ಪುತ್ತೂರಿನಿಂದ ಸಾವಿರಾರು ಮಂದಿ ಭಾಗಿಯಾಗುವ ಅವಕಾಶ – ಉಚಿತ ಬಸ್ ವ್ಯವಸ್ಥೆ
ಪುತ್ತೂರು: ಆಧುನಿಕ ಸಮಾಜದಲ್ಲಿ ಹಿಂದೂ ಧರ್ಮದ ಮೇಲೆ ನಿರಂತರ ಹಲ್ಲೆಯಾಗುತ್ತಿರುವುದು ಕಂಡುಬರುತ್ತಿದೆ. ಒಂದೆಡೆಯಲ್ಲಿ ಮತಾಂತರ, ಮತ್ತೊಂದೆಡೆ ಲವ್ ಜಿಹಾದ್ನಂತಹ ದುಷ್ಕೃತ್ಯಗಳು, ಹಿಂದೂ ಆಚರಣೆಗಳ ಮೇಲಿನ ದಾಳಿ, ಹಿಂದೂ ಸಂಪ್ರದಾಯಗಳ ಮೇಲೆ ಪ್ರಶ್ನಾವಳಿ… ಹೀಗೆ ನಾನಾ ಬಗೆಯ ಹಲ್ಲೆಗಳು ಹಿಂದೂ ಧರ್ಮದ ಮೇಲೆ ನಡೆಯುತ್ತಲೇ ಇವೆ.
ಇವೆಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ ನೀಡುವ ಸಮಯ ಬಂದೊದಗುತ್ತಿದೆ. ಒಂದು ಕಾಲದಲ್ಲಿ ಯಾವ ಆದಿ ಶಂಕರರು ಹಿಂದೂ ಸಮಾಜದ ಒಗ್ಗೂಡಿಸುವಿಕೆಗಾಗಿ ದೇಶದ ನಾಲ್ಕು ಭಾಗಗಳಲ್ಲಿ ನಾಲ್ಕು ಧರ್ಮಪೀಠಗಳನ್ನು ಸ್ಥಾಪಿಸಿ, ಧರ್ಮಸಂಸ್ಥಾಪನೆಯ ಕಾರ್ಯ ನಡೆಸಿಕೊಟ್ಟರೋ, ಅದೇ ಶ್ರೀ ಶಂಕರಾಚಾರ್ಯ ಸ್ಥಾಪಿತ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಈ ಕಾಲದಲ್ಲಿ ಉಂಟಾಗುತ್ತಿರುವ ಧರ್ಮಗ್ಲಾನಿಯನ್ನು ತಡೆಯುವುದಕ್ಕಾಗಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇಂದಿನ ಹಿಂದೂ ಧರ್ಮದ ಮೇಲಿನ ದಾಳಿಗೆ ಪರಕೀಯರನ್ನು ದೂಷಿಸುತ್ತಾ ಕಾಲಕಳೆಯುವ ಬದಲು ಹಿಂದೂ ಸಮಾಜವೇ ಒಳಗಿಂದೊಳಗೆ ದೃಢವಾಗುತ್ತಾ ಸಾಗಬೇಕೆಂಬ ದೂರದೃಷ್ಟಿಯನ್ನು ಶ್ರೀ ಗುರುಗಳು ನೀಡಬಯಸಿದ್ದಾರೆ. ಅದಕ್ಕಾಗಿಯೇ ದೇಶದಾದ್ಯಂತ ನಮ್ಮ ಮಕ್ಕಳಿಗೆ ಹಿಂದೂ ಧರ್ಮಶಿಕ್ಷಣ ಒದಗಿಸುವ ನೆಲೆಯಲ್ಲಿ ಗುರುಗಳು ಅಪ್ಪಣೆಕೊಡಿಸಿದ್ದಾರೆ.
