ಪುತ್ತೂರು: ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಶಾಖೆಯ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರ ವಿರುದ್ಧ ಯುಟ್ಯೂಬ್ ಚಾನೆಲ್‌ವೊಂದರ ಮೂಲಕ ಸಾರ್ವಜನಿಕ ಅಪಮಾನ ಮಾಡಿರುವ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಅಬ್ದುಲ್ ಮುನೀರ್ ಕಾಟಿಪಳ್ಳ ಮತ್ತು ಅಬ್ದುಲ್‌ಸಲಾಂ ಪುತ್ತಿಗೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ. ಗಣೇಶ್‌ಪ್ರಸಾದ್ ಮುದ್ರಾಜೆ ಅವರು ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿಯಾಗಿದ್ದರಿಂದ ಸಂಘದ ಸದಸ್ಯರುಗಳಿಗೆ ತೊಂದರೆ ಆದಾಗ ಅದಕ್ಕೆ ಸ್ಪಂಧಿಸಬೇಕಾಗಿದ್ದು, ಏ.25ರಂದು ಸರಕಾರ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಡಾ. ಆಶಾಜ್ಯೋತಿ ಅವರಿಗೆ ವ್ಯಕ್ತಿಯೋರ್ವರು ತೊಂದರೆ ನೀಡಿರುವುದನ್ನು ಖಂಡಿಸಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ಈ ಕುರಿತು ಏ.28ರಂದು ಮುನೀರ್ ಕಾಟಿಪಳ್ಳ ಮತ್ತು ಅಬ್ದುಲ್‌ಸಲಾಂ ಅವರು ಕೋಮುಸೌಹಾರ್ದತೆಯನ್ನು ಕದಡುವ ಮತ್ತು ಸಮಾಜದ ಸ್ವಾಸ್ತ್ಯವನ್ನು ಕದಡುವ ರೀತಿಯಲ್ಲಿ ಯುಟ್ಯೂಬ್ ಚಾನೆಲ್‌ವೊಂದರ ಮೂಲಕ ಸಾರ್ವಜನಿಕ ಅಪಮಾನ ಮಾಡಿದ್ದು, ಈ ಕುರಿತು ಮುನೀರ್ ಕಾಟಿಪಳ್ಳ ಮತ್ತು ಅಬ್ದುಲ್‌ಸಲಾಮ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ. ಗಣೇಶ್ ಮುದ್ರಾಜೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸದ ಹಿನ್ನಲೆಯಲ್ಲಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನಿದೇರ್ಶನ ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.