ಪ್ರಚೋದನಾಕಾರಿ ಭಾಷಣ ಪ್ರಕರಣ: ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಬೆಳ್ಳಾರೆಯ ಶಾಫಿ ಬೆಳ್ತಂಗಡಿ ಕೋರ್ಟ್‌ಗೆ ಹಾಜರು

0

ಪುತ್ತೂರು: ಬಿಜೆಪಿ ಯುವಮೋರ್ಚಾದ ಮುಖಂಡರಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ 2 ವರ್ಷಗಳ ಹಿಂದೆ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಬೆಳ್ತಂಗಡಿ ಠಾಣಾ ಪೊಲೀಸರು ಎ.7ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶ ಸಂದೇಶ್ ಅವರು ಪ್ರಚೋದನಾಕಾರಿ ಭಾಷಣ ಪ್ರಕರಣದ ಮುಂದಿನ ವಿಚಾರಣೆಗಳಿಗೆ ಶಾಫಿ ಬೆಳ್ಳಾರೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸುವಂತೆ ತನಿಖಾಧಿಕಾರಿಗೆ ಸೂಚಿಸಿ ವಿಚಾರಣೆ ಮುಂದೂಡಿದರು. ಈ ವೇಳೆ ಶಾಫಿ ಬೆಳ್ಳಾರೆ ಪರ ವಕೀಲ ಪ್ರಶಾಂತ್ ಹಾಜರಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 104/2014ರ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಮುಖಂಡನಾಗಿರುವ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಶಾಫಿ ಮತ್ತಿತರರ ವಿರುದ್ಧ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ ಶಾಫಿ ಬೆಳ್ಳಾರೆ ಮತ್ತಿತರರು ದಿನಾಂಕ 20-೦1-2014ರಂದು ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಸಾಮರಸ್ಯ ಉಳಿಸೋಣ ಕೋಮುವಾದ ಅಳಿಸೋಣ ಎಂಬ ಜನಾಂದೋಲನಾ ಕಾರ್ಯಕ್ರಮದ ಸಭೆಯಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು ಇದರ ವಿಚಾರಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶಾಪಿ ಬೆಳ್ಳಾರೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here