ಈ ನೆಲೆಯಲ್ಲಿ ಇಡಿಯ ದೇಶದಲ್ಲಿ ಮೊತ್ತಮೊದಲ ಬಾರಿಗೆ ಪುತ್ತೂರಿನಲ್ಲಿ ಧರ್ಮ ಶಿಕ್ಷಣವನ್ನು ಜಾರಿಗೊಳಿಸುವ ನೆಲೆಯಲ್ಲಿ ಶ್ರೀ ಗುರುಗಳು ಯೋಜಿಸಿದ ಪರಿಣಾಮವಾಗಿ ಪುತ್ತೂರಿನ ಅಲ್ಲಲ್ಲಿ ಹಿಂದೂ ಧರ್ಮಶಿಕ್ಷಣ ನೀಡುವ ಬಗೆಗೆ ಸಭೆ ನಡೆಸಿ, ಚರ್ಚಿಸಿ ಅಭಿಪ್ರಾಯಿಸುವಂತೆ ಶ್ರೀ ಗುರುಗಳ ಅಪ್ಪಣೆಯಾಗಿತ್ತು. ಆ ಪ್ರಯುಕ್ತ 12.೦1.2024ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಶ್ರೀ ನಟರಾಜ ವೇದಿಕೆಯಲ್ಲಿ ಹಿಂದೂ ಧರ್ಮದ ವಿವಿಧ ಸಮಾಜಗಳ ಸಭೆ ನಡೆದು, ಪ್ರತಿಯೊಂದು ಊರಿನಲ್ಲೂ ಗ್ರಾಮ ಸಮಿತಿ ನಿರ್ಮಾಣ ಹಾಗೂ ಸಂಚಾಲಕರ ನೇಮಕದ ಬಗೆಗೆ ನಿರ್ಣಯವಾಗಿತ್ತು. ಮುಂದಿನ ದಿನಗಳಲ್ಲೆ ಆಗಾಗ ಸಭೆ ನಡೆದು ಇದೀಗ ಸುಮಾರು ಮೂವತ್ತಕ್ಕಿಂತಲೂ ಅಧಿಕ ಕಡೆಗಳಲ್ಲಿ ಹಿಂದೂ ಧರ್ಮ ಶಿಕ್ಷಣ – ಗ್ರಾಮ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ.
ಈ ಗ್ರಾಮ ಸಮಿತಿಗಳ ರಚನೆಗಳು ಒಂದೆಡೆಯಲ್ಲಿ ಭರದಿಂದ ಸಾಗುತ್ತಿರುವಾಗಲೇ ಈ ಗ್ರಾಮಸಮಿತಿಗಳನ್ನು ನಿರ್ವಹಿಸುವುದಕ್ಕಾಗಿ ದಿನಾಂಕ 20.೦4.2025ರಂದು ಪುತ್ತೂರಿನ ಸ್ವಾಮಿ ಕಲಾ ಮಂದಿರದಲ್ಲಿ ತಾಲೂಕು ಸಮಿತಿ ಉದ್ಘಾಟನೆಗೊಂಡಿರುತ್ತದೆ.
ಇನ್ನು, ಧರ್ಮ ಶಿಕ್ಷಣದ ತರಗತಿಗಳು ಉದ್ಘಾಟನೆಗೊಳ್ಳುವುದಷ್ಟೇ ಬಾಕಿಯಿದ್ದು, ಉದ್ದೇಶಿತ ಧರ್ಮ ಶಿಕ್ಷಣದ ತರಗತಿಗಳ ಉದ್ಘಾಟನೆಯನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಖುದ್ದಾಗಿ ತಮ್ಮ ಅಮೃತಹಸ್ತದಿಂದ ಮೇ 5, 2025ರಂದು ಅಪರಾಹ್ನ 3 ಗಂಟೆಗೆ ಶೃಂಗೇರಿಯಲ್ಲಿ ನಡೆಸಿಕೊಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಪುತ್ತೂರು – ಕಡಬ ಭಾಗಗಳಿಂದ ಗ್ರಾಮ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮಾತ್ರವಲ್ಲದೆ ಸನಾತನ ಧರ್ಮದ ಎಲ್ಲಾ ಧರ್ಮಾಭಿಮಾನಿ ಬಂಧುಗಳಿಗೂ ಅವಕಾಶವಿದೆ.
