ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುದ್ಧ ಎಳ್ಳೆಣ್ಣೆ ಸಮರ್ಪಣಾ ಸೌಲಭ್ಯಕ್ಕೆ ಚಾಲನೆ
ದೇವಸ್ಥಾನಕ್ಕೆ ಶುದ್ದತೆಯಲ್ಲಿ ಬರುವಾಗ ಶುದ್ಧ ಎಣ್ಣೆಯನ್ನೇ ಸಮರ್ಪಣೆ ಮಾಡಿ – ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಮತ್ತು ಭಕ್ತರ ಬೇಡಿಕೆಯಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶುದ್ಧ ಎಳ್ಳೆಣ್ಣೆಯ ಸಮರ್ಪಣಾ ಕೇಂದ್ರವನ್ನು ಮೇ.24ರಂದು ಉದ್ಘಾಟಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿಯವರು ಶ್ರೀ ದೇವರಿಗೆ ಶುದ್ದ ಎಳ್ಳೆಣ್ಣೆಯನ್ನು ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ಮೂಲಕ ಶ್ರೀ ದೇವರಿಗೆ ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಇತ್ತೀಚಿಗಿನ ದಿನಗಳಲ್ಲಿ ಎಳ್ಳೆಣ್ಣೆಯ ಕಾಲು ಭಾಗಕ್ಕೂ ಬೆಲೆ ಇಲ್ಲದ ಎಣ್ಣೆಗಳನ್ನು ದೇವಾಲಯಗಳು ಮತ್ತು ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಟ್ಟಿನಲ್ಲಿ ದೇವರಿಗೂ ಶುದ್ಧ ಎಣ್ಣೆಯಿಲ್ಲ ಮತ್ತೊಂದು ಕಡೆ ದೇವಾಲಯದ ಅರ್ಚಕರು ಹೊಗೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ದೇವಳದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲೂ ಅನಾದಿ ಕಾಲದಿಂದಲೂ ಗಾಣಿಗರು ಶ್ರೀ ದೇವರಿಗೆ ಶುದ್ದ ಎಳ್ಳೆಣ್ಣೆಯನ್ನು ಸಮರ್ಪಣೆಯ ಕುರಿತು ಪ್ರಸ್ತಾಪ ಆಗಿತ್ತು. ಜೊತೆಗೆ ಭಕ್ತರ ಬೇಡಿಕೆಯೂ ಇತ್ತು. ಈ ನಿಟ್ಟಿನಲ್ಲಿ ಪತ್ತನಾಜೆಯಲ್ಲಿ ಶ್ರೀ ದೇವರಿಗೆ ಶುದ್ದ ಎಳ್ಳೆಣ್ಣೆ ಸಮರ್ಪಣೆಗೆ ಚಾಲನೆ ನೀಡಲಾಗಿದೆ.
ದೇವಳದ ರಾಜಾಂಗಣದಲ್ಲಿ ಎಳ್ಳೆಣ್ಣೆ ವಿತರಣೆಯ ಪ್ರತ್ಯೇಕ ಕೌಂಟರ್‌ನಲ್ಲಿ ಎಳ್ಳೆಣ್ಣೆಯನ್ನು ಪಡೆದ ವ್ಯವಸ್ಥಾಪನಾ ಸಮಿತಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ಪ್ರಾರ್ಥನೆಯೊಂದಿಗೆ ದೀಪಗಳಿಗೆ ಎಣ್ಣೆ ಎರೆದು, ದೀಪ ಪ್ರಜ್ವಲಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ವಿನಯ ಸುವರ್ಣ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ ಶೆಟ್ಟಿ, ದಿನೇಶ್ ಪಿ.ವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಗಾನದ ಎಳ್ಳೆಣ್ಣೆಯ ವಿತರಕ ಮೋಹನ್ ಪಾಟಾಳಿ ಅವರು ಉಪಸ್ಥಿತರಿದ್ದರು.