





ದಂಡ ವಸೂಲಿಗಷ್ಟೇ ಆಸಕ್ತರಾಗಿರುವ ಸಂಚಾರಿ ಪೊಲೀಸರು


ಉಪ್ಪಿನಂಗಡಿ: ಸಮರ್ಪಕವಾಗಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಯಾವುದೇ ಸಂಚಾರಿ ಪೊಲೀಸ್ ಸಿಬ್ಬಂದಿಯು ಗಮನಹರಿಸದೇ ಇರುವ ಕಾರಣ ಉಪ್ಪಿನಂಗಡಿಯಲ್ಲಿ ಪದೇ ಪದೇ ವಾಹನ ದಟ್ಟಣೆಯುಂಟಾಗುತ್ತಿದ್ದು, ಬುಧವಾರವೂ(ಮೇ.21) ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿ ಪ್ರಯಾಣಿಕರು ಸಂಕಷ್ಠಕ್ಕೀಡಾದ ಘಟನೆ ನಡೆದಿದೆ.





ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣಕ್ಕೆ ಹಲವು ಬಾರಿ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿರುವುದು ನಿಜವಾದರೂ, ಬಹುತೇಕ ಸಮಯ ಸುಗಮ ಸಂಚಾರವನ್ನು ನಿರ್ವಹಿಸಲು ಇರುವಂತಹ ಪೊಲೀಸ್ ಇಲಾಖೆ ಕರ್ತವ್ಯದಲ್ಲಿ ಕಣ್ಮರೆಯಾಗುವುದರಿಂದಲೇ ಈ ಸಮಸ್ಯೆ ಪದೇ ಪದೇ ತಲೆದೋರುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಬುಧವಾರ ಎಲ್ಲಾ ರಸ್ತೆಗಳಲ್ಲಿ , ಹೆದ್ದಾರಿಗಳಲ್ಲಿ ವಾಹನಗಳು ಮುಂದುವರೆಯಲಾಗದೆ ತಾಸುಗಟ್ಟಲೆ ರಸ್ತೆಯಲ್ಲೇ ಅಲುಗಾಡದೆ ನಿಲ್ಲುವಂತಾಗಿತ್ತು.
ಸಂಚಾರಿ ಪೊಲೀಸರು ಮರೆಯಾಗುವುದು ಯಾಕೆ?:
ಪ್ರಸಕ್ತ ಉಪ್ಪಿನಂಗಡಿಯ ಯಾವುದೇ ಬೀದಿಯಲ್ಲಿ ಸಂಚರಿಸಿದರೂ ಅಲ್ಲಿ ಗಲ್ಲಿ ಗಲ್ಲಿಯಲ್ಲಿ, ಮೂಲೆ ಮೂಲೆಯಲ್ಲಿ ವಾಹನ ಚಾಲಕರನ್ನು, ಸವಾರರನ್ನು ಹಿಡಿದು ದಂಡ ವಸೂಲಿ ಮಾಡಲು ಮುಂದಾಗುವ ಟ್ರಾಫಿಕ್ ಪೊಲೀಸರು ಕಾಣಿಸುತ್ತಿದ್ದರೆ, ಪೇಟೆಯಲ್ಲಿ ವಾಹನ ದಟ್ಟಣೆ ಗೋಚರಿಸಿದಾಕ್ಷಣ ಈ ದಂಡ ವಸೂಲಿಯ ಟ್ರಾಫಿಕ್ ಪೊಲೀಸರು ತಕ್ಷಣವೇ ಸ್ಥಳದಿಂದ ಕಣ್ಮರೆಯಾಗುತ್ತಿರುವುದು ಯಾಕೆನ್ನುವುದು ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ ಸಂಚಾರ ವ್ಯವಸ್ಥೆಯನ್ನೇ ಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ಸಂಚಾರಿ ಪೊಲೀಸ್ ವಿಭಾಗ ಪ್ರಸಕ್ತ ದಂಡ ವಸೂಲಿಗೆ ಮಾತ್ರ ಆಸಕ್ತವಾಗಿದ್ದು, ಸಂಚಾರ ನಿಯಂತ್ರಣಕ್ಕೆ ಸ್ವಲ್ಪನೂ ಕಾಳಜಿ ವಹಿಸುತ್ತಿಲ್ಲ. ಸಂಚಾರ ನಿಯಂತ್ರಣಕ್ಕೆ ಇಲಾಖೆಯ ಯಾರೊಬ್ಬರೂ ಕಾಣಿಸದೆ ಅವ್ಯವಸ್ಥೆ ಮೂಡಿದ ಬಳಿಕ ಇಲಾಖಾ ಮೇಲಾಧಿಕಾರಿಕಾರಿಗಳಿಗೆ ದೂರು ರವಾನೆಯಾದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಬುಧವಾರದಂದು ಯಾವ ಮಟ್ಟಿಗೆ ವಾಹನ ದಟ್ಟಣೆಯುಂಟಾಗಿದೆ ಎಂದರೆ, ಸನಿಹದಲ್ಲಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಯ ವರಾಂಡದಿಂದ ಪೊಲೀಸ್ ವಾಹನವನ್ನು ಬೀದಿಗಿಳಿಸಲಾಗದ ಸ್ಥಿತಿ ಪೊಲೀಸರಿಗೆ ಮೂಡುವಂತೆ ಆಗಿತ್ತು.

