ಗುರುವಾಯನಕರೆಯಲ್ಲಿರುವ ಕೈವಲ್ಯ ಮಠದ ಭೂಮಿ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ – ಸುನಿಲ್ ಬೋರ್ಕರ್ ದೂರು: ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಕೇಸ್ ದಾಖಲು

0

ಪುತ್ತೂರು: ಅಕ್ರಮ ಹಣ ವರ್ಗಾವಣೆ ಮಾಡಿ ಮಠದ ನಿಧಿಯ ದುರುಪಯೋಗ ಪಡಿಸಿದ ಆರೋಪದಡಿ ಗೋವಾದಲ್ಲಿರುವ ಕೈವಲ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಬೆಳ್ತಂಗಡಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಸೂಚನೆ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಂಡಕೊಚ್ಚಿ ನಿವಾಸಿ ಸುನಿಲ್ ಬೋರ್ಕರ್(52ವ)ರವರು ದಾಖಲಿಸಿದ ದೂರಿನ ಮೇರೆಗೆ ಬೆಳ್ತಂಗಡಿ ನ್ಯಾಯಾಲಯದ ಆದೇಶ ನಂಬ್ರ 389/2025ರಂತೆ ಬಿಎನ್‌ಎಸ್ 318(2), 318(3), 318(4), 314, 316ರಡಿ ಶಿವಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ದೂರು ದಾಖಲು:
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ 0.25 ಎಕರೆ ಕೃಷಿಯೇತರ ಭೂಮಿಯನ್ನು ಕೈವಲ್ಯ ಮಠ ಹೊಂದಿದೆ. ಸದ್ರಿ ಭೂಮಿಯನ್ನು ದಿನಾಂಕ 23.11.2006ರಂದು ಸಂಧ್ಯಾ ಎಸ್. ನಾಯಕ್ ಮತ್ತು ಸತೀಶ್ ನಾಯಕ್‌ರವರು ಕೈವಲ್ಯ ಮಠಕ್ಕೆ ದಾನವಾಗಿ ನೀಡಿದ್ದಾರೆ. ಮಠದ ಪ್ರಸ್ತುತ ಯತಿಗಳಾದ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸ್ವಂತ ಇಚ್ಛೆಯ ಮೇರೆಗೆ ಸಮಿತಿಯ ಅನುಮೋದನೆ ಇಲ್ಲದೆ, ಸದ್ರಿ ದಾನ ಮಾಡಿದ ಭೂಮಿಯನ್ನು ಬೇರೆ ಯಾರಿಗೋ ರೂ. 2೦,೦೦,೦೦೦ಕ್ಕೆ ಮಾರಾಟ ಮಾಡಿ ಮಾರಾಟ ಮಾಡಿದ ಹಣವನ್ನು ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಅಲ್ಲದೆ ಜಮೀನಿನ ಸಂಪೂರ್ಣ ಹಕ್ಕು ಹೊಂದಿರುವ ಮಾಲಿಕ ಎಂಬುದಾಗಿ ಸುಳ್ಳು ಹಕ್ಕು ಮಂಡಿಸಿ ಸದ್ರಿ ಕ್ರಯ ಪತ್ರ ಬರೆದುಕೊಟ್ಟು ಮಾರಾಟದಿಂದ ಬಂದ ಹಣವನ್ನು ವೈಯಕ್ತಿಕ ಉದ್ದೇಶಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ, ನಂಬಿಕೆ ದ್ರೋಹ, ಮಠದ ನಿಧಿಯ ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿ ಸುನಿಲ್ ಬೋರ್ಕರ್ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ಆದೇಶದಂತೆ ಪೊಲೀಸ್ ಠಾಣೆಯಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರ ಸುನಿಲ್ ಬೋರ್ಕರ್ ಪರ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಾದ ಮಂಡಿಸಿದ್ದಾರೆ.


