ಪುತ್ತೂರಿನ 8, ಕಡಬದ 12 ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ
ವರದಿ: ಯತೀಶ್ ಉಪ್ಪಳಿಗೆ
ಪುತ್ತೂರು: ಪ್ರಸ್ತುತ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.ಸರಕಾರಿ ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರಗಳು ಶಾಲಾ ಪ್ರಾರಂಭಕ್ಕೂ ಮುನ್ನವೇ ವಿತರಣೆಯಾಗುತ್ತಿದೆ.ಮಧ್ಯಾಹ್ನದ ಬಿಸಿ ಊಟಕ್ಕೂ ಕೊರತೆ ಇಲ್ಲ.ಆದರೆ,ಕೆಲವೊಂದು ಸರಕಾರಿ ಶಾಲೆಗಳಲ್ಲಿ ಪ್ರಮುಖವಾಗಿ ಇರಬೇಕಾದ ಖಾಯಂ ಶಿಕ್ಷಕರೇ ಇಲ್ಲದೇ ಇರುವುದು ಅಚ್ಚರಿಯಾದರೂ ಸತ್ಯ.ಪುತ್ತೂರು ಹಾಗೂ ಕಡಬ ತಾಲೂಕಿನ 20 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ.ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಶಿಕ್ಷಕರೇ ಇಲ್ಲದಿದ್ದರೇ ಹೇಗೆ? ಮುಂದೆ ಗುರಿ ಇದ್ದರೂ, ಹಿಂದೆ ಗುರುವಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಬೀಳುವಂತಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ನೂತನ ಶೈಕ್ಷಣಿಕ ಸಾಲಿನ ತರಗತಿಗಳು ಪ್ರಾರಂಭಗೊಳ್ಳಲಿದೆ.ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗಳು ನಡೆಯುತ್ತಿದೆ.ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ.ಆದರೆ ಆಶ್ಚರ್ಯವೆಂದರೆ, ಇರುವ ವಿದ್ಯಾರ್ಥಿಗಳಿಗೂ ಪಾಠ ಮಾಡಲು ಶಿಕ್ಷಕರಿಲ್ಲ.ಅನುಪಾತದ ಆಧಾರದಲ್ಲಿ ಬೇಕಾದಷ್ಟು ಕನಿಷ್ಠ ಪ್ರಮಾಣದ ಶಿಕ್ಷಕರೂ ಇಲ್ಲ.ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ.ಅದರಲ್ಲಿಯೂ, ಪುತ್ತೂರು ತಾಲೂಕು ರಾಜ್ಯದಲ್ಲಿ 3ನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದರೂ ಇನ್ನೂ ಕೆಲವೊಂದು ಸರಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲದೇ ಇರುವುದು ಅಚ್ಚರಿಯ ಸಂಗತಿಯಾಗಿದೆ.ಭವಿಷ್ಯದ ಪ್ರಜೆಗಳಾಗಲಿರುವ ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿಯಂತಿರುವ ಪ್ರಾಥಮಿಕ ಶಾಲೆಗಳಲ್ಲಿಯೇ ಖಾಯಂ ಶಿಕ್ಷಕರ ಕೊರತೆಯು ಪೋಷಕರನ್ನೂ ಆತಂಕಕ್ಕೀಡು ಮಾಡಲಿದೆ.
ಉಭಯ ತಾಲೂಕಿನಲ್ಲಿ 344 ಶಿಕ್ಷಕರ ಕೊರತೆ:
ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 180 ಪ್ರಾಥಮಿಕ ಹಾಗೂ 23 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 203 ಸರಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ 344 ಶಿಕ್ಷಕರ ಹುದ್ದೆಗಳು ಖಾಲಿಯಿದೆ.180 ಪ್ರಾಥಮಿಕ ಶಾಲೆಗಳಿಗೆ ಒಟ್ಟು 912 ಹುದ್ದೆಗಳು ಮಂಜೂರಾಗಿದ್ದು ಇವುಗಳಲ್ಲಿ 611 ಖಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.301 ಶಿಕ್ಷಕರ ಹುದ್ದೆ ಖಾಲಿಯಿದೆ.23 ಪ್ರೌಢಶಾಲೆಗಳಿಗೆ 201 ಶಿಕ್ಷಕರ ಹುದ್ದೆ ಮಂಜೂರಾಗಿದ್ದು 158 ಖಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು 43 ಹುದ್ದೆ ಖಾಲಿಯಿದೆ.ಕಳೆದ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 247 ಹಾಗೂ ಪ್ರೌಢಶಾಲೆಗಳಿಗೆ 43 ಅತಿಥಿ ಶಿಕ್ಷಕರ ನೇಮಕ ಮಾಡಲಾಗಿತ್ತು.
ಈ ಶಾಲೆಗಳಲ್ಲಿ ಶೂನ್ಯ ಶಿಕ್ಷಕರು:
ಪುತ್ತೂರು ತಾಲೂಕಿನ ಪೆರ್ನಾಜೆ ಹಿ.ಪ್ರಾ ಶಾಲೆ, ನನ್ಯ ಹಿ.ಪ್ರಾ ಶಾಲೆ, ಕೊಂರ್ಬಡ್ಕ ಕಿ.ಪ್ರಾ ಶಾಲೆ, ಕುಂಜೂರುಪಂಜ ಹಿ.ಪ್ರಾ ಶಾಲೆ, ಬೆಟ್ಟಂಪಾಡಿ ಕಿ.ಪ್ರಾ ಶಾಲೆ, ಬೆದ್ರೋಡಿ ಕಿ.ಪ್ರಾ ಶಾಲೆ. ಬೆಳಿಯೂರುಕಟ್ಟೆ ಹಿ.ಪ್ರಾ ಶಾಲೆ, ಮಿತ್ತಡ್ಕ ಹಿ.ಪ್ರಾ ಶಾಲೆ, ಕಡಬ ತಾಲೂಕಿನ ಮೀನಾಡಿ ಕಿ.ಪ್ರಾ ಶಾಲೆ, ಕುಮಾರಮಂಗಲ ಹಿ.ಪ್ರಾ ಶಾಲೆ, ನೂಜಿಬೈಲು ಕಿ.ಪ್ರಾ ಶಾಲೆ, ಚೆನ್ನಾವರ ಕಿ.ಪ್ರಾ ಶಾಲೆ, ಅಂಕತ್ತಡ್ಕ ಹಿ.ಪ್ರಾ ಶಾಲೆ, ಕೊಪ್ಪ ಕಿ.ಪ್ರಾ ಶಾಲೆ, ಇಡ್ಯಡ್ಕ ಕಿ.ಪ್ರಾ ಶಾಲೆ, ಕೋಡಿಂಬಾಳ ಹಿ.ಪ್ರಾ ಶಾಲೆ, ಚೇರು ಕಿ.ಪ್ರಾ ಶಾಲೆ, ಬಲ್ಯಪಟ್ಟೆ ಕಿ.ಪ್ರಾ ಶಾಲೆ, ಅಡಂಜೆ ಹಾಗೂ ಕೊಂಡಾಡಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ಶಿಕ್ಷಕರಿರುವ ಶಾಲೆಗಳಾಗಿ ಗುರುತಿಸಿಕೊಂಡಿದೆ.ಈ ಶಾಲೆಗಳಿಗೂ ಮಕ್ಕಳ ದಾಖಲಾತಿ ಆರಂಭಗೊಂಡಿದ್ದು, ಶಿಕ್ಷಕರಿಲ್ಲದ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿದರೆ ಮುಂದೇನಾಗುವುದೋ ಎಂಬ ಸಹಜ ಆತಂಕ ಪೋಷಕರಲ್ಲಿದೆ.
