ಬರಹ : ಶರತ್ ಕುಮಾರ್ ಪಾರ
ಪುತ್ತೂರು:ಬನ್ನೂರಿನ ಆನೆಮಜಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಳ್ಳಲಿದೆ.

ಪುತ್ತೂರು ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬನ್ನೂರು ಗ್ರಾಮದ ಆನೆಮಜಲು ಪ್ರದೇಶದಲ್ಲಿ ನೂತನ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ.ಸುಮಾರು 51.9 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಅಂತಸ್ತಿನ ನ್ಯಾಯಾಲಯದ ಕಟ್ಟಡ, ಅಭಿಲೇಖಾಲಯದ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ.3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಕೀಲರ ಭವನ ಕಟ್ಟಡ ಈಗಾಗಲೇ ಉದ್ಘಾಟನೆಗೊಂಡಿದೆ.ನ್ಯಾಯಾಲಯ ಸಂಕೀರ್ಣದ ಬಹುತೇಕ ಕಾಮಗಾರಿ ಪೂರ್ಣಗೊಂಡು ಕೋರ್ಟ್‌ಕಲಾಪದ ಹಾಲ್‌ನ ಪೀಠೋಪಕರಣಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ.ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಬಾಕಿ ಇದೆ.ನ್ಯಾಯಾಲಯ ಸಂಕೀರ್ಣದ ಸಂಪರ್ಕ ರಸ್ತೆಯ ಕಾಮಗಾರಿ, ಪ್ರವೇಶ ದ್ವಾರದ ಕಾಮಗಾರಿ ಪ್ರಗತಿಯಲ್ಲಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮೇ ತಿಂಗಳಿನಿಂದ ಕೋರ್ಟ್ ಕಲಾಪಗಳು ನೂತನ ನ್ಯಾಯಾಲಯ ಸಂಕೀರ್ಣದ ನ್ಯಾಯಾಲಯಗಳಲ್ಲಿಯೇ ನಡೆಯಲಿದೆ.
ಎರಡು ಹಂತದಲ್ಲಿ ಕಾಮಗಾರಿ:
ಕಳೆದ ಬಾರಿಯ ಬಿಜೆಪಿ ಸರಕಾರದ ಅವಧಿಯಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಮಂಜೂರಾಗಿತ್ತು.ಮಂಜೂರುಗೊಂಡ ಅನುದಾನದಲ್ಲಿ 51.9 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಎರಡು ಹಂತದಲ್ಲಿ ನಡೆಸಲಾಗಿದೆ.ಮೊದಲ ಹಂತದ 25 ಕೋಟಿ ರೂ ವೆಚ್ಚದ ಕಾಮಗಾರಿಗೆ 2018ರ ನ.10ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು.ಈ ಕಾಮಗಾರಿಯ ಟೆಂಡರ್ ವಿಳಂಬವಾದ ಕಾರಣ ಕಾಮಗಾರಿ ಪ್ರಕ್ರಿಯೆ 2019 ಮೇ 11ರಂದು ಪ್ರಾರಂಭಗೊಂಡಿತ್ತು.ಎರಡು ವರ್ಷ ಕಾಮಗಾರಿ ನಡೆದು 2021ರಲ್ಲಿ ಪೂರ್ಣಗೊಂಡಿತ್ತು.ಮೊದಲ ಹಂತದಲ್ಲಿ ನ್ಯಾಯಾಲಯ ಕಟ್ಟಡದ ಮೊದಲ ಎರಡು ಅಂತಸ್ತು,ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಭಾಗಿತ್ವದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡ ನಿರ್ಮಿಸಲಾಯಿತು.2021ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಬ್ದುಲ್ ನಜೀರ್‌ರವರು ಪ್ರಥಮ ಹಂತದ ಕಾಮಗಾರಿ ಹಾಗೂ ವಕೀಲರ ಭವನ ಉದ್ಘಾಟನೆಗೊಳಿಸಿ 2ನೇ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಎರಡನೇ ಹಂತದ ಕಾಮಗಾರಿ:
ನ್ಯಾಯಾಲಯ ಸಂಕೀರ್ಣದ ಉಳಿದ ಎರಡು ಅಂತಸ್ತು ನಿರ್ಮಾಣ, ಸಂಕೀರ್ಣದ ಸಮೀಪದಲ್ಲಿ ಅಭಿಲೇಖಾಲಯ ಕಟ್ಟಡ ನಿರ್ಮಾಣ ಹಾಗೂ ನ್ಯಾಯಾಲಯ ಸಂಕೀರ್ಣದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಎರಡನೇ ಹಂತದಲ್ಲಿ 26.9 ಕೋಟಿ ರೂ.ವೆಚ್ಚದ ಕಾಮಗಾರಿಗೆ 2021ರಲ್ಲಿ ಚಾಲನೆ ನೀಡಲಾಯಿತು.ಮೂರು ವರ್ಷದಿಂದ ನಡೆಯುತ್ತಿರುವ ಈ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದ್ದು ಶೇ.5ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು ಅಂತಿಮ ಹಂತಕ್ಕೆ ಬಂದಿದೆ.ರಸ್ತೆ ನಿರ್ಮಾಣ ಕೆಲಸ, ಚರಂಡಿ ವ್ಯವಸ್ಥೆ ಹಾಗೂ ಕೋರ್ಟ್ ಕಲಾಪದ ಹಾಲ್‌ನ ಪೀಠೋಪಕರಣಗಳ ಅಳವಡಿಕೆ ಕೆಲಸ ಸಾಗುತ್ತಿದೆ.ಕರಾರಿನಂತೆ ಮಾ.15ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು.ಆದರೆ ಕಾರಣಾಂತರಗಳಿಂದ 2 ತಿಂಗಳು ವಿಸ್ತರಣೆಯಾಗಿದ್ದು ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಲೋಕೋಪಯೋಗಿ ಇಲಾಖೆ ನಿರ್ಮಾಣ, ನಿರ್ವಹಣೆ:
ಒಟ್ಟು 51.9 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ.ಮಂಗಳೂರಿನ ಸೀದಿ ಕನ್‌ಸ್ಟ್ರಕ್ಷನ್ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು ಲೋಕೋಪಯೋಗಿ ಇಲಾಖೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕನಿಷ್ಕಚಂದ್ರರವರು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದಾರೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ಮುಂದಿನ 5 ವರ್ಷ ಲೋಕೋಪಯೋಗಿ ಇಲಾಖೆಯೇ ಇದರ ನಿರ್ವಹಣೆ ಮಾಡಲಿದೆ.
ನೂತನ ಕಟ್ಟಡದಲ್ಲಿ ನಡೆಯಲಿದೆ ಕಲಾಪಗಳು:
ಮಿನಿವಿಧಾನ ಸೌಧದ ಸಮೀಪ ಪ್ರಸ್ತುತ ಇರುವ ಕೋರ್ಟ್ ಬ್ರಿಟಿಷ್ ಕಾಲದ ಕಟ್ಟಡವಾಗಿದೆ.ಇಲ್ಲಿಗೆ ಸಂಪರ್ಕಿಸುವ ರಸ್ತೆಗೆ ಕೋರ್ಟ್ ರಸ್ತೆಯೆಂದೇ ಹೆಸರಿದೆ.ಇಲ್ಲಿನ ನ್ಯಾಯಾಲಯದ ಕಟ್ಟಡದಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿವೆ.ಇನ್ನೊಂದು ನಗರಸಭೆಗೆ ತಾಗಿಕೊಂಡಿರುವ ನ್ಯಾಯಾಲಯದ ಕಟ್ಟಡವಿದೆ.ಇದು ಬ್ರಿಟೀಷ್ ಕಾಲದ ನಂತರ ನಿರ್ಮಾಣ ಆಗಿದೆ.ಇಲ್ಲಿಯೂ ಕಲಾಪಗಳು ನಡೆಯುತ್ತಿದೆ.ಆನೆಮಜಲಿನಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಆದ ಬಳಿಕ ಈ ಎರಡು ಕಟ್ಟಡದ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ.
12 ಕೋರ್ಟ್‌ಗಳು ಕಾರ್ಯನಿರ್ವಹಿಸಲಿದೆ:
ನೂತನ ನ್ಯಾಯಾಲಯದ ಸಂಕೀರ್ಣದಲ್ಲಿ 12 ಕೊರ್ಟ್ ಹಾಲ್ ನಿರ್ಮಾಣವಾಗುತ್ತಿದೆ.ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮೇಲಿನ ಮೂರು ಅಂತಸ್ತಿನಲ್ಲಿ ತಲಾ 4 ಕೋರ್ಟ್‌ಗಳು ಕಾರ್ಯನಿರ್ವಹಿಸಲಿವೆ.ಪ್ರಸ್ತುತ ಇರುವ ಪುತ್ತೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವ 6 ಕೋರ್ಟ್‌ಗಳು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ.ಜೊತೆಗೆ ಹೆಚ್ಚುವರಿಯಾಗಿ 1 ಪೋಕ್ಸೋ ವಿಶೇಷ ನ್ಯಾಯಾಲಯ ಮತ್ತು ಜಿಲ್ಲಾ ವಿಭಾಗದ ಹೆಚ್ಚುವರಿ 5 ಕೋರ್ಟ್‌ಗಳು ಮಂಜೂರುಗೊಂಡು ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ಲಭಿಸಿದೆ.
ಪ್ರಥಮ ಹಂತದ 25 ಕೋಟಿ ರೂ.ವೆಚ್ಚದ ಕಾಮಗಾರಿ ನಡೆದು ದ್ವಿತೀಯ ಹಂತದ 26.9 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಶೇ.95 ರಷ್ಟು ಪೂರ್ಣಗೊಂಡಿದೆ.ಇನ್ನುಳಿದಂತೆ ಸಂಪರ್ಕ ರಸ್ತೆಯ ಕೆಲಸಗಳು ಹಾಗೂ ಕೋರ್ಟ್ ಹಾಲ್ ಪೀಠೋಪಕರಣಗಳ ಕೆಲಸಗಳು ನಡೆಯುತ್ತಿದೆ.ಮಾ.15ಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು.ಏಪ್ರಿಲ್ ತಿಂಗಳ ಕೊನೆಗೆ ಲೋಕಾರ್ಪಣೆಗೊಳ್ಳಲಿದೆ-

ಲೋಕೋಪಯೋಗಿ ಇಲಾಖೆ ಪುತ್ತೂರು