ಸುನಿಲ್ ಬೋರ್ಕರ್ ನೀಡಿದ್ದ ದೂರಿನ ವಿವರ:
ಗೋವಾ ರಾಜ್ಯದ ಪೊಂಡಾದಲ್ಲಿರುವ ಕೈವಲ್ಯ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಮಠವು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ದೆಹಲಿಯಾದ್ಯಂತ ಶಾಖೆಗಳನ್ನು ಹೊಂದಿರುವ ಪ್ರಮುಖ ಮಠವಾಗಿದೆ. ಈ ಮಠವು ಶತಮಾನಗಳಿಂದ ಸ್ಮಾರ್ತ ಸಾರಸ್ವತ ಬ್ರಾಹ್ಮಣರ ಧಾರ್ಮಿಕ ಸಂಸ್ಥೆಯಾಗಿದೆ. ಈ ಮಠದ ಎಲ್ಲಾ ವ್ಯವಹಾರಗಳನ್ನೂ ಒಂದು ನೋಂದಾಯಿತ ಟ್ರಸ್ಟ್ ನೋಡಿಕೊಳ್ಳುತ್ತಿದೆ. ನಾವು ಸದ್ರಿ ಮಠದ ಭಕ್ತರು/ಅನುಯಾಯಿಗಳಾಗಿದ್ದು ಮಠ/ಪೀಠದ ಮೇಲೆ ತುಂಬಾ ಭಕ್ತಿ ಹಾಗೂ ಗೌರವಗಳನ್ನು ಹೊಂದಿದ್ದೇವೆ. ಶ್ರೀಮಠದ ಭಕ್ತರು ಭಾರತದಾದ್ಯಂತ, ಮುಖ್ಯವಾಗಿ ಮುಂಬೈ, ಕರ್ನಾಟಕ ಮತ್ತು ಕೇರಳದಲ್ಲಿ ಹರಡಿಕೊಂಡಿದ್ದಾರೆ. ಗೋವಾದಲ್ಲಿ ಟ್ರಸ್ಟ್ ನಿರ್ವಹಿಸುವ ಸಾಕಷ್ಟು ಸ್ಥಿರ ಆಸ್ತಿಗಳನ್ನು ಇದು ಹೊಂದಿದೆ. ಟ್ರಸ್ಟ್/ ವ್ಯವಸ್ಥಾಪಕ ಸಮಿತಿಯು ಸರಸ್ವತ್ ಬ್ರಾಹ್ಮಣರಲ್ಲಿ ಒಬ್ಬರನ್ನು ಮಠಾಧೀಶ/ಸ್ವಾಮೀಜಿಯಾಗಿ ನಾಮನಿರ್ದೇಶನ ಮಾಡುತ್ತಿತ್ತು. ಹಿಂದಿನ ಯತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿಯವರ ನಿಧನದ ನಂತರ ಮಠದ 77ನೇ ಮಹಾಂತರಾಗಿ ಶ್ರೀ ಶಿವಾನಂದ ಸರಸ್ವತಿ ಎಂಬ ಯತಿ ಮಠದ ಉತ್ತರಾಧಿಕಾರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪ್ರದೇಶದಲ್ಲಿ ಪವಿತ್ರ ಕೈವಲ್ಯ ಮಠ ೦.25 ಎಕರೆ ಕೃಷಿಯೇತರ ಭೂಮಿಯನ್ನು ಹೊಂದಿದ್ದು ಇದನ್ನು ಸಂಧ್ಯಾ ಎಸ್. ನಾಯಕ್, ಸತೀಶ ನಾಯಕ್ ಅವರು 23-11-2006ರಂದು ನೋಂದಾಯಿತ ಉಡುಗೊರೆ/ದಾನ ಪತ್ರದ ಮೂಲಕ ಬೆಳ್ತಂಗಡಿ ಉಪನೋಂದಾವಣಾ ಕಛೇರಿ ಮೂಲಕ ಮಠಕ್ಕೆ ದಾನ ಮಾಡಿರುತ್ತಾರೆ. ಉಡುಗೊರೆಯನ್ನು ಶ್ರೀಮದ್ ಶಿವಾನಂದ ಸರಸ್ವತಿಯವರ ಜಿ.ಪಿ.ಎ. ಹೋಲ್ಡರ್ ಆದ ಉದಯ ಲಕ್ಷಣ ಪ್ರಭು ಎಂಬವರ ಮೂಲಕ ಸದ್ರಿ ದಾಖಲೆಯನ್ನು ನೋಂದಾಯಿಸಲಾಗಿದೆ. ಮೇಲಿನ ಭೂಮಿಯನ್ನು ಕೈವಲ್ಯ ಮಠದ ಸಾರಸ್ವತ ಅನುಯಾಯಿಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸುವ ನಿರ್ದಿಷ್ಟ ಉದ್ದೇಶಕ್ಕಾಗಿ ದಾನ ಮಾಡಲಾಗಿದೆ. ಅದರಂತೆ ದಾನಿ ಸತೀಶ ನಾಯಕ್ ಅವರ ನಿವಾಸದಲ್ಲಿ 10-01-2007ರಂದು ಸಭೆಯನ್ನು ಕರೆಯಲಾಯಿತು ಮತ್ತು ಸಮಿತಿಯು ಶಾಖಾ ಮಠ ಸ್ಥಾಪಿಸಲು ನಿರ್ಣಯಗಳನ್ನು ಅಂಗೀಕರಿಸಿತು. ಎಸ್.