ಶಿರಾಡಿ: ಅಪಘಾತದಲ್ಲಿ ಮೂವರು ಮೃತಪಟ್ಟ ಪ್ರಕರಣ- ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ ಪ್ರಕಟ

0

ಪುತ್ತುರು: ಆರು ವರ್ಷದ ಹಿಂದೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಪರವರಕೊಟ್ಯ ಎಂಬಲ್ಲಿ ಕಬ್ಬಿಣದ ಪೈಪ್ ಸಮೇತ ಲಾರಿಯೊಂದು ಕಾರಿನ ಮೇಲೆ ಮಗುಚಿ ಬಿದ್ದು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ ವಿಧಿಸಿ ಪುತ್ತೂರು ನ್ಯಾಯಾಲಯ ಆದೇಶಿಸಿದೆ.‌


ಮಂಡ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದ ಡಾ.ಚಂದ್ರಶೇಖರ ಅವರು ತನ್ನ ಪುತ್ರಿ ಸಿ.ನಿಧಿಯನ್ನು ಕಾರ್ಕಳದ ಜ್ಞಾನ ಸುಧಾ ಕಾಲೇಜಿಗೆ ಮೊದಲನೇ ವರ್ಷದ ಪಿಯುಸಿ ವ್ಯಾಸಂಗಕ್ಕೆ ದಾಖಲಿಸಿ 20-12-2019ರಂದು ಪತ್ನಿ ನೀತಾ, ಮಾವ ನಾರಾಯಣ ಪಿ.ಎಮ್., ಅತ್ತೆ ಕಾವೇರಿ, ಪುತ್ರಿ ಸಿ.ನಿಧಿಯೊಂದಿಗೆ ವಾಪಸು ಊರಿಗೆ ಹೋಗುವರೇ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು (ಕೆಎ 11, ಎನ್ 0702)ನಲ್ಲಿ ಹೋಗುತ್ತಿದ್ದವರು ಶಿರಾಡಿ ಗ್ರಾಮದ ಪರವರ ಕೊಟ್ಯ ಎಂಬಲ್ಲಿ ಸಂಜೆ 5.45ಕ್ಕೆ ತಲುಪುತ್ತಿದ್ದಂತೆ ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಬ್ಬಿಣದ ಪೈಪು ಸಾಗಾಟದ ಲಾರಿ(ಎಂಎಚ್ 06, ಎಕ್ಯು 4478) ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ಪೈಪ್ ಸಮೇತ ಕಾರಿನ ಮೇಲೆ ಮಗುಚಿ ಬಿದ್ದಿತ್ತು. ಪರಿಣಾಮ ಕಾರು ಜಖಂಗೊಂಡು ಕಾರು ಚಲಾಯಿಸುತ್ತಿದ್ದ ನಾರಾಯಣ ಪಿ.ಎಮ್, ಕಾರಿನಲ್ಲಿದ್ದ ನೀತಾ, ಸಿ.ನಿಧಿ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನ ಹಿಂದಿನ ಸೀಟಿನ ಎಡಭಾಗದಲ್ಲಿ ಕುಳಿತಿದ್ದ ಡಾ.ಚಂದ್ರಶೇಖರ ಹಾಗೂ ಮುಂಭಾಗದ ಎಡಭಾಗದ ಸೀಟಿನಲ್ಲಿ ಕುಳಿತಿದ್ದ ಕಾವೇರಿ ಅವರು ಗಾಯಗೊಂಡಿದ್ದರು.‌


ಈ ಘಟನೆಗೆ ಸಂಬಂಧಿಸಿ ಡಾ.ಚಂದ್ರಶೇಖರ ಅವರು ನೀಡಿದ ದೂರಿನಂತೆ ಆಗಿನ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ ಅವರು ತನಿಖೆ ನಡೆಸಿ ಪುತ್ತೂರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಪುತ್ತೂರು ಎಸಿಜೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್.ಅವರು ಅಪರಾಧ ಸಾಬೀತಾಗಿರುವುದರಿಂದ ಆರೋಪಿ ಲಾರಿ ಚಾಲಕ ಗಿರೀಶ್ ಕೆ.ಬಿ.ಅವರಿಗೆ 1 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ ಅವರು ಸರ್ಕಾರದ ಪರ ವಾದಿಸಿರುತ್ತಾರೆ.

LEAVE A REPLY

Please enter your comment!
Please enter your name here