ಪುತ್ತೂರು: ತಿಂಗಳಾಡಿ ಸಮೀಪದ ದರ್ಬೆ ಅಂಗನವಾಡಿ ಕೇಂದ್ರದ ಹಂಚು ತೆಗೆದು ಒಳನುಗ್ಗಿದ ಕಳ್ಳರು ಅಂಗನವಾಡಿಯಲ್ಲಿದ್ದ ಪಾತ್ರೆಗಳನ್ನು ಕದ್ದೊಯ್ದ ಘಟನೆ ಎ.4ರಂದು ಬೆಳಕಿಗೆ ಬಂದಿದೆ.
ಅಂಗನವಾಡಿಯ ಹಿಂಭಾಗದ ಹಂಚು ತೆಗೆದು ಒಳನುಗ್ಗಿರುವ ಕಳ್ಳರು ಅಂಗನವಾಡಿಯೊಳಗಿದ್ದ ಎಲ್ಲಾ ಪಾತ್ರೆಗಳನ್ನು ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗನವಾಡಿ ಶಿಕ್ಷಕಿ ಸುಲೋಚನಾ ಹಾಗೂ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸೃಜನಿ ರೈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಕೆದಂಬಾಡಿ ಗ್ರಾ.ಪಂ ಸದಸ್ಯ ಪ್ರವೀಣ್ ಶೆಟ್ಟಿ, ಮುಂಡೂರು ಗ್ರಾ.ಪಂ ಸದಸ್ಯರಾದ ಮಹಮ್ಮದ್ ಆಲಿ, ಕರುಣಾಕರ ಗೌಡ ಎಲಿಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಳ್ಳತನ ನಡೆದ ಹಿನ್ನೆಲೆಯಲ್ಲಿ ಎ.4ರಂದು ಅಂಗನವಾಡಿಗೆ ರಜೆ ನೀಡಲಾಗಿದೆ ಎಂದು ಅಂಗನವಾಡಿ ಶಿಕ್ಷಕಿ ಸುಲೋಚನಾ ತಿಳಿಸಿದ್ದಾರೆ.