ಬಿ. ಖಾತೆ ಸಂಖ್ಯೆ 5326 (ಹಳೆಯ ಸಂಖ್ಯೆ)ನಲ್ಲಿರುವ ಕೆನರಾ ಬ್ಯಾಂಕ್, ಬೆಳ್ತಂಗಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲಾಯಿತು. ಕೈವಲ್ಯ ಮಠದ ಅನುಯಾಯಿಗಳಾದ ಗೌಡ ಸಾರಸ್ವತ ಸಮುದಾಯದ ಸದಸ್ಯರ ನಿಜವಾದ ಕಾನೂನುಬದ್ಧ ಉದ್ದೇಶಗಳಿಗಾಗಿ ಈ ಆಸ್ತಿಯು ಟ್ರಸ್ಟ್ ಆಸ್ತಿಯಾಗಿದೆ. ಮಠದ ಪ್ರಸ್ತುತದ ಯತಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಾನಂದ ಸರಸ್ವತಿ ಅವರು ಸ್ವಂತ ಇಚ್ಛೆಯ ಮೇರೆಗೆ ಮತ್ತು ಸಮಿತಿಯ ಅನುಮೋದನೆಯಿಲ್ಲದೆ ಭೂಮಿಯನ್ನು ಬಾಲಕೃಷ್ಣ ನಾಯಕ್ ಸಿ. ಮತ್ತು ಅವರ ಪತ್ನಿ ರೇವತಿ ಬಿ. ನಾಯಕ್ ಎಂಬವರಿಗೆ ಒಂದು ನೋಂದಾಯಿತ ಕ್ರಯ ಪತ್ರದ ಮೂಲಕ ಮಾರಾಟ ಮಾಡಿದ್ದಾರೆ. ಸದ್ರಿ ಕ್ರಯ ಪತ್ರವನ್ನು ಬೆಳ್ತಂಗಡಿ ಉಪನೋಂದಾವಣಾ ಕಛೇರಿ ಮೂಲಕ ಮಾಡಲಾಗಿದೆ. ದಾಖಲೆಯ ವಿಷಯಗಳನ್ನು ಪರಿಶೀಲಿಸಿದಾಗ ಭೂಮಿಯನ್ನು ರೂ. 2೦,೦೦,೦೦೦/- ಪ್ರತಿಫಲ ಮೌಲ್ಯಕ್ಕೆ ಮಾರಾಟ ಮಾಡಿರುವುದಾಗಿ ನಮೂದಿಸಲಾಗಿದೆ. ಆದರೆ ನಿಜವಾಗಿ ಸದ್ರಿ ಜಮೀನಿನ ಮಾರುಕಟ್ಟೆ ಮೌಲ್ಯವು ಅದರ ಮೂರು ಪಟ್ಟು ಹೆಚ್ಚಾಗಿರುತ್ತದೆ. ಇದಲ್ಲದೆ ವಿವಾದಿತ ಮಾರಾಟ ಪತ್ರದಲ್ಲಿ ಉಲ್ಲೇಖಿಸಲಾದ ಮಾರಾಟ ಮೌಲ್ಯವನ್ನು ಆರೋಪಿ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆರೋಪಿ ಶಿವಾನಂದ ಸರಸ್ಕೃತಿ ಸ್ವಾಮೀಜಿಗೆ ಮೇಲೆ ಹೇಳಿದ ಭೂಮಿಯ ಮೇಲೆ ಯಾವುದೇ ವೈಯಕ್ತಿಕ ಹಕ್ಕುಗಳು ಅಥವಾ ಮಾಲೀಕತ್ವವಿರಲಿಲ್ಲ. ಏಕೆಂದರೆ ಅದನ್ನು ಗೋವಾದ ಶ್ರೀ ಗೌಡ ವಾದಾಚಾರ್ಯ ಮಠದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿತ್ತು. ಅವರು ಮಠದ ಪ್ರಸ್ತುತ ಮಠಾಧಿಪತಿಯಾಗಿರುವುದರಿಂದ ಅವರ ಹೆಸರನ್ನು ದಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ, ಮೇಲೆ ಹೇಳಿದ ಭೂಮಿಯನ್ನು ಬೇರೆಯವರಿಗೆ ಪರಭಾರ ಮಾಡಲು/ಮಾರಾಟ ಮಾಡಲು ಅವರಿಗೆ ಯಾವುದೇ ಹಕ್ಕು ಇರುವುದಿಲ್ಲ. ಆದರೆ ಅವರು ತಾನು ಮೇಲೆ ನಮೂದಿಸಿದ ಜಮೀನಿನ ಸಂಪೂರ್ಣ ಹಕ್ಕುಗಳನ್ನು ಹೊಂದಿರುವ ಮಾಲಿಕ ಎಂಬುದಾಗಿ ಸುಳ್ಳಾಗಿ ಹಕ್ಕು ಮಂಡಿಸಿ ಸದ್ರಿ ಕ್ರಯಪತ್ರವನ್ನು ಬರಕೊಟ್ಟು ಪ್ರತಿಫಲ ಮೌಲ್ಯವನ್ನು ತನ್ನ ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿರುತ್ತಾರೆ. ಆದ್ದರಿಂದ, ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಮೇಲೆ ಹೇಳಿದ ಕೃತ್ಯವು ನಂಬಿಕೆದ್ರೋಹ ಮತ್ತು ಮಠ/ಮಠದ ಅನುಯಾಯಿಗಳಿಗೆ ಮಾಡಿದ ಘೋರ ವಂಚನೆಯಾಗಿರುತ್ತದೆ. ಅಲ್ಲದೆ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಗೋಕರ್ಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಮಠದ ಇತರ ಕೆಲವು ರೀತಿಯ ಆಸ್ತಿಗಳನ್ನೂ ಇದೇ ರೀತಿ ವಿಲೇವಾರಿ ಮಾಡಿದ್ದಾರೆ ಎಂದು ಮಠದ ಅನುಯಾಯಿಗಳು ತಿಳಿದುಕೊಂಡಿದ್ದಾರೆ.


ವೈಯಕ್ತಿಕ ಲಾಭಗಳಿಸುವ ದುರುದ್ದೇಶದಿಂದ ಆರೋಪಿಯು ಟ್ರಸ್ಟ್‌ನ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಶಿವಾನಂದ ಸರಸ್ವತಿ ಸ್ವಾಮೀಜಿ ಭಾರತದ ಅನೇಕ ಸ್ಥಳಗಳಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ಕಂಡುಬಂದಿದೆ. ಈಗ ಮಠದ ಅನುಯಾಯಿಗಳು ಆರೋಪಿಯು ಮಾಡಿರುವ ನಂಬಿಕೆದ್ರೋಹ ಹಾಗೂ ವಂಚನಾ ಕೃತ್ಯಗಳಿಂದ ತೀವ್ರವಾಗಿ ನೊಂದಿದ್ದಾರೆ ಮತ್ತು ಸ್ವಾಮೀಜಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ಸಾರಸ್ವತ ಸಮುದಾಯದ ಅಪಾರ ಅನುಯಾಯಿಗಳ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಸ್ವಾಮೀಜಿಯು ಹಣ ವರ್ಗಾವಣೆ ಕೃತ್ಯ ಮತ್ತು ಮಠದ ನಿಧಿಯ ದುರುಪಯೋಗದಲ್ಲಿಯೂ ತೊಡಗಿಸಿಕೊಂಡಿದ್ದು ಸ್ವಾಮೀಜಿಯ ಕೃತ್ಯವು ದುರುದ್ದೇಶಪೂರಿತವಾಗಿದ್ದು ಭಕ್ತರ ನಂಬಿಕೆ ಮತ್ತು ವಿಶ್ವಾಸಕ್ಕೆ ವಿರುದ್ಧವಾಗಿದೆ. ಅದ್ದರಿಂದ ಆರೋಪಿಯು ಮಾಡಿರುವ ಅಕ್ರಮ ಹಣ ವರ್ಗಾವಣೆ, ನಂಬಿಕೆ ದ್ರೋಹ, ಮಠದ ನಿಧಿಯ ದುರುಪಯೋಗ ಇತ್ಯಾದಿ ಕೃತ್ಯಗಳ ಬಗ್ಗೆ, ವಿವರವಾದ ತನಿಖೆ ನಡೆಸಿ, ನ್ಯಾಯದ ಹಿತದೃಷ್ಠಿಯಿಂದ ಶಿವಾನಂದ ಸರಸ್ಕೃತಿ ಸ್ವಾಮೀಜಿ ಮತ್ತು ಇತರ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಬೋರ್ಕರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here