ಮೇ.5, 2025ರಂದು ಬೆಳಿಗ್ಗೆ ಹತ್ತು ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಸಾವಿರಾರು ಮಂದಿ ಶೃಂಗೇರಿಯ ಭಕ್ತರು, ವಿವಿಧ ಭಾಗಗಳ ಭಜನಾ ಮಂಡಳಿಗಳ ಸದಸ್ಯರು, ಧಾರ್ಮಿಕ ಸಂಘಟನೆಗಳ ಸದಸ್ಯರು, ಧರ್ಮಶಿಕ್ಷಣದ ಆಸಕ್ತರು, ಧರ್ಮಾಭಿಮಾನಿಗಳನ್ನು ತಾಲೂಕು ಧರ್ಮ ಶಿಕ್ಷಣ ಸಮಿತಿಯ ವತಿಯಿಂದ ಶೃಂಗೇರಿಗೆ ಕರೆದೊಯ್ಯಲಾಗುತ್ತದೆ. ಆ ದಿನ ಶೃಂಗೇರಿಗೆ ಆಗಮಿಸುವವರೆಲ್ಲರಿಗೂ ಉಚಿತ ಊಟೋಪಚಾರ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಶೃಂಗೇರಿ ಜಗದ್ಗುರುಗಳಿಂದ ಉದ್ಘಾಟನೆಗೊಳ್ಳಲಿರುವ ಈ ವಿಶೇಷ ಕಾರ್ಯಕ್ರದಲ್ಲಿ ಭಾಗಿಯಾಗುವುದಲ್ಲದೆ ಜಗದ್ಗುರುಗಳಿಂದ ಮಂತ್ರಾಕ್ಷತೆ ಪಡೆದು ಪುನೀತರಾಗುವ ಅವಕಾಶ ಎಲ್ಲಾ ಭಕ್ತರಿಗೆ ದೊರಕಲಿದೆ.
ಮೇ.5ರಂದು ಶೃಂಗೇರಿಗೆ ಬರಲಿಚ್ಚಿಸುವ ಎಲ್ಲಾ ಭಕ್ತಜನರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು, ಆಸಕ್ತರು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಸಂಚಾಲಕರಾದ ಶ್ರೀ ಸುಬ್ರಮಣ್ಯ ನಟ್ಟೋಜ (9448835488) ಅಥವ ಧರ್ಮ ಶಿಕ್ಷಣ ಸಮಿತಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ದಿನೇಶ್ ಜೈನ್ (9886858466) ಇವರಿಗೆ ಮೇ. 2ರ ಒಳಗಾಗಿ ಕರೆ ಮಾಡಿ ತಮ್ಮ ಆಗಮನವನ್ನು ಖಚಿತಪಡಿಸುವಂತೆ ಕೋರಲಾಗಿದೆ.
ಪಠ್ಯಕ್ರಮ: ಧರ್ಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶೃಂಗೇರಿಯಲ್ಲೇ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. ಸದ್ಯದಲ್ಲೇ ಅದು ಗುರುಗಳ ಅಂತಿಮ ಮುದ್ರೆಯೊಂದಿಗೆ ಅದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಮೂಲಕ ಪ್ರತಿ ಗ್ರಾಮ ಸಮಿತಿಗಳಿಗೆ ತಲುಪಲಿದೆ. ಆಯಾ ಗ್ರಾಮ ಸಮಿತಿಯ ವತಿಯಿಂದ ಧರ್ಮ ಶಿಕ್ಷಣಕ್ಕೆ ಶಿಕ್ಷಕರನ್ನೂ ಗುರುತಿಸಲಾಗುತ್ತಿದೆ. ಹಾಗೆ ಗುರುತಿಸಿದ ಎಲ್ಲಾ ಶಿಕ್ಷಕರಿಗೆ ಶೃಂಗೇರಿ ಮಠದಿಂದಲೇ ಕಾರ್ಯಾಗಾರ ನಡೆಸಿ ಧರ್ಮ ಶಿಕ್ಷಣವನ್ನು ನಡೆಸುವ ಬಗೆಗೆ ಹೆಚ್ಚಿನ ತಜ್ಞತೆಯನ್ನು ಒದಗಿಸಿಕೊಡಲಾಗುತ್ತದೆ.
Home ಇತ್ತೀಚಿನ ಸುದ್ದಿಗಳು ಮೇ.5ರಂದು ಶೃಂಗೇರಿಯಲ್ಲಿ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ...