ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ – ಕುಸಿಯುವ ಭೀತಿಯಲ್ಲಿ ಪಾರ್ಪಳ ಸೇತುವೆ : ನೂತನ ಸೇತುವೆ ನಿರ್ಮಾಣಕ್ಕೆ ಸದಸ್ಯರ ಆಗ್ರಹ 

0

ನಿಡ್ಪಳ್ಳಿ : ಪಾಣಾಜೆ ಗ್ರಾಮದ ಕೊಂದಲ್ಕಡ್ಕ ಪಾರ್ಪಳ ಬೊಳ್ಳಿoಬಳ  ಕಲ್ಲಪದವು ಸಂಪರ್ಕ ರಸ್ತೆಯ  ಪಾರ್ಪಳ ಎಂಬಲ್ಲಿರುವ ಹಳೆ ಸೇತುವೆಯ ಎರಡೂ ಬದಿಯ ತಡೆಗೋಡೆ ಕುಸಿದು ನೇತಾಡುತ್ತಿದೆ. ಸೇತುವೆಯ ಪಿಲ್ಲರ್ ತಳಭಾಗ ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು. ಹೊಸ ಸೇತುವೆ ನಿರ್ಮಿಸಲು ಅನುದಾನ ಒದಗಿಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ  ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಇವರ ಅಧ್ಯಕ್ಷತೆ ಯಲ್ಲಿ ಮೆ.22 ರಂದು  ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 

ಪಂಚಾಯತ್ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಶಾಸಕರಿಗೆ ಬರೆಯುವುದು
ಪಾಣಾಜೆ ಗ್ರಾಮ ಪಂಚಾಯತ್ ಕಟ್ಟಡ ಸೋರುತ್ತಿದೆ. ನೀರು ಸೋರಿಕೆಯಿಂದ ಗೋಡೆಯಲ್ಲಿ ನೀರಿನ ಅಂಶ ಇರುವುದರಿಂದ ವಿದ್ಯುತ್ ಗೋಡೆಯಲ್ಲಿ ಹರಿಯುತ್ತಿದ್ದು ಶಾಕ್ ಹೊಡೆಯುತ್ತಿದೆ. ಇದರಿಂದ ಪಂಚಾಯತ್ ಗೆ ಬರುವ ಗ್ರಾಮಸ್ಥರಿಗೆ, ಸಿಬ್ಬಂದಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಬಹಳ ತೊಂದರೆ ಯಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಹೊಸ ಕಟ್ಟಡ ನಿರ್ಮಾಣ ಮಾಡಲು ಅನುದಾನದ ಕೊರತೆ ಇರುವುದರಿಂದ ಶಾಸಕರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ದೇವಸ್ಯ ಅಂಗನವಾಡಿ ಕೇಂದ್ರದಲ್ಲಿ ಇಲಿಗಳ ಕಾಟ
ದೇವಸ್ಯ ಅಂಗನವಾಡಿ ಕೇಂದ್ರದಲ್ಲಿ ಇಲಿಗಳ ಕಾಟ ಹೆಚ್ಚಿದೆ. ಆಹಾರ ವಸ್ತು ದಾಸ್ತಾನುಗಳನ್ನು ಹಾಳುಮಾಡುತ್ತಿದ್ದು ಬಹಳ ಸಮಸ್ಯೆಯಾಗಿದೆ. ಮಳೆಗಾಲವಾಗಿರುವುದರಿಂದ ಮಕ್ಕಳಿಗೆ ಊಟ ಮಾಡಲೂ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರು ಹೇಳಿದರು. ಮೇ. 24ರಂದು ಸಂಜೆ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕರು ಉದ್ಘಾಟನೆ ಮಾಡಲಿದ್ದಾರೆ ಎಂದು ಅಧ್ಯಕ್ಷರು ಉತ್ತರಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ಪಾರ್ಪಳ ಕಾಲನಿಯಲ್ಲಿ ಶಾಲೆಗೆ ಹೋಗದೆ ಇರುವ ಮಕ್ಕಳ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾವಿಸಿ ಚರ್ಚೆ ನಡೆಸಿದರು.

ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ನಾರಾಯಣ ನಾಯಕ್,ಮೋಹನ ನಾಯ್ಕ , ಅಬೂಬಕ್ಕರ್,ಸುಭಾಶ್ ರೈ, ಸುಲೋಚನಾ ,ವಿಮಲ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾರ ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here