ಪೊಲೀಸರ ಕರ್ತವ್ಯವನ್ನು ಚಾಲಕರು ನಿರ್ವಹಿಸಿದರು:
ಡಿಢೀರ್ ವಾಹನ ದಟ್ಟಣೆಯುಂಟಾಗಿ ಯಾವುದೇ ವಾಹನಗಳು ಸಂಚಾರವನ್ನು ಮುಂದುವರೆಸಲಾಗದೆ ಅಸ್ತವ್ಯಸ್ತತೆಯುಂಟಾದಾಗ ವಾಹನ ಪಾರ್ಕಿಂಗ್ ನಲ್ಲಿದ್ದ ಟ್ಯಾಕ್ಸಿ ವಾಹನ ಚಾಲಕರೇ ಸಂಚಾರ ನಿಯಂತ್ರಿಸಲು ರಸ್ತೆಗಿಳಿದು ಶ್ರಮಿಸಿದರು. ಆದರೆ ವಾಹನ ಚಾಲಕರ ಮಾತಿಗೆ ಗೌರವ ನೀಡುವವರ ಸಂಖ್ಯೆ ಕಡಿಮೆ ಇದ್ದ ಕಾರಣ ಸಮಸ್ಯೆ ದೀರ್ಘ ಸಮಯ ಜೀವಂತಿಕೆಯನ್ನು ಪಡೆಯಿತು. ಬಹಳಷ್ಟು ಸಮಯದ ಬಳಿಕ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದ ಬಳಿಕ ವಾಹನ ಸಂಚಾರ ಸುಗಮವಾಯಿತು. ಆ ವೇಳೆಗೆ ವಾಹನಗಳಲ್ಲಿದ್ದ ಪ್ರಯಾಣಿಕರು ರಸ್ತೆಯಲ್ಲೇ ಬಾಕಿಯಾಗಿ ಬಸವಳಿದಿದ್ದರು. ಪದೇ ಪದೇ ಕಾಡುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ನಿತ್ಯ ಪೊಲೀಸ್ ಸಿಬ್ಬಂದಿಯ ನೇಮಕದತ್ತ ಇಲಾಖಾಧಿಕಾರಿಗಳು ಗಮನಹರಿಸಬೇಕಾಗಿದೆ ಎಂಬ ಆಗ್ರಹ ವ್ಯಕ್ತವಾಗಿದೆ.








