ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಟ್ಟಕಡೇಯ ಗ್ರಾಮ ಮತ್ತು ಕೇರಳ ಗಡಿಗ್ರಾಮವಾದ ಮಾಣಿಲದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಿದರು. ಒಟ್ಟು 1.80 ಕೋಟಿ ರೂ ಅನುದಾನವನ್ನು ಗ್ರಾಮಕ್ಕೆ ನೀಡಿದರು.
ಮಾಣಿಲ ಗ್ರಾಮದಲ್ಲಿ ರಿಕ್ಷಾ ತಂಗುದಾನದ ಉದ್ಘಾಟನೆ, ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಮಾಣಿಲ ಗ್ರಾಮದ ಗ್ರಂಥಾಲಯ ಉದ್ಘಾಟನೆ, ದೈವಸ್ಥಾನದ ರಸ್ತೆಯ ಉದ್ಘಾಟನೆ, ಮಾಣಿಲ ಪ್ರೌಢ ಶಾಲೆಗೆ ಶೌಚಾಲಯಕ್ಕೆ ಶಿಲಾನ್ಯಾಸ, ಮಾಣಿಲ ಗ್ರಾ.ಪಂ ನಲ್ಲಿ ರಾಜೀವ ಗಾಂಧಿ ಸೇವಾ ಯೋಜನೆ ಉದ್ಘಾಟನೆ ಸೇರಿದಂತೆ ಹತ್ತು ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕೇರಳ ಸಂಪರ್ಕಕ್ಕೆ ಸೇತುವೆಯ ನಿರ್ಮಾಣ ಮುಂದಿನ ವರ್ಷ: ಅಶೋಕ್ ರೈ
ಮಾಣಿಲದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸಲು ಇಲ್ಲಿನ ಹೊಳೆಗೆ ಸೇತುವೆಯ ನಿರ್ಮಾಣ ಅಗತ್ಯವಿದ್ದು ಕಳೆದ ವರ್ಷ ಬೇಡಿಕೆ ಇಟ್ಟಿದ್ದರು ಆದರೆ ಈ ಬಾರಿ ಬಜೆಟ್ ನಲ್ಲಿ ಉಪ್ಪಿನಂಗಡಿಯ ಬಳಿ ಕಿಂಡಿ ಅಣೆಕಟ್ಟಿಗೆ ಹೆಚ್ಚುವರಿ ಅನುದಾನ ಕೇಳಿದ ಕಾರಣ ಮುಂದಿನ ವರ್ಷ ನಾನು ಇಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಖಂಡಿತಾ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಈ ಸೇತುವೆ ನಿರ್ಮಾಣವಾದಲ್ಲಿ ಪಕ್ಕದ ಕೇರಳ ರಾಜ್ಯಕ್ಕೂ ಸಂಪರ್ಕ ಕಲ್ಪಿಸಿದಂತಾಗುತ್ತದೆ ,ಸೇತುವೆ ಇಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.

ಮಾಣಿಲ ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿದ್ದೇನೆ:
ಹಿಂದೆಂದೂ ಬರದಷ್ಟು ಅನುದಾನ ಈ ಬಾರಿ ಮಾಣಿಲ ಗ್ರಾಮಕ್ಕೆ ತಂದಿದ್ದೇನೆ,ಮುಂದೆಯೂ ಈ ಗ್ರಾಮಕ್ಕೆ ಇನ್ನೂ ಅನುದಾನವನ್ನು ನೀಡುತ್ತೇನೆ. ಕಟ್ಟಕಡೇಯ ಗ್ರಾಮವಾದ ಮಾಣಿಲವನ್ನು ಕಡೆಗಣಿಸಲಾಗಿತ್ತು ಆ ಕಾರಣಕ್ಕೆ ಇಲ್ಲಿ ಇನ್ನೂ ಅಭಿವೃದ್ದಿಯಲ್ಲಿ ಹಿಂದೆ ಇದೆ ಎಂದು ಶಾಸಕರು ಹೇಳಿದರು.
