ಅಗ್ನಿ ಬ್ರದರ್ಸ್ ತಂಡ ಚಾಂಪಿಯನ್, ದಿ ಗೋಟ್ಸ್ ರನ್ನರ್ಸ್
ಪುತ್ತೂರು: ದರ್ಬೆ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಾಲಿಬಾಲ್ ಲೀಗ್ ಪಂದ್ಯಾಟವನ್ನು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದು, ಎಸ್.ಪಿ.ವಿ.ಸಿ ಸೀಸನ್-1 ರ ಸಮಾರೋಪ ಕಾರ್ಯಕ್ರಮ ಮೇ 19 ರಂದು ಕಾಲೇಜು ಕ್ರೀಡಾಂಗಣದಲ್ಲಿ ನೆರವೇರಿತು.
ಅಗ್ನಿ ಬ್ರದರ್ಸ್ ತಂಡವು ಎಸ್.ಪಿ.ವಿ.ಎಲ್ ಸೀಸನ್ ಒಂದರ ಚಾಂಪಿಯನ್ ಎನಿಸಿಕೊಂಡಿದ್ದು, ದಿ ಗೋಟ್ಸ್ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಬೆಸ್ಟ್ ಅಟ್ಯಾಕರ್ ಆಗಿ ದಿ ಗೋಟ್ಸ್ ತಂಡದ ವರುಣ್, ಬೆಸ್ಟ್ ಪಾಸರ್ ಆಗಿ ಅಗ್ನಿ ಬ್ರದರ್ಸ್ ತಂಡದ ಚರಣ್, ಬೆಸ್ಟ್ ಅಲೌರೌಂಡರ್ ಆಗಿ ಅಗ್ನಿ ಬ್ರದರ್ಸ್ ತಂಡದ ಮನೀಶ್ ರವರು ಆಯ್ಕೆಯಾದರು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದು, ಕಾಲ್ಡ್ರೋಕ್ಸ್ ಹಾಗೂ ಲಿಲ್ ಪಯಣ್ಸ್ ತಂಡಗಳು ಕೂಟದಿಂದ ಹೊರ ಬಿದ್ದಿತು.
ಸಮಾರೋಪ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ .ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ನಮ್ಮ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹೀಗೆ ಎಲ್ಲಾ ವಿಭಾಗದಲ್ಲೂ ಒತ್ತು ನೀಡುತ್ತಾ ಬಂದಿದೆ. ಜೀವನದಲ್ಲಿ ಶಿಸ್ತು, ಬದ್ಧತೆ, ಕಠಿಣ ಪರಿಶ್ರಮ, ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಾಲಿಬಾಲ್ ಕ್ರೀಡಾಪಟು ಹಾಗೂ ಎ.ಎಂ.ಆರ್ ಸ್ಪೋರ್ಟ್ಸ್ ವೇರ್ಸ್ ಮಾಲಕರಾದ ಪ್ರದೀಪ್ ಮಾತನಾಡಿ, ಯಾವುದೇ ಕ್ಷೇತ್ರವಿರಲಿ, ನಾವು ಇಷ್ಟಪಟ್ಟು ಆಡಿದಾಗ, ಓದಿದಾಗ ಜೀವನದಲ್ಲಿ ಯಶಸ್ಸು ದಕ್ಕುವುದು. ಫಿಲೋಮಿನಾದ ಈ ಕ್ರೀಡಾಂಗಣದಲ್ಲಿ ಬೆವರು ಸುರಿಸಿ ಅಭ್ಯಾಸ ಮಾಡಿದವರು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನದಲ್ಲಿ ಇದ್ದಾರೆ ಎಂದರು.
ಫಿಲೋಮಿನಾ ಕಾಲೇಜು ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ನಮ್ಮ ಆರೋಗ್ಯವು ಸ್ಥಿರವಾಗಿರಬೇಕಾದರೆ ನಾವು ನಿತ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಕ್ರೀಡಾಪಟುಗಳು ಕೇವಲ ಕಾಲೇಜು ಹಂತದಲ್ಲಿ ಮಾತ್ರ ಭಾಗವಹಿಸುವುದು ಅಲ್ಲ, ವಿಶ್ವವಿದ್ಯಾಲಯದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಬೇಕು ಎಂದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಕ್ಸನ್ ಫೆರ್ನಾಂಡೀಸ್, ಕ್ರೀಡಾ ಕಾರ್ಯದರ್ಶಿ ಅನ್ವೇಶ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ಸ್ವಾಗತಿಸಿ, ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.