ಉಪ್ಪಿನಂಗಡಿ : ಇಲ್ಲಿನ ಪುರಾಣ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಉತ್ಸವಾದಿಗಳಲ್ಲಿ ಭಾಗವಹಿಸುತ್ತಿದ್ದ ಬಸವ ಹೃದಯಾಘಾತಕ್ಕೀಡಾಗಿ ಶನಿವಾರ ಮಧ್ಯಾಹ್ನದ ವೇಳೆ ಮೃತಪಟ್ಟಿದೆ.
ಕಡು ಕಪ್ಪು ಮೈಬಣ್ಣವನ್ನು ಹೊಂದಿದ್ದು, ಎತ್ತರವಾದ ಸುದೃಢ ಮೈಕಟ್ಟಿನ ಈ ಬಸವ ಮೃದು ಸ್ವಭಾವದಾಗಿದ್ದರೂ, ಅದರ ಗಾತ್ರ ಮತ್ತು ಮುಖಭಾವ ಭಕ್ತರನ್ನು ಭಯಪಡಿಸುವಂತಿತ್ತು. ದೇವಾಲಯದ ಉತ್ಸಾವಾದಿ ಕಾರ್ಯಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸಿ ದೇವರ ಮುಂದೆ ಸಾಗುತ್ತಿದ್ದ ದೃಶ್ಯವೇ ಮನಮೋಹಕವಾಗಿದ್ದು, ಭಕ್ತಾದಿಗಳ ಆಕರ್ಷಣೆಗೆ ಒಳಗಾಗಿತ್ತು.
ಎಂದಿನಂತೆಯೇ ಲವಲವಿಕೆಯಲ್ಲಿದ್ದ ಬಸವ ಮಧ್ಯಾಹ್ನ 12.೦೦ ಗಂಟೆ ಸುಮಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದೆ. ಭೀಮಗಾತ್ರದ ಈ ಬಸವನ ಮೃತ ದೇಹವನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸಿ ಅಂತ್ಯ ಸಂಸ್ಕಾರಕ್ಕೆ ಒಳಪಡಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರ ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ ಅಂತಿಮ ವಿಧಿಯನ್ನು ನೆರವೇರಿಸಲಾಯಿತು.