ಪುತ್ತೂರು: ನನ್ನ ಹೆಂಡ್ತಿಯನ್ನು ಮಗ ಕೊಂದು ಬಿಟ್ಟಿದ್ದಾನೆ ಎಂದುಕೊಂಡು ಬೆಳಿಯೂರುಕಟ್ಟೆಯ ಅಜಕ್ಕಳ ಎಂಬಲ್ಲಿನ ವ್ಯಕ್ತಿಯೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆ ವ್ಯಕ್ತಿಯ ನೆರೆಕರೆಯವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆಯೂ ಆ ವ್ಯಕ್ತಿ ತನ್ನ ಪತ್ನಿಯ ಕೊಲೆಯಾಗಿದೆ, ಮಗನೇ ಕೊಲೆ ಮಾಡಿದ್ದಾನೆ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಕ್ತಿಯ ಮನೆಗೆ ಧಾವಿಸಿದ್ದಾರೆ. ಆದರೆ ಮನೆಗೆ ಬಂದ ಪೊಲೀಸರು ಮಾತ್ರ ಒಂದು ಕ್ಷಣ ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಿದೆ. ಇಷ್ಟಕ್ಕೂ ಅಲ್ಲಿ ನಡೆದ ಘಟನೆಯಾದರೂ ಏನು? ನಿಜವಾಗಿ ಅಲ್ಲಿ ಕೊಲೆಯಾಗಿದೆಯಾ? ಈ ಸ್ಟೋರಿ ಓದಿ…
ಕಳೆದ ಮಂಗಳವಾರ ಮುಂಜಾನೆ ವೇಳೆಗೆ ಬೆಳಿಯೂರುಕಟ್ಟೆಯ ಅಜಕ್ಕಳ ಎಂಬಲ್ಲಿನ ವ್ಯಕ್ತಿಯೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಆಗಮಿಸಿದ್ದಾರೆ. ಠಾಣೆಗೆ ಬಂದ ವ್ಯಕ್ತಿ ನನ್ನ ಹೆಂಡ್ತಿಯನ್ನು ಸ್ವತಃ ನನ್ನ ಮಗನೆ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಪೊಲೀಸರು ವ್ಯಕ್ತಿಯನ್ನು ವಿವಿಧ ರೀತಿಯಲ್ಲಿ ವಿಚಾರಿಸಿದ್ದಾರೆ. ಆದರೆ ವ್ಯಕ್ತಿಯೂ ನನ್ನ ಮಗನೇ ನನ್ನ ಹೆಂಡ್ತಿಯನ್ನು ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಆ ವ್ಯಕ್ತಿಯ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಕ್ಕದ ಮನೆಯವರು ಕೂಡ ಆ ವ್ಯಕ್ತಿ ನಮ್ಮ ಮನೆಗೆ ಬಂದಿದ್ದರು ನನ್ನ ಹೆಂಡ್ತಿಯನ್ನು ರಾತ್ರಿ ವೇಳೆ ಮಗ ಕೊಲೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ. ತಕ್ಷಣವೇ ವ್ಯಕ್ತಿಯ ಮನೆಯ ದಾರಿ ಹಿಡಿದ ಪೊಲೀಸರು ಮನೆಗೆ ಆಗಮಿಸಿದ್ದಾರೆ. ಮನೆಗೆ ಬಂದ ಪೊಲೀಸರಿಗೆ ಮಾತ್ರ ಅಲ್ಲಿ ಅಚ್ಚರಿ ಕಾದಿತ್ತು. ಕೊಲೆಯಾಗಿದ್ದಾಳೆ ಎಂದು ಹೇಳಿದ ವ್ಯಕ್ತಿಯ ಹೆಂಡ್ತಿಯೇ ಮನೆಯ ಬಾಗಿಲು ತೆಗೆದು ಪೊಲೀಸರನ್ನು ಸ್ವಾಗತಿಸಿದ್ದಾಳೆ. ಇದೇನಪ್ಪಾ ಕೊಲೆಯಾದವಳು ಹೇಗೆ ಬದುಕಿ ಬಂದಿದ್ದಾಳೆ ಎಂದುಕೊಂಡ ಪೊಲೀಸರು ಈ ಬಗ್ಗೆ ತನಿಖೆಗೆ ಶುರುವಿಟ್ಟುಕೊಂಡಿದ್ದಾರೆ. ಆಗ ನಿಜ ವಿಷಯ ಬೆಳಕಿಗೆ ಬಂದಿದೆ.
ಕೊಲೆಯಾಗಿದ್ದಾಳೆ ಎಂದು ಹೇಳಿದ ವ್ಯಕ್ತಿಯ ಪತ್ನಿಯನ್ನು ಪೊಲೀಸರು ವಿಚಾರಿಸಿದಾಗ ಇಲ್ಲಿ ಯಾವುದೇ ಕೊಲೆಯಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಆ ವೇಳೆಗಾಗಲೇ ಮನೆಗೆ ಬಂದ ವ್ಯಕ್ತಿಯ ಪುತ್ರನನ್ನು ವಿಚಾರಿಸಿದಾಗ ನನ್ನ ತಂದೆಗೆ ಸೋಮವಾರ ರಾತ್ರಿ ಕನಸೊಂದು ಬಿದ್ದಿದ್ದು ಆ ಕನಸೇ ನಿಜವಾದ ತಿಳಿದು ತಂದೆಯವರು ಈ ರೀತಿ ಮಾಡಿದ್ದಾರೆ ದಯವಿಟ್ಟು ಕ್ಷಮಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಪೊಲೀಸರಿಗೂ ಪರಿಸ್ಥಿತಿಯ ಅರಿವಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ವೃದ್ಧ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ವೇಳೆ ತನಗೆ ಬಿದ್ದ ಕೊಲೆಯ ಕನಸೇ ನಿಜವೆಂದು ತಿಳಿದುಕೊಂಡು ಠಾಣೆಗೆ ಕೊಲೆ ಕೇಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಈ ವಿಚಿತ್ರ ಪ್ರಕರಣ ಮಾತ್ರ ಬೆಳಿಯೂರುಕಟ್ಟೆ ಸುತ್ತಮುತ್ತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
Home ಇತ್ತೀಚಿನ ಸುದ್ದಿಗಳು ಹೆಂಡ್ತಿಯನ್ನು ಮಗ ಕೊಲೆ ಮಾಡಿಬಿಟ್ಟ ಎಂದು ದೂರು ಕೊಟ್ಟ ವ್ಯಕ್ತಿ… -ಪೊಲೀಸರು ಮನೆಗೆ ಬಂದಾಗ ಕೊಲೆಯಾದವಳೇ...