ಪಹಲ್ಗಾಮ್ ಘಟನೆಯಲ್ಲಿ ಆಪತ್ಪಾಂದವನಾಗಿ ಬಂದವನು ಮುಸಲ್ಮಾನನೆಂದು ಬಿಜೆಪಿಗರು ತಿಳಿಯಬೇಕು – ಹಮೀದ್ ಸಾಲ್ಮರ
ಪುತ್ತೂರು: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಹೆಸರನ್ನು ಕೇಳಿ ಲಿಂಗವನ್ನು ನೋಡಿ ಭಯೋತ್ಪಾದಕರು ಗುಂಡು ಹೊಡೆದಾಗ ಅಲ್ಲಿಗೆ ಆಪತ್ಬಾಂದವನಾಗಿ ಬಂದವರು ಮುಸಲ್ಮಾನರು ಎಂಬುದು ಮುಸಲ್ಮಾನರನ್ನು ಹೀನಾಯವಾಗಿ ಚಿತ್ರಿಸುವ ಬಿಜೆಪಿಗರು ತಿಳಿದುಕೊಳ್ಳಬೇಕೆಂದು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ ಹೇಳಿದರು.
ಪಹಲ್ಗಾಮ್ ಘಟನೆ ಮಾನವೀಯತೆಯ ಮೇಲೆ ದಾಳಿಯಾಗಿದೆ ಎಂದು ಎಸ್ಡಿಪಿಐ ವತಿಯಿಂದ ಎ.24ರಂದು ಸಂಜೆ ಗಾಂಧಿಕಟ್ಟೆ ಬಳಿ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಕಾರ್ಯಕರ್ತರು ಮೊಬೈಲ್ ಟಾರ್ಚ್ ಬಳಸಿ ಘಟನೆಯನ್ನು ಖಂಡಿಸಿದರು.
ಹಮೀದ್ ಸಾಲ್ಮರ ಅವರು ಮಾತನಾಡಿ ಕಾಶ್ಮೀರದ ಆಡಳಿತ ಪಾರೂಕ್ ಅಬ್ದುಲ್ಲ ಅವರ ಕೈಯಲ್ಲಿ ಇಲ್ಲ. ನೇರ ಕೇಂದ್ರದ ಆಡಳಿತ ಕೈಯಲ್ಲಿದೆ. ಆದರೆ ಪ್ರವಾಸಿಗರು ಬಂದಾಗ ಅಲ್ಲಿ ಒಬ್ಬ ಪೊಲೀಸ್, ಭದ್ರತಾ ಸಿಬ್ಬಂದಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಅಲ್ಲಿ ಹೆಸರನ್ನು ಕೇಳಿ ಲಿಂಗವನ್ನು ನೋಡಿ ಭಯೋತ್ಪಾದಕರು ಗುಂಡು ಹೊಡೆದಾಗ ಅಲ್ಲಿಗೆ ಆಪತ್ಬಾಂದವನಾಗಿ ಬಂದವರು ಮುಸಲ್ಮಾನರು. ಆದೀಲ್ ಶಾ ಎಂಬ ವ್ಯಕ್ತಿ ಬಂದಿರುವುದು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಆದಿ ಶಾ ಭಯೋತ್ಪಾದಕರ ಬಂದೂಕನ್ನು ಕಸಿಯುತ್ತಾನೆ. ಆಗ ಭಯೋತ್ಪಾದಕರು ಗುಂಡು ಹೊಡೆದಾಗ ಆತ ಹುತಾತ್ಮನಾಗುತ್ತಾನೆ. ಆದಿಲ್ ಶಾನಿಗೆ ಎಸ್ಡಿಪಿಐ ಗೌರವಿಸುತ್ತದೆ. ಅಂತಹ ವ್ಯಕ್ತಿಗಳು ಈ ದೇಶದಲ್ಲಿ ಹುಟ್ಟಿ ಬರಬೇಕು. ದೇಶದಲ್ಲಿ ಮುಸಲ್ಮಾನ ನಾಗರಿಕರನ್ನು ಧಮನಿಸಿದರೂ ಕೂಡಾ ಆದಿಲ್ ಶಾರಂತಹ ವ್ಯಕ್ತಿಗಳು ಇನ್ನು ಜೀವಂತವಾಗಿದ್ದಾರೆ ಎಂದು ಹೇಳಿದರು.
