ನೆಲ್ಯಾಡಿ: ಭಾರೀ ಮಳೆ-ಹೆದ್ದಾರಿಯಲ್ಲೇ ನಿಂತ ನೀರು, ವಾಹನ ಸವಾರರ ಪರದಾಟ

0

ನೆಲ್ಯಾಡಿ: ಮೇ.25ರಂದು ಬೆಳಗ್ಗಿನಿಂದ ಸಂಜೆ ತನಕ ಸುರಿದ ಭಾರೀ ಮಳೆ ನೆಲ್ಯಾಡಿ ಪೇಟೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ಅಂಗಡಿಗಳಿಗೂ ನೀರು ಹರಿದು ಬಂದಿದ್ದು ವರ್ತಕರು ಸಂಕಷ್ಟ ಎದುರಿಸುವಂತಾಗಿದೆ.


ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನೆಲ್ಯಾಡಿ ಪೇಟೆಯಲ್ಲಿ ಅಪೂರ್ಣ ಹಂತದಲ್ಲಿದ್ದು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ಪ್ರವಾಹದಂತೆ ರಸ್ತೆಯಲ್ಲೇ ಹರಿದು ತಗ್ಗುಪ್ರದೇಶಗಳಿಗೆ ನುಗ್ಗಿದೆ. ಸರ್ವೀಸ್ ರಸ್ತೆಯಲ್ಲಿ 1 ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಅಂಡರ್‌ಪಾಸ್‌ನಲ್ಲೂ ಮಳೆ ನೀರು ನಿಂತ ಪರಿಣಾಮ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ನೆಲ್ಯಾಡಿ ಪೇಟೆಯಲ್ಲಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಮೇಲ್ಸೇತುವೆಯಿಂದ ಧಾರಕಾರ ಮಳೆ ನೀರು ಸರ್ವೀಸ್ ರಸ್ತೆಗೆ ಹರಿದು ಬಂದಿದೆ. ಎರಡೂ ಬದಿಯ ಸರ್ವೀಸ್ ರಸ್ತೆಯ ಪಕ್ಕದಲ್ಲೇ ಚರಂಡಿ ವ್ಯವಸ್ಥೆ ಮಾಡಲಾಗಿದ್ದರೂ ಸರ್ವೀಸ್ ರಸ್ತೆಗಿಂತ ಕಾಂಕ್ರಿಟ್ ಚರಂಡಿ ಎತ್ತರವಾಗಿರುವುದರಿಂದ ನೀರು ಹರಿದು ಹೋಗದೇ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಅಂಗಡಿಗಳಿಗೂ ನೀರು:
ತಗ್ಗುಪ್ರದೇಶದಲ್ಲಿನ ಅಂಗಡಿಗಳಿಗೂ ನೀರು ನುಗ್ಗುವ ಹಂತಕ್ಕೆ ಬಂದಿದೆ. ಭಾರೀ ಮಳೆಗೆ ನೆಲ್ಯಾಡಿ ಪರಿಸರದಲ್ಲಿ ಪದೇ ಪದೇ ಜನರು, ವರ್ತಕರು ಈ ಸಮಸ್ಯೆ ಎದುರಿಸಬೇಕಾಗಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣ ಸ್ಪಂದಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ನೆಲ್ಯಾಡಿಯ ವರ್ತಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here