ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ ದೇವಾಲಯದ ಜಾಗ ಅನುಭೋಗದಾರ ರಿಂದ ಹಸ್ತಾಂತರ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಒಡೆತನಕ್ಕೆ ಸೇರಿದ್ದ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ಸ್ವ ಇಚ್ಚೆಯಿಂದ ಪುತ್ತೂರು ಶಾಸಕರ ಸಮ್ಮುಖದಲ್ಲಿ ದೇವಾಲಯಕ್ಕೆ ಹಸ್ತಾಂತರಿಸಲಾಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ದೇವಾಲಯದ ಭೂಮಿಯನ್ನು ಯಾರೆಲ್ಲಾ ಸ್ವಾಧೀನ ಹೊಂದಿದ್ದಾರೆಯೋ ಅವರೆಲ್ಲಾ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ದೇವಾಲಯದ ಭೂಮಿಯನ್ನು ದೇವಾಲಯಕ್ಕೆ ಹಿಂದಿರುಗಿಸಬೇಕೆಂದು ವಿನಂತಿಸಿದ ಮೇರೆಗೆ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ಸುಮಾರು 29 ಸೆಂಟ್ಸ್ ಭೂಮಿಯನ್ನು ಸ್ಥಳ ಬಾಡಿಗೆಯ ನೆಲೆಯಲ್ಲಿ ಅನುಭೋಗದಾರರಾಗಿದ್ದ ವೈದ್ಯ ಕೆ. ಶೀನಪ್ಪ ಶೆಟ್ಟಿಯವರ ಆಶಯದಂತೆ ಅವರ ಮಕ್ಕಳು ಸದ್ರಿ ಭೂಮಿಯನ್ನು ದೇವಾಲಯಕ್ಕೆ ಹಿಂದಿರುಗಿಸಿದ್ದು, ಶಾಸಕ ಅಶೋಕ್ ಕುಮಾರ್ ರೈ ಸಮ್ಮುಖದಲ್ಲಿ ಶ್ರೀ ದೇವರ ಮುಂದೆ ಪ್ರಸಾದ ನೀಡುವ ಮೂಲಕ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ , ದೇವಾಲಯದ ಅಭಿವೃದ್ಧಿಗೆ ಭಕ್ತ ಜನತೆಯ ಸಹಕಾರ ಯಾವ ರೀತಿ ದೊರಕಬೇಕೆನ್ನುವುದನ್ನು ವೈದ್ಯ ಕೆ.ಎಸ್. ಶೆಟ್ಟಿಯವರ ಮಕ್ಕಳು ಕಾರ್ಯ ರೂಪದಲ್ಲಿ ತೋರಿಸಿದ್ದಾರೆ. ಪೇಟೆಯ ಹೃದಯ ಭಾಗದಲ್ಲಿರುವ ಬೆಲೆ ಬಾಳುವ ಭೂಮಿಯನ್ನು ಯಾವುದೇ ಬೇಡಿಕೆ ಮುಂದಿರಿಸದೆ ಸ್ವ ಇಚ್ಚೆಯಿಂದ ದೇವಾಲಯಕ್ಕೆ ಹಿಂದಿರುಗಿಸುವ ಮೂಲಕ ಮಾದರಿಯಾಗಿದ್ದಾರೆ. ಇನ್ನು ಬಾಕಿ ಉಳಿದಿರುವ 4 ಸೆಂಟ್ಸ್ ಭೂಮಿಯ ಅನುಭೋಗದಾರರಲ್ಲಿಯೂ ವಿನಂತಿಸಲಾಗಿದೆ. ಅವರು ಸಹಕಾರ ನೀಡಿದರೂ ನೀಡದಿದ್ದರೂ ಭೂಮಿಯನ್ನು ಸ್ವಾಧೀನಪಡಿಸುವ ಕಾರ್ಯ ಮುಂದಕ್ಕೆ ನಡೆಯಲಿದೆ ಎಂದರು. ಹಾಗೆಯೇ ಪುತ್ತೂರಿನ ಮಹಾಲಿಂಗೇಶ್ವರ ದೇವರ 15 ಎಕ್ರೆ ಭೂಮಿಯನ್ನು ಅದರಲ್ಲಿ ಅನುಭೋಗದಾರರಲ್ಲಿ ದೇವಾಲಯಕ್ಕೆ ಹಿಂದಿರುಗಿಸಲು ಮನವಿ ಮಾಡಲಾಗಿದೆ. ಸೂಕ್ತ ಸಮಯಾವಕಾಶ ನೀಡಿದ ಬಳಿಕ ಆ ಎಲ್ಲಾ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದರು.

