ಶುಭ ಸಮಾರಂಭಗಳ ಭರಾಟೆ- ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಜಾಮ್ – ಅರ್ಧ ಕಿ.ಮೀ. ಕ್ರಮಿಸಲು ಅರ್ಧಗಂಟೆ ತಗೊಂಡ ವಾಹನಗಳು

0

ಉಪ್ಪಿನಂಗಡಿ: ಒಂದೆಡೆ ಮದುವೆ, ಗೃಹ ಪ್ರವೇಶಗಳಂತಹ ಸಮಾರಂಭಗಳು, ಇನ್ನೊಂದೆಡೆ ಸರಕಾರಿ ರಜಾ ದಿನ, ಹೆದ್ದಾರಿಗಳಲ್ಲಿ ವಾಹನಗಳ ಭರಾಟೆ, ಚತುಷ್ಪಥ ಹೆದ್ದಾರಿ ಕಾಮಗಾರಿ ಹೀಗೆ ವಿವಿಧ ಕಾರಣಗಳಿಂದ ಉಪ್ಪಿನಂಗಡಿಯಲ್ಲಿ ಮೇ.1ರಂದು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರನ್ನು ಹೈರಾಣಾಗಿಸಿತ್ತು.

ಮುಖ್ಯವಾಗಿ ಮೊದಲಿಗೆ ಹೆದ್ದಾರಿಯ ಅಂಡರ್‌ಪಾಸ್‌ನಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಕಡೆಗೆ ತಿರುವು ಪಡೆಯುವ ಹಾಗೂ ಹೆದ್ದಾರಿಯ ಮತ್ತೊಂದು ಬದಿಯಿಂದ ನೇರವಾಗಿ ಹಾಸನದತ್ತ ಸಾಗುವ ಹಾಗೂ ಬಸ್ ನಿಲ್ದಾಣ ಕಡೆಯಿಂದ ಹೆದ್ದಾರಿಯ ಮತ್ತೊಂದು ಕಡೆಗೆ ಅಂಡರ್‌ಪಾಸ್ ಮೂಲಕ ಹಾದು ಹೋಗುವ ಭರಾಟೆ ಹೆಚ್ಚಾದಾಗ ಅಲ್ಲಿ ಟ್ರಾಫಿಕ್ ಜಾಮ್ ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಕಾಣಿಸಿಕೊಂಡಿತು. ಇದು ಬೆಳೆದುಕೊಂಡೇ ಹೋಗಿದ್ದು ಮಧ್ಯಾಹ್ನ 12 ಗಂಟೆಯಾಗುವಾಗ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ, ಪುತ್ತೂರು ರಸ್ತೆಯಲ್ಲಿ 34 ನೆಕ್ಕಿಲಾಡಿಯ ಯುನಿಕ್ ಕಾಂಪೌಂಡ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಸನ ಕಡೆ ಸಾಗುವ ರಸ್ತೆಯಲ್ಲಿ ಹಳೆಗೇಟುವರೆಗೆ ಹಾಗೂ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಬೊಳುವಾರುವರೆಗೆ ಸಾಲು ಸಾಲು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡವು. ಇನ್ನೊಂದೆಡೆ ಪೇಟೆಯೊಳಗಿನ ರಸ್ತೆಯಲ್ಲಿಯೂ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿತ್ತು. ಟ್ರಾಫಿಕ್ ಜಾಮ್‌ನಿಂದ ತಾವು ಮುಂದೆ ಸಾಗೋಣ ಎಂದು ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಕೆಲವರು ನುಗ್ಗಿಸಿದ್ದರಿಂದ ಇನ್ನಷ್ಟು ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಮಂಗಳೂರು ಹಾಗೂ ಪುತ್ತೂರಿನತ್ತ ಹೊರಟ ಬಸ್‌ಗಳು 34 ನೆಕ್ಕಿಲಾಡಿ ಬಳಿಯ ಸೇತುವೆ ದಾಟಲು ಸುಮಾರು ಅರ್ಧಗಂಟೆಯಷ್ಟು ಹೊತ್ತು ತೆಗೆದುಕೊಳ್ಳಬೇಕಾಯಿತು.

