ಉಪ್ಪಿನಂಗಡಿ: ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜನತೆಯಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಲು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲೇರಿ ಹಾಗೂ ಉಪ್ಪಿನಂಗಡಿ ಪೇಟೆಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ದ.ಕ ಜಿಲ್ಲೆಯಲ್ಲಿ ಉಂಟಾಗಿರುವ ಕೋಮು ಸೂಕ್ಷ್ಮ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆ ಎಲ್ಲರ ಮೇಲೂ ವಿಶೇಷ ನಿಗಾವಿರಿಸಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಲಾಗಿದೆ.
ಪೊಲೀಸ್ ಪಥ ಸಂಚಲನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ ಎಸ್, ಉಪ ನಿರೀಕ್ಷಕರಾದ ಅವಿನಾಶ್, ಅಭಿನಂದನ್, ಅಕ್ಷಯ್ ಡಿ, ಶೇಖರ್ ಮಲ್ಪೆ, ಮೊದಲಾದವರು ಭಾಗವಹಿಸಿದ್ದರು.
ಪ್ರತಿ ರೌಡಿಶೀಟರ್ ಗಳ ಮೇಲೆ ಕಣ್ಣಿಟ್ಟ ಪೊಲೀಸ್ ಇಲಾಖೆ
ಜಿಲ್ಲೆಯನ್ನು ತಲ್ಲಣಗೊಳಿಸಿದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಉಂಟಾಗಿರುವ ಉದ್ವಿಗ್ನತೆಯ ನಿಟ್ಟಿನಲ್ಲಿ ವ್ಯಕ್ತಗೊಳ್ಳುವ ಪ್ರತಿಕಾರದ ಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಎಲ್ಲೆಡೆ ರೌಡಿಶೀಟರ್ ಗಳ ಮೇಲೆ ನಿಗಾವಿರಿಸಲಾಗಿದ್ದು, ರಾತ್ರಿಯುದ್ದಕ್ಕೂ ರೌಡಿಶೀಟರ್ ಗಳ ಮನೆಗೆ ಭೇಟಿ ನೀಡಿ ಅವರ ಉಪಸ್ಥಿತಿಯನ್ನು ದೃಢೀಕರಿಸುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ. ಹಾಗೂ ಪೇಟೆಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9.30ರ ಒಳಗಾಗಿ ಬಂದ್ ಮಾಡುವಂತೆ ಸೂಚಿಸಲಾಗುತ್ತಿದೆ. ಮಾತ್ರವಲ್ಲದೆ ರಾತ್ರಿ ವೇಳೆ ಸಂಚರಿಸುವ ಎಲ್ಲಾ ವಾಹನಗಳ ಮೇಲೂ ನಿಗಾವಿರಿಸುವ ಕಾರ್ಯ ನಡೆಯುತ್ತಿದ್ದು, ನಾಕಾಬಂಧಿಯನ್ನು ಬಿಗುಗೊಳಿಸಲಾಗಿದೆ.