ನೇಮಕ ಆಗದಿರುವುದೇ ಕಾರಣ:
ಶಾಲೆಗಳಲ್ಲಿ ಪ್ರತಿವರ್ಷ ಶಿಕ್ಷಕರ ನಿವೃತ್ತಿ, ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ.ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದು ಶಿಕ್ಷಕರ ಕೊರತೆಗೆ ಮುಖ್ಯ ಕಾರಣವೆನ್ನಲಾಗಿದೆ.ಹೊರ ಜಿಲ್ಲೆಯವರು ನೇಮಕಾತಿಯಾಗಿ ಕೆಲ ಸಮಯಗಳ ಕಾಲ ಕರ್ತವ್ಯ ನಿರ್ವಹಿಸಿ, ನಂತರ ಅವರವರ ಊರುಗಳಿಗೆ ವರ್ಗಾವಣೆಗೊಳ್ಳುತ್ತಿರುವುದು ಶಿಕ್ಷಕರ ಕೊರತೆಗೆ ಕಾರಣವಾಗಿದೆ.ಹೀಗಾಗಿ ವರ್ಷ ಕಳೆದಂತೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗುತ್ತಾ ಹೋಗುತ್ತದೆ.ಮಕ್ಕಳ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕಾಗಿ ಕೆಲವೊಂದು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಸುದ್ದಿಯ ನಡುವೆಯೇ ಶಿಕ್ಷಕರ ಕೊರತೆ ಕೂಡಾ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣವಾಗಬಹುದು.ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತದಲ್ಲಿ ಶಿಕ್ಷಕರನ್ನು ನೀಡಲಾಗುತ್ತಿದೆ.ಮಕ್ಕಳ ಸಂಖ್ಯೆ ಕಡಿಮೆ ಆದಂತೆ ಸರಕಾರ ಶಿಕ್ಷಕರ ಸಂಖ್ಯೆಯನ್ನೂ ಕಡಿಮೆ ಮಾಡುತ್ತಾ ಹೋಗುತ್ತದೆ.ಪ್ರತಿವರ್ಷ ಇದೇ ಪ್ರಕ್ರಿಯೆಗಳು ಮುಂದುವರಿಯುತ್ತಾ ಹೋದರೆ ಮಕ್ಕಳ ಜೊತೆಗೆ ಶಿಕ್ಷಕರ ಸಂಖ್ಯೆಯೂ ಕ್ಷೀಣಿಸುತ್ತಾ ಕೊನೆಗೆ ಸರಕಾರಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುವ ಆತಂಕವಿದೆ.ಉಭಯ ತಾಲೂಕಿನಲ್ಲಿ
344 ಶಿಕ್ಷಕರ ಕೊರತೆ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 180 ಪ್ರಾಥಮಿಕ ಹಾಗೂ 23 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 203 ಸರಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ 344 ಶಿಕ್ಷಕರ ಹುದ್ದೆಗಳು ಖಾಲಿಯಿದೆ.180 ಪ್ರಾಥಮಿಕ ಶಾಲೆಗಳಿಗೆ ಒಟ್ಟು 912 ಹುದ್ದೆಗಳು ಮಂಜೂರಾಗಿದ್ದು ಇವುಗಳಲ್ಲಿ 611 ಖಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.301 ಶಿಕ್ಷಕರ ಹುದ್ದೆ ಖಾಲಿಯಿದೆ.23 ಪ್ರೌಢಶಾಲೆಗಳಿಗೆ 201 ಶಿಕ್ಷಕರ ಹುದ್ದೆ ಮಂಜೂರಾಗಿದ್ದು 158 ಖಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು 43 ಹುದ್ದೆ ಖಾಲಿಯಿದೆ.ಕಳೆದ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 247 ಹಾಗೂ ಪ್ರೌಢಶಾಲೆಗಳಿಗೆ 43 ಅತಿಥಿ ಶಿಕ್ಷಕರ ನೇಮಕ ಮಾಡಲಾಗಿತ್ತು.
230 ಅತಿಥಿ ಶಿಕ್ಷಕರ ನೇಮಕಕ್ಕೆ ಬೇಡಿಕೆ
ಪುತ್ತೂರು, ಕಡಬ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ 230 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಬೇಡಿಕೆ ಸಲ್ಲಿಸಲಾಗಿದೆ.ಶೂನ್ಯ ಶಿಕ್ಷಕರಿರುವ ಶಾಲೆಗಳಲ್ಲಿ ಸಮೀಪದ ಶಾಲೆಗಳಿಂದ ಓರ್ವ ಶಿಕ್ಷಕರನ್ನು ನಿಯೋಜನೆಯಲ್ಲಿ ಹಾಗೂ 3 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು.ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮುಖಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು
-ಲೋಕೇಶ್ ಎಸ್.ಆರ್. ಕ್ಷೇತ್ರ ಶಿಕ್ಷಣಾಧಿಕಾರಿಗಳು