ಭೂಮಿಯನ್ನು ದೇವಾಲಯಕ್ಕೆ ಹಿಂದಿರುಗಿಸಿದ ವೈದ್ಯ ಕೆ.ಎಸ್. ಶೆಟ್ಟಿಯವರ ಮಕ್ಕಳಾದ ಡಾ.ಯತೀಶ್ ಕುಮಾರ್ ಶೆಟ್ಟಿ ಹಾಗೂ ಕೆ. ಜಗದೀಶ್ ಶೆಟ್ಟಿ ಯವರು ಮಾತನಾಡಿ, ಸುಮಾರು 55 ವರ್ಷಗಳಿಂದ ನಮ್ಮ ಸ್ವ್ವಾಧೀನದಲ್ಲಿದ್ದ ಭೂಮಿಯನ್ನು ದೇವಾಲಯದ ಅಭಿವೃದ್ಧಿಯ ಉದ್ದೇಶಕ್ಕಾಗಿ ತುಂಬಾ ಸಂತೋಷದಿಂದ ದೇವಾಲಯಕ್ಕೆ ಹಿಂದಿರುಗಿಸುತ್ತಿದ್ದೇವೆ . ದೇವಾಲಯದ ಆಡಳಿತದ ವಿನಂತಿಯ ಮೊದಲೇ ನಾವು ಭೂಮಿಯನ್ನು ಹಿಂದಿರುಗಿಸಲು ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ಸಮಿತಿ ಸದಸ್ಯರಾದ ದೇವಿದಾಸ್ ರೈ, ಡಾ. ರಮ್ಯ ರಾಜಾರಾಮ್, ವೆಂಕಪ್ಪ ಪೂಜಾರಿ, ಸೋಮನಾಥ , ಪುತ್ತೂರು ಮಹಾಲಿಂಗೇಶ್ವ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಸದಸ್ಯರಾದ ವಿನಯ ಸುವರ್ಣ, ಪ್ರಮುಖರಾದ ಕರುಣಾಕರ ಸುವರ್ಣ, ಡಾ.ರಘು, ಡಾ. ರಾಜಾರಾಮ್ ಕೆ.ಬಿ., ಯು. ರಾಮ, ಸುಜೀರ್ ಗಣಪತಿ ನಾಯಕ್, ದೇವಿದಾಸ್ ಶೆಟ್ಟಿ, ಸುದರ್ಶನ್, ವಿನಯ್ ಕುಮಾರ್, ಸ್ವರ್ಣೇಶ್ ಗಾಣಿಗ, ಸತೀಶ್ ಶೆಟ್ಟಿ ಹೆನ್ನಾಳ, ರೂಪೇಶ್ ರೈ ಅಲಿಮಾರ್, ಯೋಗೀಶ್ ಸಾಮಾನಿ, ರವೀಂದ್ರ ಗೌಡ ಪಟಾರ್ತಿ , ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ದಿವಾಕರ ಗೌಡ, ಜನಾರ್ದನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


ನಮ್ಮ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ: ಸುಂದರ ಗೌಡ
ಇದೇ ಸಂಧರ್ಭದಲ್ಲಿ ದೇವಾಲಯದ ನಾಲ್ಕು ಸೆಂಟ್ಸ್ ಭೂಮಿಯಲ್ಲಿ ವಾಸ್ತವ್ಯದ ಮನೆಯನ್ನು ಹೊಂದಿರುವ ಸುಂದರ ಗೌಡ ರವರೊಂದಿಗೆ ಶಾಸಕರು ಮಾತುಕತೆಯನ್ನು ನಡೆಸಿದ್ದು, ನೀಡಲಾದ ಕಾಲಾವಕಾಶದೊಳಗೆ ಮನೆಯನ್ನು ತೆರವುಗೊಳಿಸಲು ಸೂಚಿಸಿದ್ದರು. ಈ ವೇಳೆ ದೇವಾಲಯದ ಈ ಹಿಂದಿನ ಸುಂದರೇಶ್ ಅತ್ತಾಜೆ ನೇತೃತ್ವದ ಆಡಳಿತದ ಒಪ್ಪಿಗೆ ಪಡೆದು ಸದ್ರಿ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಮನೆಯನ್ನು ನಿರ್ಮಿಸಲಾಗಿದೆ. ಒಪ್ಪಿಗೆ ಪಡೆಯುವ ವೇಳೆ ಅಂದಿನ ಆಡಳಿತ ಬಯಸಿದಂತೆ ದೇವಾಲಯ ಅಭಿವೃದ್ಧಿಗೆ 60 ಸಾವಿರ ಮೊತ್ತವನ್ನು ಪಾವತಿಸಿದ್ದೇವೆ. ಇದೀಗ ಹೊಸ ಆಡಳಿತದಿಂದ ಮನೆಯನ್ನು ತೆರವು ಮಾಡಿ ಎಂದು ಸೂಚನೆ ನೀಡಿರುವುದು ನೋವು ತಂದಿದೆ. ನಮ್ಮ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ತೆರವು ಪ್ರಕ್ರಿಯೆಯಿಂದ ನಮಗೆ ವಿನಾಯಿತಿ ನೀಡಬೇಕೆಂದು ಸುಂದರ ಗೌಡರವರು ವಿನಂತಿಸಿದ್ದಾರೆ.

ಜೆಸಿಬಿ ಕಾರ್ಯಾಚರಣೆಗೆ ಚಾಲನೆ
ವೈದ್ಯ ಕೆ.ಎಸ್. ಶೆಟ್ಟಿಯವರ ಮಕ್ಕಳು ಹಿಂದಿರುಗಿಸಿದ ಭೂಮಿಯ ಹಸ್ತಾಂತರ ಪ್ರಕ್ರಿಯೆ ಮುಗಿದಾಕ್ಷಣ ಮೊದಲೇ ತಂದಿರಿಸಲಾಗಿದ್ದ ಜೆಸಿಬಿ ಯಂತ್ರದಿಂದ ಭೂಮಿಯನ್ನು ಸಮತಟ್ಟುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಲೆಬಾಳುವ ಮರಗಳನ್ನು ಮತ್ತು ತೆಂಗಿನ ಮರಗಳನ್ನು ಉಳಿಸುವಂತೆ ಶಾಸಕರು ನಿರ್ದೇಶನ ನೀಡಿದರು.

LEAVE A REPLY

Please enter your comment!
Please enter your name here