ನವೋದಯ ಗ್ರಾಮವಿಕಾಸ ಟ್ರಸ್ಟ್, ಪಾಣಾಜೆ ಪ್ರಾ.ಕೃ.ಪ.ಸಹಕಾರ ಸಂಘದಿಂದ  ಸಮವಸ್ತ್ರ ವಿತರಣೆ

0

ಪಾಣಾಜೆ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಹಾಗೂ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 6 ನೇ ವರ್ಷದ ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ ಇತ್ತೀಚೆಗೆ ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿ, ಸಮವಸ್ತ್ರ ವಿತರಿಸಿ ಮಾತನಾಡಿದ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರೂ, ಸಂಘದ ನಿರ್ದೇಶಕರಾದ  ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ರವರು ಮಾತನಾಡಿ ‘ಸಹಕಾರಿ ಸಂಘಗಳ ಸಂಘಟನಾ ದೃಷ್ಟಿಯಿಂದ ನವೋದಯ ಸ್ವಸಹಾಯ ಸಂಘಗಳು ಉತ್ತಮ ಕೆಲಸ ಮಾಡುತ್ತಿವೆ. ಸಹಕಾರ ಸಂಘದತ್ತ ಜನರನ್ನು ಕರೆಸಿಕೊಳ್ಳುವಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ತರವಾದುದು’ ಎಂದರು.

ಸಂಘದ  ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು ಮಾತನಾಡಿ ‘ಸ್ವಸಹಾಯ ಸಂಘಗಳಿಂದಾಗಿ‌ ವಿಶೇಷವಾಗಿ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ಸಹಕಾರಿಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಮಾತ್ರವಲ್ಲದೇ ಸಮಾಜದ ಎಲ್ಲಾ ರೀತಿಯ ಜನರಿಗೂ ಸಹಕಾರಿ ಸಂಘ ಎಂಬುದನ್ನು ನವೋದಯ ಗುಂಪುಗಳ ಮೂಲಕ ತೋರಿಸಿಕೊಡುವ ಕೆಲಸವಾಗಿದೆ’ ಎಂದರು.

ಪುತ್ತೂರು ತಾಲೂಕು ನವೋದಯ ಸ್ವಸಹಾಯ ಸಂಘದ ಮೇಲ್ವಿಚಾರಕ ಚಂದ್ರಶೇಖರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ‘ಅವಿಭಜಿತ ಉಡುಪಿ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಆರಂಭಗೊಂಡ ಸ್ವಸಹಾಯ ಸಂಘಗಳು ಇಂದು 8 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿವೆ. ಮೇ 10 ರಂದು ಮಂಗಳೂರಿನ ಬಂಗ್ರ ಕೂಳೂರು‌ ಗೋಲ್ಡ್ ಫಿಂಚ್ ಸಿಟಿಯಲ್ಲಿ ಇದರ ರಜತ ಸಂಭ್ರಮ ನಡೆಯಲಿದೆ’ ಎಂದರು.

ಸಂಘದ ನಿರ್ದೇಶಕರಾದ ಸದಾಶಿವ ರೈ ಸೂರಂಬೈಲು, ರಾಧಾಕೃಷ್ಣ ರೈ ಪಟ್ಟೆ, ಹರೀಶ್ ಪೂಜಾರಿ ನೆಲ್ಲಿತ್ತಮಾರ್, ಪುಷ್ಪಾವತಿ ಅಪಿನಿಮೂಲೆ, ಚಂದ್ರಕಲಾ ಕೊಪ್ಪಳ,  ಒಡ್ಯ ವಲಯ ಒಕ್ಕೂಟ ಗೌರವಾಧ್ಯಕ್ಷ ಶಂಕರ್ ರೈ, ಪ್ರೇರಕರಾದ ಸುಮಿತ್ರ, ತುಳಸಿ ಮತ್ತಿತರರು ಉಪಸ್ಥಿತರಿದ್ದರು.

ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಸಿಇಒ ಹರೀಶ್ ಕುಮಾರ್ ಸ್ವಾಗತಿಸಿ, ಸಿಬಂದಿ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರತ್ನಾವತಿ ಪ್ರಾರ್ಥಿಸಿದರು. ಸಂಘದ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here