ಅಭಿವೃದ್ದಿ ಮಾಡಿದವರಿಗೆ ವೋಟು ಹಾಕಿ:
ಅಭಿವೃದ್ದಿ ಮಾಡಿದವರಿಗೆ ವೋಟು ಹಾಕುವ ಮನೋಭಾವ ಜನರಲ್ಲಿರಬೇಕು. ಇಲ್ಲಿನ ರಸ್ತೆಗಳು ಇನ್ನೂ ಡಾಮರೀಕರಣವಾಗಿಲ್ಲ ಆದರೂ ಆ ಬಗ್ಗೆ ಜನ ತಲೆಕೆಡಿಸಿಕೊಂಡಿಲ್ಲ, ಅಭಿವೃದ್ದಿ ಮಾಡದೇ ಇದ್ದರೂ ಜನ ಅವರಿಗೇ ಬೆಂಬಲ ನೀಡುತ್ತಿರುವುದು ಯಾಕೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಕಾಂಗ್ರೆಸ್ ಸರಕಾರ ಇನ್ನೇನು ಕೊಡಲು ಬಾಕಿ ಇಲ್ಲ:
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿದೆ. ಪ್ರತೀ ಮಹಿಳೆಗೆ ತಿಂಗಳಿಗೆ 2000 ಕೊಡುತ್ತಿದ್ದಾರೆ, ಕರೆಂಟ್ ಬಿಲ್ ಫ್ರೀ, ಬಸ್ ಫ್ರೀ, ನಿರುದ್ಯೋಗಿ ಯುವಕರಿಗೆ ಮಾಸಾಶನ ಸೇರಿದಂತೆ ಪಂಚ ಗ್ಯಾರಂಟಿಯನ್ನು ಜನರಿಗೆ ಕೊಟ್ಟಿದೆ. ಪಂಚ ಗ್ಯಾರಂಟಿ ಜೊತೆಗೆ ಇತರೆ ಅಭಿವೃದ್ದಿ ಕೆಲಸಗಳಿಗೂ ಅನುದಾನ ನೀಡುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಳದ ಅಭಿವೃದ್ದಿ, ಆರ್ ಟಿ ಒ ಕೇಂದ್ರ,ತಾಲೂಕು ಕ್ರೀಡಾಂಗಣ ಹೀಗೆ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ ಇಷ್ಟೆಲ್ಲಾ ಕೊಟ್ಟ ಕಾಂಗ್ರೆಸ್ಸನ್ನು ಜನ ಮರೆಯಬಾರದು ಎಂದು ಶಾಸಕರು ಹೇಳಿದರು.

ಅಕ್ರಮ ಸಕ್ರಮ ಮನೆ ಬಾಗಿಲಿಗೆ ತಲುಪಿಸಿದ್ದೇನೆ:
ಇಷ್ಟು ವರ್ಷದಿಂದ ಆಗದ ಅಕ್ರಮ ಸಕ್ರಮ ಈ ಬಾರಿ ಮಂಜೂರು ಮಾಡಲಾಗಿದೆ. ಈ ಹಿಂದಿನ ಶಾಸಕರು ಮಾಡಿದ್ರ? ನೀವು ಕೆಲಸ ಮಾಡದವರಿಗೆ ವೋಟು ಹಾಕುತ್ತೀರಿ, ಕುಟುಂಬಕ್ಕೆ ಆಧಾರವಾಗಿರುವ ಕಾಂಗ್ರೆಸ್ ಪಕ್ಷವನ್ನು ಜನ ಅಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ ,ಪೆರುವಾಯಿ ಗ್ರಾಪಂ ಅಧ್ಯಕ್ಷೆ ನಫೀಸಾ ಪೆರುವಾಯಿ, ಕಾಂಗ್ರೆಸ್ ಮುಖಂಡ ಕೆಳಗಿನ ಮನೆ ಜಗನ್ನಾಥ ಶೆಟ್ಟಿ, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.