮಾಡಲಾಯಿತು.
ಗ್ರಾ.ಪಂ.ಉಪಾಧ್ಯಕ್ಷೆ ವನಿತಾ ಎಂ., ಗ್ರಾ.ಪಂ.ಸದಸ್ಯರು, ಇಚ್ಲಂಪಾಡಿ ಆಶಾಭವನ ಮಾನಸಿಕ ಬೌದ್ಧಿಕ ವ್ಯಕ್ತಿಗಳ ಆಶ್ರಮ ಸಂಚಾಲಕರು, ಮುಖ್ಯಗುರುಗಳು ಉಪಸ್ಥಿತರಿದ್ದರು. ಪುತ್ತೂರು ರೋಟರಿ ಕ್ಲಬ್ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಯ ತಜ್ಜ ವೈದ್ಯರ ತಂಡದಿಂದ ಉಚಿತ ಕಣ್ಣಿನ ತಪಾಸಣೆ ನಡೆಯಿತು. ಪಿಡಿಒ ದೇವಿಕಾ ಎಂ., ನಿರೂಪಿಸಿದರು. ಕೌಕ್ರಾಡಿ ಗ್ರಾ.ಪಂ.ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮಹಮ್ಮದ್ ಅಶ್ರಫ್, ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.