ಚಿಕ್ಕಪುತ್ತೂರು ಶ್ರೀ ವೀರಭದ್ರ ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ

0

ಪುತ್ತೂರು: ಚಿಕ್ಕಪುತ್ತೂರು ಶ್ರೀ ವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪೂಜೆಯ ಪ್ರಯುಕ್ತ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಮೆರವಣಿಗೆ ಎ.29ರಂದು ನಡೆಯಿತು.


ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ನೆರವೇರಿಸಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನ ಕಾಯಿ ಒಡೆದು ಚಾಲನೆ ನೀಡಿ ಮಾತನಾಡಿ, ವೀರಭದ್ರ ದೇವಸ್ಥಾನ ಶ್ರೀಮಹಾಲಿಂಗೇಶ್ವರ ದೇವಾಲಯದ ಹತ್ತಿರದಲ್ಲಿದೆ. ಅಲ್ಲಿನ ಬ್ರಹ್ಮಕಲಶ ಕಾರ್ಯಕ್ರಮ ಶ್ರೀಮಹಾಲಿಂಗೇಶ್ವರ ದೇವಾಲಯದ ಕಾರ್ಯಕ್ರಮವಿದ್ದಂತೆ. ಇದಕ್ಕೆ ದೇವಾಲಯದ ಹಾಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಬೆಂಬಲ ಇದೆ. ಶ್ರೀಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ಮಾಡಲು ನಿರ್ಧರಿಸಿದ್ದೆವು. ವೀರಭದ್ರ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮ ನಡೆಯುವುದರಿಂದ ಸೀಯಾಳಾಭಿಷೇಕ ಕಾರ್ಯಕ್ರಮ ಮುಂದೂಡಿದ್ದೇವೆ. ಅಲ್ಲಿನ ಬ್ರಹ್ಮಕಲಶ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ನಡೆಯಲಿ ಎಂದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವೀರಭದ್ರ ಮತ್ತು ಆದಿಮಾಯೆ ದೇವರ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇಂದುಶೇಖರ್ ಪಿ.ಬಿ. ಸ್ವಾಗತಿಸಿ ವಂದಿಸಿದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ., ವಿನಯ ಸುವರ್ಣ, ವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಜೀರ್ಣೊದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎನ್.ಸುಭಾಷ್‌ಚಂದ್ರ, ಬ್ರಹ್ಮಕಲಶೋತ್ಸವ ಸಮಿತಿ ಪ್ರೇಮ್ ಕುಮಾರ್ ಸೂತ್ರಬೆಟ್ಟು ಹಾಗೂ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಉಗ್ರಾಣ ಮುಹೂರ್ತ:
ಹಸಿರುವಾಣಿ ಮೆರವಣಿಗೆ ಶ್ರೀಮಹಾಲಿಂಗೇಶ್ವರ ದೇವಾಲಯದಿಂದ ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯ ಮೂಲಕ ಶ್ರೀವೀರಭದ್ರ ಮತ್ತು ಆದಿಮಾಯೆ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದಲ್ಲಿ ವೈದಿಕರಾದ ಪ್ರಶಾಂತ್ ಭಟ್ ಉಗ್ರಾಣ ಮುಹೂರ್ತ ನೆರವೇರಿಸಿ ಶುಭಹಾರೈಸಿದರು.

ನಾಳೆ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 8 ಗಂಟೆಗೆ ವೃಷಭ ಲಗ್ನ ಸುಮೂರ್ಹತದಲ್ಲಿ ಶ್ರೀವೀರಭದ್ರ, ಆದಿಮಾಯೆ ದೇವರ ಹಾಗೂ ಕಲ್ಲುರ್ಟಿ ದೈವದ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here