ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಬಗ್ಗೆ ಸರಕಾರ ಅಧ್ಯಯನ ತಂಡ ರಚನೆ ಮಾಡುವುದಾಗಿ ಹೇಳಿದೆ. ಈ ತಂಡದಲ್ಲಿ ಕರ್ನಾಟಕ ತುಳು ಅಕಾಡೆಮಿ ಸದಸ್ಯರನ್ನು ನೇಮಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ಶಾಸಕರು, ಹೊರ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನು ಅಲ್ಲಿನ ಅಧಿಕೃತ ಭಾಷೆಯನ್ನಾಗಿ ರೂಪಿಸಿದ್ದಾರೆ. ಅಧಿಕೃತ ಭಾಷೆಯನ್ನಾಗಿ ರೂಪಿಸುವಲ್ಲಿ ಅಲ್ಲಿನ ಸರಕಾರಗಳು ತೆಗೆದುಕೊಂಡ ನಿರ್ಣಯಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರದಿಂದ ಅಧಿಕೃತ ಅಧ್ಯಯನ ತಂಡ ತೆರಳಲಿದ್ದು ಈ ತಂಡದಲ್ಲಿ ಅಧಿಕಾರಿಗಳ ಜೊತೆ ಕರ್ನಾಟಕ ತುಳು ಅಕಾಡೆಮಿ ಸದಸ್ಯರನ್ನು ಸೇರಿಸಿಕೊಳ್ಳುವುದು ಮತ್ತು ಶೀಘ್ರವೇ ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸುವಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ನನ್ನದೇನು ಅಡ್ಡಿಯಿಲ್ಲ ಎಂದಿದ್ದ ಸಿ ಎಂ
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವುದರಲ್ಲಿ ನನ್ನದೇನು ಅಭ್ಯಂತರವಿಲ್ಲ , ತುಳು ಅಧಿಕೃತ ಭಾಷೆಯಾದರೂ ಮಾತನಾಡುವ ಭಾಷೆ ಎಲ್ಲರದ್ದೂ ಕನ್ನಡವಾಗಿರಬೇಕು, ವ್ಯವಹಾರಿಕ ಭಾಷೆಯೂ ಕನ್ನಡದಲ್ಲಿರಬೇಕು ಎಂದು ಹೇಳಿದ್ದರು. ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಅಧಿವೇಶನದಲ್ಲಿ ಮಾತನಾಡಿದ್ದನ್ನು ಸಿ ಎಂ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು.