*ಸಮಾಜ ಬಾಂಧವರ ಕಷ್ಟಗಳಿಗೆ ಸಂರಕ್ಷಣಾ ಸಮಿತಿ ಸ್ಪಂದಿಸುತ್ತಿದೆ-ಉಮೇಶ ನಾಯ್ಕ ಪೆರುವಾಯಿ
*ಸುಪ್ತ ಪ್ರತಿಭೆಗೆ ಇಂತಹ ಕಾರ್ಯಕ್ರಮಗಳು ವೇದಿಕೆಯಾಗಿದೆ-ಲೀಲಾವತಿ ಎಸ್. ನಾಯ್ಕ
*ಒಗ್ಗಟ್ಟಿನ ಕಾರ್ಯಕ್ರಮಗಳಿಗೆ ನಾವೆಲ್ಲರೂ ಬಲತುಂಬಬೇಕು-ಪುಷ್ಪಾ ಅಮ್ಮೆಕ್ಕಳ
*ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವುದು ಉದ್ಧೇಶ-ಅಶೋಕ್ ನಾಯ್ಕ ಕೆದಿಲ
ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವತಿಯಿಂದ 2ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮರಾಟಿ ಟ್ರೋಫಿ-2025 ಎ.6ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಬೆಳಿಗ್ಗೆ ಕ್ರಿಡಾ ಧ್ವಜಾರೋಹಣ ನಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಬಳಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು.
ಬೆಂಗಳೂರು ಮರಾಟಿ ಯುವ ವೇದಿಕೆ ಅಧ್ಯಕ್ಷ ಉಮೇಶ ನಾಯ್ಕ ಪೆರುವಾಯಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಕಳೆದ 6 ವರ್ಷದ ಹಿಂದೆ ಸಂರಕ್ಷಣಾ ಸಮಿತಿ ಸ್ಥಾಪನೆಯಾಯಿತು. ಬೆಂಗಳೂರು ಮರಾಟಿ ಯುವ ವೇದಿಕೆಯು ಸಂರಕ್ಷಣಾ ಸಮಿತಿಗೆ ಬೆನ್ನೆಲುಬಾಗಿ ನಿಂತಿದೆ. ನಮ್ಮ ಸಮುದಾಯದ ಬಡ ಜನರಿಗೆ ಸಹಾಯ ಹಸ್ತ ಮಾಡುತ್ತಿದ್ದು ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಇದೆ. ಸಮಾಜ ಬಾಂಧವರಿಗೆ ಸಮಸ್ಯೆ ಬಂದಾಗ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಸಂರಕ್ಷಣಾ ಸಮಿತಿ ನಮ್ಮ ಯುವ ವೇದಿಕೆಗೂ ಬೆಂಬಲ, ಸಹಕಾರ ನಿಡುತ್ತಿದೆ ಎಂದು ಹೇಳಿದ ಅವರು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಡಬ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಲೀಲಾವತಿ ಎಸ್. ನಾಯ್ಕ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಅಂಕಣ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಒಂದು ವೇದಿಕೆಯಾಗಿದೆ. ಸಮಾಜ ಬಾಂಧವರ ಪ್ರತಿಭೆಗಳಿಗೆ ಈ ಮೂಲಕ ಪ್ರೋತ್ಸಾಹ ನಿಡಲಾಗುತ್ತದೆ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಾಮಾನ್ಯ. ಇವೆರಡನ್ನೂ ಸಮಾನಾಗಿ ಸ್ವೀಕರಿಸಿ ಮುಂದುವರಿಯಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಪೆರ್ಲ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷೆ ಪುಷ್ಪಾ ಅಮ್ಮೆಕ್ಕಳ ಮಾತನಾಡಿ, ವಿದ್ಯೆಗಳಲ್ಲಿ ಕ್ರೀಡೆ ಒಂದು. ಕ್ರೀಡೆಗೆ ಪ್ರೋತ್ಸಾಹ ಕೊಡಬೇಕಾದದ್ದು ಅಗತ್ಯವಾಗಿದೆ. ಇಂತಹ ಕೆಲಸವನ್ನು ಸಂರಕ್ಷಣಾ ಸಮಿತಿಯು ಮಾಡುತ್ತಿದೆ. ಶಾಲಾ ಕಾಲೇಜು ದಿನಗಳ ನಂತರ ಕ್ರೀಡೆಗೆ ವೇದಿಕೆ ಸಿಗುವುದು ಸಂಘಟನೆಗಳ ಮೂಲಕ. ಆದುದರಿಂದ ಸಮಾಜದ ಮಕ್ಕಳು, ಯುವಕರು, ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗಹಿಸಬೇಕು ಎಂದರು. ನಮ್ಮ ಸಮಾಜದ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ. ಒಗ್ಗಟ್ಟಿನಿಂದ ಮಾಡುವ ಕಾರ್ಯಕ್ರಮಗಳಿಗೆ ನಾವೆಲ್ಲರೂ ಬಲತುಂಬಬೇಕು ಇದರಿಂದ ನಮ್ಮ ಸಮಾಜ ಮುಂದುವರಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಮಾತನಾಡಿ, ನಮ್ಮ ಸಮಾಜದ ಹಿಂದುಳಿದ ಸಮಾಜ ಎಂದು ತುಳಿಯಲ್ಪಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಘಟನೆ ಏನು ಎಂಬುದನ್ನು ತೋರಿಸಿಕೊಡುವ ಕಾರ್ಯ ಆಗಬೇಕು. ಕಳೆದ ಆರು ವರ್ಷದ ಹಿಂದೆ ಸ್ಥಾಪನೆಯಾದ ಮರಾಟಿ ಸಂರಕ್ಷಣಾ ಸಮಿತಿ ಸಮಾಜ ಬಾಂಧವರ ಏಳಿಗೆಗಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವುದು ಸಂಘಟನೆಯ ಉದ್ಧೇಶವಾಗಿದೆ. ಸಮಾಜದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ, ಆರೋಗ್ಯಕ್ಕೆ ಸಹಾಯ ಮಾಡಲಾಗಿದೆ. ಅಲ್ಲದೆ ಹಲವು ಮನೆಗಳಿಗೆ ರಸ್ತೆ ಸಂಪರ್ಕವನ್ನು ಸೌಹಾರ್ದಯುತಾಗಿ ನಿರ್ಮಿಸಿ ಕೊಟ್ಟಿದ್ದೇವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಕಾರ್ಯಗಳನ್ನು ಮಾಡಲಾಗಿದೆ ಎಂದ ಅವರು ಗ್ರಾಮೀಣ ಕ್ರೀಡಾಕೂಟದಿಂದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸಲು ಸಾಧ್ಯ. ನಮ್ಮ ಯುವ ಸಮೂಹ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ತೀರ್ಪುಗಾರರಿಗೆ ಗೌರವಾರ್ಪಣೆ:
ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿರುವ ತೀರ್ಪುಗಾರರನ್ನು ಹೂ, ಟೊಪ್ಪಿ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಪುರುಷೋತ್ತಮ ಕಲ್ಲಡ್ಕ, ದಿನೇಶ್ ನಾಯ್ಕ ನೀರ್ಕಜೆ, ಶಿವ ನಾಯ್ಕ, ವಿಠಲ ನಾಯ್ಕ, ಪರೀಕ್ಷಿತ್ ಹಾಗೂ ಕ್ರಿಕೆಟ್ ತೀರ್ಪುಗಾರರಾದ ಪುಷ್ಪರಾಜ್, ಚೇತನ್ರವರನ್ನು ಗೌರವಿಸಲಾಯಿತು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಭುನೇಶ್ವರಿ ಮುಂಡೂರು, ಕ್ರೀಡಾ ಸಂಚಾಲಕ ಯಶವಂತ ಪೆರುವಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರತ್ನಾವತಿ ಪ್ರಾರ್ಥಿಸಿದರು. ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ವಿಮಲ ನಾಯ್ಕ ಸ್ವಾಗತಿಸಿ, ಸೇಸಪ್ಪ ನಾಯ್ಕ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮುಂಡೋವುಮೂಲೆ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಪುರುಷರಿಗೆ ಅಂಡರ್ ಆರ್ಮ್ ಮುಕ್ತ ಕ್ರಿಕೆಟ್ ಪಂದ್ಯಾಟ, 8 ಜನರ ಹಗ್ಗ ಜಗ್ಗಾಟ, ಮಹಿಳೆಯರಿಗೆ 8 ಜನರ ಹಗ್ಗ ಜಗ್ಗಾಟ, ತ್ರೋಬಾಲ್, ಸಂಗೀತ ಕುರ್ಚಿ, ಬಾಂಬ್ ಇನ್ ದಿ ಸಿಟಿ ಸ್ಪರ್ಧೆಗಳು ನಡೆಯಿತು. ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕ್ರೀಡಾಜ್ಯೋತಿ ಪ್ರಜ್ವಲನೆ
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಭುವನೇಶ್ವರಿ ಮುಂಡೂರು ಕ್ರೀಡಾಜ್ಯೋತಿ ಪ್ರಜ್ವಲಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಭವನೇಶ್ವರಿ ಮುಂಡೂರುರವರಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸಿದರು. ಬಳಿಕ ಅವರು ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬಂದು ಕ್ರೀಡಾಂಗಣದಲ್ಲಿನ ಕುಂಡದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿದರು.