ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ವಿದ್ಯಾಸಂಸ್ಥೆಯ ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಎ.7ರಂದು ನಡೆಯಿತು.
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಇಂತಹ ಪ್ರಶಂಸಾ ಕಾರ್ಯಕ್ರಮಗಳು ಅವರ ಆತ್ಮವಿಶ್ವಾಸವನ್ನು ಬೆಳೆಸುತ್ತವೆ. ಮಕ್ಕಳಿಗೆ ಪ್ರೀತಿ, ಕಾಳಜಿ ಮತ್ತು ಶಿಸ್ತು ಎಂಬ ಮೌಲ್ಯಗಳನ್ನು ನೀಡುವುದು ಪೋಷಕರ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ಇವೆರೆಡರ ಸಂಯೋಜನೆಯಿಂದ ಮಕ್ಕಳ ಭವಿಷ್ಯ ಸುಸ್ಥಿರವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್ ಮಾತನಾಡಿ, ಇದು ನಮ್ಮ ಸಂಸ್ಥೆಯ ಮೊದಲ ಪದವಿ ಪ್ರಧಾನ ಕಾರ್ಯಕ್ರಮವಾಗಿದ್ದು, ಮಕ್ಕಳ ಪ್ರಗತಿಗೆ ಪ್ರತಿಯೊಂದು ಹಂತವೂ ಸ್ಮರಣೀಯವಾಗಬೇಕೆಂಬುದೇ ನಮ್ಮ ಆಶಯ. ನಮ್ಮ ಸಂಸ್ಥೆಯಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಅತ್ಯುತ್ತಮ ಗುಣಮಟ್ಟದಲ್ಲಿ, ಸುಸಜ್ಜಿತವಾದ ಮೂಲ ಸೌಕರ್ಯಗಳೊಂದಿಗೆ ನೀಡಲಾಗುತ್ತಿದೆ. ಪೋಷಕರ ಸಹಕಾರವೂ ಅತ್ಯಂತ ಶ್ಲಾಘನೀಯವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನಮ್ಮಲ್ಲಿ ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿಯನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರೆ.ಫಾ.ಅನೀಶ್ ಪಾರಾಶೆರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಪದವಿ ಪ್ರಧಾನ ಮಾಡಿ ಗೌರವಿಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಪಿ.ಪಿ.ವರ್ಗೀಸ್, ಪ್ರಿನ್ಸಿಪಾಲ್ ಏಲಿಯಸ್.ಎಂ.ಕೆ., ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿಂಡರ್ ಗಾರ್ಟನ್ ವಿಭಾಗದ ಮುಖ್ಯಸ್ಥೆ ವಿಲ್ಮಾ ಡಿ’ಸೋಜ ಸ್ವಾಗತಿಸಿದರು. ಶಿಕ್ಷಕಿ ಶ್ರದ್ಧಾ ನಿರೂಪಿಸಿದರು. ಮಿನಿ ಜಾನ್ಸನ್ ವಂದಿಸಿದರು.ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
