ಪುತ್ತೂರು: ಈಶ್ವರಮಂಗಲ ಮೇನಾಲ ಕೊಂಬೆಟ್ಟು ಅಮ್ಮಂಕಲ್ಲುವಿನಲ್ಲಿ ಎ.28ರಂದು ತೆಂಕುತಿಟ್ಟಿನ ಹೆಸರಾಂತ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಹಿರಿಯ ಯಕ್ಷಗಾನ ಕಲಾವಿದ ನಾಟ್ಯ ಮಯೂರಿ ಬಿರುದಾಂಕಿತ ಕೊಕ್ಕಡ ಈಶ್ವರ ಭಟ್‌ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಮ್ಮೆಂಕಲ್ಲು ಮನೆಯ ಕೃಷ್ಣಪ್ರಸಾದ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮಗೆ ವ್ಯವಹಾರದಲ್ಲಿ ಯಶಸ್ಸಾದ ಕಾರಣ ಸಂಕಲ್ಪದಂತೆ ಶ್ರಿದೇವಿ ಮಹಾತ್ಮೆ ಯಕ್ಷಗಾನ ನಡೆಸುತ್ತಿದ್ದೇವೆ. ಅದರೊಂದಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಮ್ಮ ಎರಡು ಅಜ್ಜಂದಿರು ಯಕ್ಷಗಾನ ಮೇಳದಲ್ಲಿದ್ದರು. ಪೆರುವೋಡಿ ನಾರಾಯಣ ಭಟ್ ಹಾಗೂ ಕೊಕ್ಕಡ ಈಶ್ವರ ಭಟ್‌ರವರು. ಕೊಕ್ಕಡ ಈಶ್ವರ ಭಟ್‌ರವರು ನಮ್ಮ ಅಮ್ಮನ ಸೋದರಮಾವ. ನಾವು ಚಿಕ್ಕವರಿದ್ದಾಗಲೇ ಅವರ ಯಕ್ಷಗಾನ ನೋಡಿಕೊಂಡು ಬೆಳೆದವರು. ಈಶ್ವರ ಭಟ್‌ರವರು ಹಂತ ಹಂತವಾಗಿ ಯಕ್ಷಗಾನದಲ್ಲಿ ಬೆಳೆದರು. ಅವರಿಗೆ ಪಾಪಣ್ಣ ವಿಜಯ ಗುಣಸುಂದರಿ ಪ್ರಸಂಗ ಹೆಸರು ತಂದುಕೊಟ್ಟಿತ್ತು. ಬಳಿಕ ಅವರು ಬಡಗು ತಿಟ್ಟಿನಲ್ಲಿ ಕೂಡ ಹೆಸರು ಮಾಡಿದ್ದರು. ಎಲ್ಲಾ ಸ್ತ್ರೀ ಪಾತ್ರಗಳಲ್ಲಿ ಖ್ಯಾತಿ ಗಳಿಸಿದ ಇವರು 45 ವರ್ಷ ರಂಗದಲ್ಲಿ ಮಿಂಚಿದ್ದರು ಎಂದ ಅವರು. ಯಶಸ್ಸಿನ ಹಿಂದೆ ಹೋಗಬಾರದು. ನಮ್ಮ ಕರ್ತವ್ಯ ನಾವು ಮಾಡಿದರೆ ಯಶಸ್ಸು ಅದರ ಪಾಡಿಗೆ ಬರುತ್ತದೆ ಎಂಬ ಮಾತಿನಂತೆ ಯಕ್ಷಗಾನದಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಬದುಕು ನಮಗೆ ಅನುಕರಿಣೀಯ ಎಂದರು.
ಸನ್ಮಾನ ಸ್ವೀಕರಿಸಿದ ಕೊಕ್ಕಡ ಈಶ್ವರ ಭಟ್ ಮಾತನಾಡಿ, ವ್ಯಕ್ತಿಗೆ ಆರೋಗ್ಯವಿದ್ದಾಗ ಮಾತ್ರ ಮನುಷ್ಯನಾಗಿರುತ್ತಾನೆ. ತಾಯಿ ನನಗೆ ದೇಹ ಕೊಟ್ಟಿದ್ದಾರೆ. ನನ್ನ ಅಕ್ಕ ಜೀವನಕ್ಕೆ ದಾರಿ ತೋರಿಸಿದ್ದಾರೆ. ಯಕ್ಷಗಾನ ರಂಗ ನನ್ನ ಜೀವನವನ್ನು ರೂಪಿಸಿದೆ ಎಂದು ಹೇಳಿ ಸನ್ಮಾನಿಸಿದ ಅಮ್ಮಂಕಲು ಸುಬ್ರಹ್ಮಣ್ಯ ಭಟ್ ಮನೆಯವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತಿ ಸನ್ಮಾನ ಪತ್ರ ವಾಚಿಸಿದರು. ಕೃಷ್ಣಪ್ರಸಾದ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಶ್ರೀದೇವಿಮಹಾತ್ಮೆ ಯಕ್ಷಗಾನ ನಡೆಯಿತು. ಸಂಜೆ ಉಪಾಹಾರ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಅಮ್ಮಂಕಲ್ಲು ಮನೆಯ ಸುಬ್ರಹ್ಮಣ್ಯ ಭಟ್ ಮತ್ತು ಸುಮಂಗಳ ದಂಪತಿ, ಉಷಾ ಸರಸ್ವತಿ ರವರು ಉಪಸ್ಥಿತರಿದ್ದರು.

ಕೊಕ್ಕಡ ಈಶ್ವರ ಭಟ್‌ರವರಿಗೆ ಸನ್ಮಾನ
ನಾಟ್ಯ ಮಯೂರಿ ಖ್ಯಾತಿಯ ಹಿರಿಯ ಯಕ್ಷಗಾನ ಸ್ತ್ರೀಪಾತ್ರ ಕಲಾವಿದ ಕೊಕ್ಕಡ ಈಶ್ವರ ಭಟ್ ದಂಪತಿಯನ್ನು ಅಮ್ಮಂಕಲ್ಲು ಮನೆಯ ಸುಬ್ರಹ್ಮಣ್ಯ ಭಟ್ ಮತ್ತು ಸುಮಂಗಳ ದಂಪತಿಯ ಪರವಾಗಿ ಅವರ ಪುತ್ರ ರವಿಶಂಕರ್ ಮತ್ತು ಭಾರತಿ ದಂಪತಿಯವರು ಶಾಲು, ಸೀರೆ, ಫಲಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.