ಸರಕಾರಿ ಪ್ರ.ದ. ಮಹಿಳಾ ಕಾಲೇಜಿನಲ್ಲಿ ಶಿಕ್ಷಕರ ಸಂವರ್ಧನಾ ಶಿಬಿರ

0

ಚೌಕಟ್ಟಿನ ಹೊರಗೆ ಕ್ರಿಯಾಶೀಲರಾಗುವುದು ಶಿಕ್ಷಕರಿಗೆ ಸಾಧ್ಯ- ಡಾ.ಆಲ್ವಿನ್ ಡೆಸಾ

ಪುತ್ತೂರು: ಶಿಕ್ಷಕರು  ಸಿಲಬಸ್ಸಿಗೆ, ವಿಶ್ವವಿದ್ಯಾನಿಲಯದ ನಿಯಮಗಳಿಗೆ, ಸರ್ಕಾರದ ಆದೇಶಗಳಿಗೆ ಬದ್ಧವಾಗಿರುವುದು ಅಗತ್ಯ ಆದರೆ ಅದರೊಂದಿಗೆ ತರಗತಿಯೊಳಗೆ ಮಾನವೀಯ ಅಂತಃಕರಣದ ವಾತಾವರಣವನ್ನು ಬೆಳೆಸಲು ಕೂಡ ಅವರು ಶ್ರಮಿಸಬೇಕಾಗಿದೆ ಎಂದು ಸೈಂಟ್ ಎಲೋಶಿಯಸ್ ಕಾಲೇಜ್ ಮಂಗಳೂರಿನ ಪ್ರಾಧ್ಯಾಪಕರಾದ ಡಾ. ಆಲ್ವಿನ್ ಡೆಸಾರವರು ತಿಳಿಸಿದರು. 

ಅವರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನ ಐಕ್ಯೂಏಸಿ ಘಟಕದ ವತಿಯಿಂದ ನಡೆಸಲಾದ ಶಿಕ್ಷಕರ ಸಂವರ್ಧನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಶಿಕ್ಷಕರ ಬಳಿ ಬರುವ ವಿದ್ಯಾರ್ಥಿಗಳಲ್ಲಿ ಹಲವು ರೀತಿಯವರು ಇರುತ್ತಾರೆ, ಅವರವರ ಅಗತ್ಯಗಳನ್ನು ಅರಿತುಕೊಂಡು ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವುದು ಇಂದಿನ ದಿನಗಳಲ್ಲಿ ಶಿಕ್ಷಕರ ಮುಖ್ಯ ಜವಾಬ್ದಾರಿಯಾಗುತ್ತಿದೆ. ಸಾಮಾನ್ಯವಾಗಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕು ಬದುಕಿನಲ್ಲಿ ಉನ್ನತ ಸ್ಥಾನಮಾನಕ್ಕೆ ಹೋಗಬೇಕು ಎಂದು ಆಶಿಸುತ್ತಿರುತ್ತಾರೆ. ಇದು ಸಹಜ. ಆದರೆ ನಮ್ಮ ವಿದ್ಯಾರ್ಥಿಗಳು ಬದುಕಿನಲ್ಲಿ ಸಂತೋಷದಿಂದ ಇರಬೇಕು ಎಂದು ಆಶಿಸುವ ಅಗತ್ಯ ಕೂಡಾ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋಪಾಲ್ ಕೃಷ್ಣ ಕೆ.ರವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ಸುಮಾರು 540ರಷ್ಟು ವಿದ್ಯಾರ್ಥಿಗಳಿರುತ್ತಾರೆ. ಸಾಮಾನ್ಯವಾಗಿ ಅವರೆಲ್ಲರೂ ತೀರಾ ಹಿಂದುಳಿದ ಸಾಮಾಜಿಕ ಆರ್ಥಿಕ ಹಿನ್ನೆಲೆಯವರು, ಇವರೆಲ್ಲರನ್ನು ಉತ್ತಮ ವ್ಯಕ್ತಿಗಳನ್ನಾಗಿ ಪರಿವರ್ತಿಸಿದರೆ ದೇಶಕ್ಕೆ ನಾವು ಮಹಾನ್ ಸೇವೆ ಸಲ್ಲಿಸಿದಂತಾಗುತ್ತದೆ. ಈ ಶ್ರೇಷ್ಠ ಅವಕಾಶ ನಮಗೆ ಲಭಿಸಿದ್ದು ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಉಪನ್ಯಾಸಕರೆಲ್ಲರೂ ವಿಸ್ತೃತ ಚರ್ಚೆ ನಡೆಸಿದರು.  ಐಕ್ಯೂಏಸಿ ಸಂಚಾಲಕರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ಭೂಮಿಕಾ ಹಾಗೂ ಪವಿತ್ರ ಪ್ರಾರ್ಥನಾ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here