ಪುತ್ತೂರು: ’ಗಂಧದಕುಡಿ’ ಚಿತ್ರದ ಮೂಲಕ ನಿರ್ಮಾಪಕರಾದ ಉಡುಪಿಯ ಸತ್ಯೇಂದ್ರ ಪೈ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಸನ್ ಮ್ಯಾಟ್ರಿಕ್ಸ್ ಬ್ಯಾನರ್ ನಲ್ಲಿ ಸ್ಕೂಲ್ ಲೀಡರ್ ಎಂಬ ಚಿತ್ರ ನಿರ್ಮಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಮೇ.30 ರಂದು ಕರಾವಳಿ ಜಿಲ್ಲೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಮೇ.20 ರಂದು ಖ್ಯಾತ ಗ್ರಾಫಿಕ್ ಕಲಾವಿದ ಕರಣ್ ಆಚಾರ್ಯ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.
ಈ ಚಿತ್ರದಲ್ಲಿ ತುಳು ಚಿತ್ರ ರಂಗದ ಖ್ಯಾತ ನಟರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ರೈ ಸೇರಿದಂತೆ ಕನ್ನಡದ ಹಿರಿಯ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಭಯ ಜಿಲ್ಲೆಯ 25 ಶಾಲೆಗಳ 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿರುವುದು ಚಿತ್ರದ ವಿಶೇಷತೆ. ಹೈಸೂಲ್ಕ್ ಮಕ್ಕಳ ಶೈಕ್ಷಣಿಕ ಬದುಕು, ಮನೋವಿಕಾಸದೊಂದಿಗೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾವಸ್ತು ಹೊಂದಿರುವ ಈ ಚಿತ್ರದ ಚಿತ್ರೀಕರಣವನ್ನು ಕಟಪಾಡಿಯ ಶಾಲೆಯೊಂದರಲ್ಲಿ ಮಾಡಲಾಗಿದೆ. ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ ಮತ್ತು ನಿರ್ದೇಶನ ರಝಾಕ್ ಪುತ್ತೂರು ಅವರದ್ದಾಗಿದ್ದು, ಈ ಹಿಂದೆ ಪೆನ್ಸಿಲ್ ಬಾಕ್ಸ್, ಗಂಧದ ಕುಡಿ ಚಿತ್ರದ ಪ್ರಬುದ್ಧ ನಿರ್ದೇಶನವನ್ನು ಇಲ್ಲಿಯೂ ಮುಂದುವರಿಸಿದ್ದಾರೆ.