ಮ್ಯಾಚ್ ಪಿಕ್ಸಿಂಗ್ ನಡೆದಿದೆ:
ದೇಶಾದ್ಯಂತ ನಡೆಯುವ ವಕ್ಫ್ ಬಿಲ್ ವಿಚಾರದಿಂದ ಮುಸಲ್ಮಾನರು ಬೀದಿಗೆ ಇಳಿಯುತ್ತಿದ್ದಾರೆ ಎಂದಾಗ ಪಹಲ್ಗಾವ್ ಘಟನೆ ದಾಳಿ ನಡೆಯುತ್ತದೆ. ಆಗ ನಮ್ಮ ದೇಶದ ಪ್ರಧಾನಿ ಮೋದಿ ಸೌದಿಗೆ ಹೋಗುತ್ತಾರೆ. ಅಲ್ಲಿ ರಾಜಕುಮಾರನ್ನು ಅಪ್ಪಿ ಹಿಡಿದು ಸಹೋದರ ಎಂದು ಹೇಳುತ್ತಾರೆ. ಇಲ್ಲಿ ಅದೇ ಸಹೋದರರನ್ನು ಹೀನಾಯಿಸುವ ವ್ಯವಸ್ಥೆ ಮಾಡುತ್ತಾರೆ. ಏನು ಇದರ ರಹಸ್ಯ. ಫಹಲ್ಗಾವ್ ಘಟನೆಯ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು. ಘಟನೆಯಲ್ಲಿ ಸಂಶಯವಿದೆ. ಇದರಲ್ಲಿ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಮೋದಿ ಮತ್ತು ಅಮಿತ್ ಶಾ ದೇಶದಲ್ಲಿ ಕುತಂತ್ರ ರಾಜಕಾರಣ ಮಾಡುತ್ತಾರೆ. ಘಟನೆ ನಡೆದ ಕೆಲ ಸಮಯದಲ್ಲೇ ಬಿಜೆಪಿ ಪ್ರತಿಭಟನೆ ಮೂಲಕ ಮುಸಲ್ಮಾನರನ್ನು ಗುರಿಯಾಗಿಸಿ ಸಂಭ್ರಮದಂತೆ ಆಚರಿಸಿದರು. ಮುಸಲ್ಮಾನರನ್ನು ಹೀನಾಯವಾಗಿ ಚಿತ್ರಿಸಿದರು. ಮಾದ್ಯಮದವರು ಕೂಡಾ ತಾನು ಮುಂದು ಎಂದು ವಿಕೃತಿ ಮೆರೆಯುತ್ತಾರೆ. ಇಲ್ಲಿ ಯಾರು ಕಳ್ಳ ಯಾರು ಮಲ್ಲ ಎಂದು ಗೊತ್ತಾಗುತ್ತಿಲ್ಲ. ಪ್ರತಿಯೊಂದು ನಾಗರಿಕರು ಮುಸಲ್ಮಾನರ ಮೇಲೆ ಮುಗಿ ಬೀಳುವಂತೆ ಮಾಡಲು ಷಡ್ಯಂತ್ರ ನಡೆಸಲಾಗುತ್ತಿದೆ. ಈ ಹಿಂದೆ ಉಗ್ರರನ್ನು ಗಡಿ ದಾಟಿಸಿದಿ ವಿಚಾರ ಯಾವ ಮಾದ್ಯಮದಲ್ಲೂ ಬಂದಿಲ್ಲ. ಭಾರತೀಯ ಸೈನ್ಯದ ರಹಸ್ಯವನ್ನು ಪಾಕಿಸ್ತಾನಕ್ಕೆ ನೀಡಿದವರಲ್ಲಿ ಅತಿ ಹೆಚ್ಚಿನ ಸಂಖ್ಯೆಯಿಲ್ಲಿ ಹಿಂದುಗಳೇ ಇದ್ದಾರೆ. ಒಟ್ಟಿನಲ್ಲಿ ಮೋದಿ ಆಡಳಿತ ಹಿಟ್ಲರಿಗೆ ಹೋಲಿಸಬೇಕಾಗಿದೆ ಎಂದು ಹಮೀದ್ ಸಾಲ್ಮರ ಹೇಳಿದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉಸ್ಮಾನ್ ವಂದಿಸಿದರು.