ನೆಲ್ಯಾಡಿ: ಲಹರಿ ಸಂಗೀತ ಕಲಾ ಕೇಂದ್ರದ 3ನೇ ವಾರ್ಷಿಕೋತ್ಸವ, ಲಹರಿ ಸಾಧಕ ರತ್ನ ಪ್ರಶಸ್ತಿ ಪ್ರದಾನ

0

ನೆಲ್ಯಾಡಿ: ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ನೆಲ್ಯಾಡಿ ಇದರ 3ನೇ ವಾರ್ಷಿಕೋತ್ಸವ’ ರಾಗಾಂತರಂಗ’ ಹಾಗೂ ಲಹರಿ ಸಾಧಕ ರತ್ನ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏ.27ರಂದು ಸಂಜೆ ನೆಲ್ಯಾಡಿ ದುರ್ಗಾಶ್ರೀ ಟವರ್ಸ್ ಬಳಿ ನಡೆಯಿತು.

ಕೊಣಾಲು ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಮಾಧವ ಸರಳಾಯರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಹಂಕಾರದ ಬದುಕಿನಿಂದ ದೂರವಿರಬೇಕು. ನಾನು, ನನ್ನಿಂದ ಎಂಬ ಜಟಿಲ ಮನೋಭಾವನೆಗಳನ್ನು ಬಿಟ್ಟು ದೇವರ ಭಕ್ತಿಯಲ್ಲಿ ತೊಡಗಿದರೆ ಜೀವನ ಸುಂದರವಾಗುತ್ತದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಳ್ಳಿ ಪ್ರದೇಶದಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಗುರುಗಳಿಗೆ ಹಾಗೂ ಸಹಕರಿಸುತ್ತಿರುವ ಪೋಷಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಾಶ್ರೀ ಟವರ‍್ಸ್‌ನ ಸತೀಶ್ ಕೆ.ಎಸ್ ವಹಿಸಿದ್ದರು. ಅತಿಥಿಗಳಾಗಿದ್ದ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ, ಜೇಸಿಐ ನೆಲ್ಯಾಡಿ ಅಧ್ಯಕ್ಷ ಡಾ.ಸುಧಾಕರ್, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಪ್ರಶಸ್ತಿ ಪ್ರದಾನ, ಸನ್ಮಾನ
ಪುತ್ತೂರು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಅವರಿಗೆ ’ಲಹರಿ ಸಾಧಕರತ್ನ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ನೆಲ್ಯಾಡಿ ಆದರ್ಶ ಶಾಮಿಯಾನದ ಮಾಲಕ ದಿನಕರ ಕೆ.ಎಚ್, ಬೆಳ್ಳಾರೆ ಕಲಾ ಮಂದಿರದ ನಿರ್ದೇಶಕ ಪ್ರಮೋದ್ ಕುಮಾರ್, ನೆಲ್ಯಾಡಿ ಜ್ಯೋತಿರ್ವೈದ್ಯ ಹೋಮಿಯೋಪತಿ ಚಿಕಿತ್ಸಾಲಯದ ಡಾ. ಅನೀಶ್ ಕುಮಾರ್ ಸಾದಂಗಾಯರವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಲಹರಿ ಕಲಾ ಕೇಂದ್ರದ ಸಂಗೀತ ಗುರು ವಿಶ್ವನಾಥ ಶೆಟ್ಟಿ ಕೆ. ಸ್ವಾಗತಿಸಿದರು. ಮಂಗಳೂರು ವಿ.ವಿ. ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಸಿ.ಎಚ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ’ವಿ.ಕೆ ಜೋಡಿ ತಾರೆ’ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಅವರ ನಿರೂಪಣೆಯಲ್ಲಿ ಕಲಾ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಹಾಗೂ ನೃತ್ಯ ಪ್ರದರ್ಶನಗಳು ನಡೆಯಿತು.

LEAVE A REPLY

Please enter your comment!
Please enter your name here