ಪೊಲೀಸರ ಹರಸಾಹಸ: ಒಂದೆಡೆ ಪೊಲೀಸರು, ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ತರಲು ಹರಸಾಹಸ ಪಡಬೇಕಾಯಿತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಟ್ರಾಫಿಕ್ ಜಾಮ್‌ನಿಂದ ಪೊಲೀಸ್ ವಾಹನಗಳಿಗೂ ಸಾಧ್ಯವಾಗದೇ ಇದ್ದುದ್ದರಿಂದ ಅವರು ನಡೆದುಕೊಂಡೇ ಆ ಪ್ರದೇಶಕ್ಕೆ ತಲುಪಿ ಅಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಕೆಲವು ಸಾಮಾಜಿಕ ಕಾರ್ಯಕರ್ತರೂ ಪೊಲೀಸರಿಗೆ ನೆರವು ನೀಡಿದರೂ ಆದರೂ ಸುಮಾರು ಒಂದೂವರೆ ಗಂಟೆಯ ತನಕ ಅದೇ ರೀತಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬರುತ್ತಿತ್ತು. ಪುತ್ತೂರಿಗೆ ಸಾಗುವ ಕೆಎಸ್ಸಾರ್ಟಿಸಿ ಬಸ್ಸೊಂದು ಉಪ್ಪಿನಂಗಡಿ ಅಂಡರ್‌ಪಾಸ್ ಬಳಿ ಟ್ರಾಫಿಕ್ ಕಂಡು ನೇರವಾಗಿ ಹಾಸನದ ಕಡೆ ಸಾಗುವ ಹೆದ್ದಾರಿಯಲ್ಲಿ ಗಾಂಧಿಪಾರ್ಕ್ ತನಕ ಸಾಗಿ ಅಲ್ಲಿಂದ ತಿರುವು ಪಡೆದು ಮಂಗಳೂರು ಕಡೆಗೆ ಸಾಗುವ ವಾಹನಗಳು ಸಂಚರಿಸುವ ಹೆದ್ದಾರಿಗೆ ಬಂದಾಗ ಅಲ್ಲಿಯೂ ಟ್ರಾಫಿಕ್ ಜಾಮ್ ಕಿ.ಮೀ.ಗಟ್ಟಲೆ ಇತ್ತು. ಇದರಿಂದಾಗಿ ಈ ಬಸ್ ಕೂಡಾ ಕುಮಾರಧಾರ ಸೇತುವೆ ಬಳಿ ತಲುಪುವಾಗ ಬರೋಬ್ಬರಿ ಅರ್ಧ ಗಂಟೆ ಸಮಯ ತೆಗೆದುಕೊಂಡಿತ್ತು.

ಸಮಾರಂಭಗಳಿಗೆ ತಡವಾಗಿ ತಲುಪುವ ಪರಿಸ್ಥಿತಿ: ಇಂದು ಹಲವು ಕಡೆ ಮದುವೆ, ಗೃಹ ಪ್ರವೇಶ ಸೇರಿದಂತೆ ಹಲವು ಸಮಾರಂಭಗಳಿದ್ದು, ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಆದರೆ ಟ್ರಾಫಿಕ್ ಜಾಮ್‌ನಿಂದಾಗಿ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದಾಗ, ಯಾಕಾಗಿ ಇಂದು ಸಮಾರಂಭಕ್ಕೆ ಹೊರಟೆವೋ? ನಾವು ಯಾವಾಗ ಮುಟ್ಟತ್ತೇವೋ? ಮದುವೆಯ ಬದಲು ಇನ್ನೊಮ್ಮೆ ಡಿನ್ನರ್‌ಗೆ ತೆರಳಬಹುದಿತ್ತು. ನಾವು ಹೋಗುವಾಗ ಸಮಾರಂಭ ಮುಗಿದಿರಬಹುದು ಎಂಬ ಮಾತುಗಳು ಸಮಾರಂಭಗಳಿಗೆ ಹೊರಟ ಪ್ರಯಾಣಿಕರಿಂದ ಕೇಳಿ ಬರುತ್ತಿತ್ತು.

LEAVE A REPLY

Please enter your comment!
Please enter your name here