ಕಡಬ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಓಂತ್ರಡ್ಕದಲ್ಲಿ ಆಂಗ್ಲ ಭಾಷ ಪದವೀಧರ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶೈಕ್ಷಣಿಕ ಚಿಂತಕ, ಅಂಕಣಕಾರ, ಕಥೆಗಾರ ದಿಲೀಪ್ ಕುಮಾರ್ ಸಂಪಡ್ಕ ಇವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ನೀಡುವ ರಾಷ್ಟ್ರಿಯ ಶಿಕ್ಷಣ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ಓಂತ್ರಡ್ಕ ಶಾಲೆಯಲ್ಲಿ 9 ವರ್ಷಗಳಿಂದ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸುಮಾರು ಒಂಭತ್ತು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಶೈಕ್ಷಣಿಕ ಕೋ-ಆರ್ಡಿನೇಟರ್, ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ಒಟ್ಟು 16 ವರ್ಷಗಳ ಸೇವಾನುಭವನ್ನು ಹೊಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ತರಬೇತಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಿಕ್ಷಕರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊರೋನಾ ಕಾಲದಲ್ಲಿ ಕಲಿಕಾ ಚೇತರಿಕೆಯ 8ನೇ ತರಗತಿಯ ಇಂಗ್ಲೀಷ್ ಕಲಿಕಾ ಹಾಳೆ ತಯಾರಿಕೆಯ ಸಂಪನ್ಮೂಲ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಹಲವು ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ, ರಾಷ್ಟ್ರಿಯ ಮತ್ತು ಅಂತರಾಷ್ಷೀಯ ನಿಯತಕಾಲಿಕೆಗಳಲ್ಲಿ ಕೂಡ ಪ್ರಕಟಗೊಂಡಿದೆ. ಈ ಹಿಂದೆ ಇವರು ಬರೆದಿರುವ ಲೇಖನವನ್ನು ಮೆಚ್ಚಿ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್‌ರವರು ಇವರಿಗೆ ದೂರವಾಣಿ ಕರೆ ಮಾಡಿ ಅಂಭಿನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆ ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಆಡಳಿತ ಸುಧಾರಣೆಗೆ ಭಾರತೀಯ ಶಿಕ್ಷಣ ಸೇವೆ (ಐಇಎಸ್) ಯನ್ನು ಆರಂಭಿಸಬೇಕು ಮತ್ತು ಈ ಪರೀಕ್ಷೆಯನ್ನು ನಡೆಸುವ ನಿಯಮಗಳ ಬಗ್ಗೆ ಇವರು ಸಿದ್ದಪಡಿಸಿದ ಪ್ರಸ್ತಾವನೆಗೆ ಪ್ರಧಾನ ಮಂತ್ರಿಗಳಿಂದ ಸ್ಪಂದನೆ ಕೂಡ ದೊರೆತಿರುವುದು ಇವರ ಶೈಕ್ಷಣಿಕ ಚಿಂತನೆಗೆ ಸಾಕ್ಷಿಯಾಗಿದೆ. ಇವರು ರಾಷ್ಟಿಯ ಮತ್ತು ಅಂತರಾಷ್ಷೀಯ ಸಮ್ಮೆಳನಗಳಲ್ಲಿ ಕೂಡ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿರುತ್ತಾರೆ. ಕೆಲವು ಪದವಿ ಮಟ್ಟದ ಪಠ್ಯಪುಸ್ತಕಗಳಿಗೆ ಪಾಠಗಳನ್ನು ಬರೆದಿರುವ ಅನುಭವ ಇವರಿಗಿದೆ. ಕುವೆಂಪು ವಿಶ್ವವಿದ್ಯಾನಿಲಯ ಎಂ.ಎ ಅರ್ಥಶಾಸ್ತ್ರ ದಲ್ಲಿ ಎಳನೆಯ ರ‍್ಯಾಂಕ್ ಗಳಿಸಿರುವ ಇವರು ಅಳಗಪ್ಪ ವಿಶ್ವವಿದ್ಯಾನಿಲಯಿಂದ ಎಂ.ಎ (ಇಂಗ್ಲೀಷ್), ಕುವೆಂಪು ವಿಶ್ವವಿದ್ಯಾನಿಲಯಿಂದ ಎಂ.ಎ (ಇತಿಹಾಸ), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಿಂದ ಎಂ.ಇಡಿ (ಶಿಕ್ಷಣ)ಮತ್ತು ಮೈಸ್ ನಿಂದ ಡಿ.ಸಿ.ಎ ಪದವಿಗಳನ್ನು ಪಡೆದಿರುತ್ತಾರೆ. ಕೆ-ಸೆಟ್ ಪರೀಕ್ಷೆಯನ್ನು ಕೂಡ ತೆರ್ಗಡೆ ಹೊಂದಿರುತ್ತಾರೆ. ಇವರು ರಂಗಭೂಮಿ ಕಲಾವಿದರಾಗಿ, ಹಲವಾರು ರಂಗ ಪ್ರದರ್ಶನಗಳಲ್ಲಿ ಸಹ ಹೆಸರು ಮಾಡಿದ್ದಾರೆ. ವಿವಿಧ ಶಿಕ್ಷಕ ಸಂಘಟನೆಗಳ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿಲೀಪ್ ಕುಮಾರ್‌ರವರ ಶಿಕ್ಷಣ, ಸಂಘಟನೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಭಾನುವಾರ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ಅಧ್ಯಕ್ಷರಾದ ಶ್ರೀ ಮುಧುನಾಯ್ಕ ಲಂಬಾಣಿ ಇವರ ಸಮ್ಮುಖದಲ್ಲಿ ರಾಷ್ಟ್ರಮಟ್ಟದ ಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಹಿಂದೆ ಇವರಿಗೆ ಕನ್ನಡ ರಕ್ಷಣಾ ವೇದಿಕೆಯು ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇತ್ತೀಚಿಗೆ ಇವರ ‘ಕೊರೊನಾ ಕಾಲದ ಮಾತು ಮಂಥನ’ ಎಂಬ ಕೃತಿಯು ಪ್ರಕಟಗೊಂಡಿದೆ. ರಾಜ್ಯ ಮತ್ತು ಜಿಲ್ಲೆಯ ಹಲವು ಸಂಘ, ಸಂಸ್ಥೆಗಳೂ ಸೇರಿದಂತೆ ಶಿಕ್ಷಕರು, ಸಂಘಟನೆಗಳು ಇವರನ್ನು ಅಭಿನಂದಿಸಿವೆ.